Friday, March 29, 2024

5 ವರ್ಷದ ಸಂಪಾದನೆಯಲ್ಲಿ 6ಕೋಟಿ ರೂ. ನಷ್ಟ – ಈಗ ಮಧು ಬಂಗಾರಪ್ಪ ಆಸ್ತಿ ಎಷ್ಟಿದೆ..?

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ನಿನ್ನೆ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.  5 ವರ್ಷದ ಸಂಪಾದನೆಯಲ್ಲಿ ಅವರು 6 ಕೋಟಿ ರೂ. ನಷ್ಟದಲ್ಲಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ಬಿ ಫಾರಂ ಜೊತೆಗೆ ತಮ್ಮ ಆಸ್ತಿ ಘೋಷಿಸಿಕೊಂಡಿರುವ ಮಧು ಬಂಗಾರಪ್ಪ ಅವರು ತಮ್ಮ ಕುಟುಂಬವು ಒಟ್ಟು 61.58 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರಲ್ಲಿದ್ದ 67 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ 6 ಕೋಟಿ ರೂ. ಮೌಲ್ಯದ ಆಸ್ತಿ ಕರಗಿದೆ. ಇದರ ಜತೆಗೆ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿ ಸಾಲದ ಮೊತ್ತ 15 ರಿಂದ 17 ಕೋಟಿ ರೂ. ಗೆ ಏರಿಕೆಯಾಗಿದೆ. ಕೆ.ಎಸ್.ಐ.ಐ.ಡಿ.ಸಿ. ಯಲ್ಲಿ 43.61 ಲಕ್ಷ  ರೂ. ಸಾಲದ ವ್ಯಾಜ್ಯ ಬಾಕಿ ಇದೆ.  ಇನ್ನು 2018-19 ನೇ ಸಾಲಿನಲ್ಲಿ ಸಲ್ಲಿಸಿದ ಆದಾಯ ತೆರಿಗೆ ಪ್ರಕಾರ ಇವರ ಕುಟುಂಬದ ವಾರ್ಷಿಕ ಆದಾಯ 92.17 ಲಕ್ಷ ರೂ. ಇದೆ.

ಮಧು ಮತ್ತು ಅವರ ಪತ್ನಿ ಅನಿತಾ ಅವರು 19.88 ಕೋಟಿ ರೂ. ಮೌಲ್ಯದ ಚರಾಸ್ತಿ, ಮಧು ಮತ್ತು ಅವರ ಪುತ್ರ ಸೂರ್ಯ ಅವರು 41.58 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಅನಿತಾ ಮಧು ಬಂಗಾರಪ್ಪ ಅವರ ಹೆಸರಲ್ಲಿ ಸ್ಥಿರಾಸ್ತಿ ಇಲ್ಲ. ಬೆಂಗಳೂರು 25 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಪ್ರಕರಣವೊಂದನ್ನು ಮಧುಬಂಗಾರಪ್ಪ ಅವರು ಎದುರಿಸುತ್ತಿದ್ದಾರೆ.  ಅದರಂತೆ, ಕುಟುಂಬದ ಬಳಿ 56 ಲಕ್ಷ ರೂ. ನಗದು, ಇತ್ತೀಚೆಗಷ್ಟೇ ಖರೀದಿಸಿದ ಹೊಸ ಕಾರು ಸೇರಿ ಎರಡು ಕಾರುಗಳು, 2.15 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳಿವೆ. ಮಧು ಅವರು ತಮ್ಮದೇ ಒಡೆತನದ ಆಕಾಶ್ ಆಡಿಯೊಗೆ 7.45 ಕೋಟಿ ರೂ. ಅಡ್ವಾನ್ಸ್ ನೀಡಿದ್ದರೆ, ಅವರ ಪತ್ನಿ ಅನಿತಾ ಅವರು ಪತಿಗೆ 8.75 ಕೋಟಿ ರೂ. ಅಡ್ವಾನ್ಸ್ ನೀಡಿದ್ದಾರೆ.  ಸೊರಬ ತಾಲೂಕು ತಲಗಡ್ಡೆಯಲ್ಲಿ 50 ಎಕರೆ, ಕೋಡಿಕೊಪ್ಪದಲ್ಲಿ 59 ಎಕರೆ, ಕುಬಟೂರಲ್ಲಿ 6 ಎಕರೆ, ಲಕ್ಕವಳ್ಳಿಯಲ್ಲಿ 35 ಎಕರೆ ಮತ್ತು ದೇವಸ್ಥಾನದ ಹಕ್ಕಲಲ್ಲಿ 2 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಈ ಎಲ್ಲ ಆಸ್ತಿಗಳು ಮಧು ಬಂಗಾರಪ್ಪ ಮತ್ತು ಅವರ ಪುತ್ರ ಸೂರ್ಯ ಹೆಸರಲ್ಲಿವೆ. ಬೆಂಗಳೂರು ಕುಮಾರಪಾರ್ಕ್‌ನಲ್ಲಿ 6 ಕೋಟಿ ರೂ. ಮೌಲ್ಯದ ನಿವೇಶನ, ಆರ್.ಎಂ.ವಿ ಎಕ್ಸ್ಟೆನ್ಷನ್, ಶಿವಮೊಗ್ಗ ಚನ್ನಪ್ಪ ಬಡಾವಣೆ, ಸೊರಬ ತಾಲೂಕು ಕುಬಟೂರಲ್ಲಿ ಮನೆಗಳನ್ನು  ಮಧು ಹೊಂದಿದ್ದಾರೆ.

ಮಧು ಬಂಗಾರಪ್ಪರ ಆಸ್ತಿ ವ್ಯತ್ಯಾಸ :-

ಸ್ಥಿರಾಸ್ತಿ :-

2014 – 41.70 ಕೋಟಿ ರೂ.

2018 – 41.58 ಕೋಟಿ ರೂ.

ಚರಾಸ್ತಿ :-

2014 – 20.38 ಕೋಟಿ ರೂ.

2019 – 19.88 ಕೋಟಿ ರೂ.

ಸಾಲ :-

2014 ರಲ್ಲಿ – 15 ಕೋಟಿ ರೂ.

2019 ರಲ್ಲಿ – 17 ಕೋಟಿ ರೂ.

RELATED ARTICLES

Related Articles

TRENDING ARTICLES