ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಜ್‌ಭವನ್ ಶಾಲೆಯ ಬೂತ್ ಸಂಖ್ಯೆ 326ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ ಚಲಾಯಿಸಿದ್ದಾರೆ. ಪಾಟ್ನಾದಲ್ಲಿ ಡಿಸಿಎಂ ಸುಶೀಲ್ ಮೋದಿ ಬೂತ್ ಸಂಖ್ಯೆ 49ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿದ್ದು ಗೋರಖ್‌ಪುರ್‌ನಲ್ಲಿ ಬೂತ್ ಸಂಖ್ಯೆ 246ರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹಕ್ಕು ಚಲಾವಣೆ ಮಾಡಿದ್ದಾರೆ.
ದೇಶದಲ್ಲಿ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯುತ್ತಿದ್ದು 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಪಟ್ನಾದಲ್ಲಿ ಮತ ಚಲಾಯಿಸಿದ ಸಿಎಂ ನಿತೀಶ್ ಕುಮಾರ್, “ಚುನಾವಣೆಯ ಎರಡು ಹಂತಗಳ ನಡುವೆ ಹೆಚ್ಚು ಅಂತರವಿರಬಾರದು ಅಂತ ಹೇಳಿದ್ದಾರೆ. “ಚುನಾವಣೆ ಬೇಗ ಮುಗಿಯಬೇಕು. ಹಾಗಿದ್ದಲ್ಲಿ ಮತದಾರರಿಗೆ ಅನುಕೂಲವಾಗುತ್ತದೆ. ಈಗ ಬಿಸಿ ಹೆಚ್ಚಾಗಿದೆ. ಇಷ್ಟು ದೀರ್ಘವಾಗಿಯೂ ಚುನಾವಣೆ ನಡೆಯಬಾರದು. ಎರಡು ಹಂತಗಳ ನಡುವೆ ಇಷ್ಟೊಂದು ಅಂತರವೂ ಇರಬಾರದು. ಈ ಸಂಬಂಧ ಒಂದು ನಿರ್ಧಾರ ತೆಗೆದುಕೊಳ್ಳಲು ಎಲ್ಲ ಪಕ್ಷಗಳ ಮುಖಂಡರಿಗೆ ನಾನು ಪತ್ರ ಬರೆಯುತ್ತೇನೆ” ಅಂತ ಹೇಳಿದ್ದಾರೆ.
“ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. ಗೋರಖ್ಪುರದಲ್ಲಿ ಮತ ಚಲಾಯಿಸುವ ಮೂಲಕ ನಾನೂ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿದ್ದೇನೆ. ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುವವರನ್ನೇ ಜನ ಮತ್ತೊಮ್ಮೆ ಆರಿಸುತ್ತಾರೆ” ಅಂತ ಹೇಳಿದ್ದಾರೆ.