ಮಂಗಳೂರು : ಬಿಜೆಪಿ ಎಸ್ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಅನ್ನೋ ಕಾಂಗ್ರೆಸ್ ನಾಯಕರ ಟೀಕೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗಲಿದೆ ಅನ್ನೋದು ಸುಳ್ಳು. ಹಾಗೇ ಆಗೋದಿದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು. ಕಳೆದ ಚುನಾವಣೆಯಲ್ಲಿ ಎಸ್ಡಿಪಿಐ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ಆದ್ರೂ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಏಳು ವಿಧಾನಸಭಾ ಕ್ಷೇತ್ರ ಗೆದ್ದಿತ್ತು. ಪ್ರಜಾಪ್ರಭುತ್ವದಲ್ಲಿ ಯಾರೇ ಚುನಾವಣೆಗೆ ಸ್ಪರ್ಧಿಸಬಹುದು ಎಂದರು.
ಕಳೆದ ವಿಧಾನಸಭೆಯಲ್ಲಿ ಮಾಡಿರುವ ಪೇಜ್ ಪ್ರಮುಖ್ ತಂತ್ರಗಾರಿಕೆಯನ್ನು ಈ ಬಾರಿಯ ಚುನಾವಣೆಗೂ ಅಳವಡಿಸಿಕೊಂಡಿದ್ದೇವೆ. ಮನೆ ಮನೆಗೆ ತೆರಳಿ ಮತಯಾಚಿಸಿದ್ದೇವೆ. ಜಿಲ್ಲೆಯಲ್ಲಿ ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆಗೊಂಡಿರುವುದಕ್ಕೆ ಕಳೆದ ಶನಿವಾರ ನಡೆದ ಮೋದಿ ರ್ಯಾಲಿಯೇ ಸಾಕ್ಷಿ. ಸುಮಾರು 600 ಮಂದಿ ಎನ್ಆರ್ಐಗಳು ಮತದಾನ ಮಾಡಲೆಂದು ತವರಿಗೆ ಬಂದಿದ್ದಾರೆ ಎಂದರು.