ಶಿವಮೊಗ್ಗ : ಐಟಿ ದಾಳಿ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಾಯಕರು ಅಸಭ್ಯವಾಗಿ ವರ್ತಿಸಿದ್ದಾರೆ. ಗಡಿಯಲ್ಲಿ ನಡೆದ ಸರ್ಜಿಕಲ್ ದಾಳಿ ಯೋಧರ ದಾಳಿ ಎನ್ನುತ್ತಾರೆ. ಎ-ಸ್ಯಾಟ್ ದಾಳಿಯನ್ನ ವಿಜ್ಞಾನಿಗಳ ದಾಳಿ ಅಂತ ಕರೀತಾರೆ ಎಂದು ಶಾಸಕ ಕುಮಾರ ಬಂಗಾರಪ್ಪ ‘ಮೈತ್ರಿ’ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ – ಜೆಡಿಎಸ್ನವರು ಐಟಿ ದಾಳಿಗೆ ಮಾತ್ರ ಯಾಕೆ ಮೋದಿಯವರ ದಾಳಿ ಎಂದು ಹೇಳುತ್ತಿದ್ದಾರೆ. ದೇಶದಲ್ಲಿರುವ ವ್ಯವಸ್ಥೆಗಳ ಕುರಿತು ರಾಜ್ಯ ಸರಕಾರದ ಸಿಎಂ, ಸಚಿವರು, ಮುಖಂಡರಿಗೆ ಮನವರಿಕೆ ಆಗುತ್ತಿಲ್ಲ. ಮಂಡ್ಯ, ಹಾಸನ, ತುಮಕೂರು, ಈ ಮೂರು ಕ್ಷೇತ್ರದಲ್ಲಿ, ಅವರಿಗೆ ಭಯ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಸುಮಲತಾ ಹೆಸರು ಕೇಳಿದ್ರೆ ಅವರಿಗೆ ನಿದ್ದೆ ಬರುತ್ತಿಲ್ಲ. ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು, ದೇವೇಗೌಡರು ಮತ್ತು ಅವರ ಕುಟುಂಬದವರು ಮುಂದಾಗಿದ್ದಾರೆ. ಮಂಡ್ಯದಲ್ಲಿ 3 ಜನ ಸುಮಲತಾರನ್ನು ಚುನಾವಣೆಯಲ್ಲಿ ಸ್ಪರ್ಧೆಗಿಳಿಸಿ, ಅಸಹ್ಯ ಚುನಾವಣೆ ನಡೆಸಲಾಗುತ್ತಿದ್ದು, ಸುಮಲತಾರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ತಮ್ಮ ಸಹೋದರ ಹಾಗೂ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧವೂ ಕೂಡ ಆಕ್ರೋಶ ವ್ಯಕ್ತಪಡಿಸಿದ ಕುಮಾರ್ ಬಂಗಾರಪ್ಪ, ‘ಮಧು ಬಂಗಾರಪ್ಪ, ಬಗರ್ ಹುಕುಂ ವಿಚಾರದಲ್ಲಿ ನೇರವಾಗಿ ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.