ಬೆಂಗಳೂರು : ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಐಟಿ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಜೆಡಿಎಸ್ ನಾಯಕರ ಮನೆ ಮೇಲೆ ನಡೆದ ದಾಳಿ ಖಂಡಿಸಿ ಐಟಿ ಕಚೇರಿ ಬಳಿ ‘ಮೈತ್ರಿ’ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ, ಐಟಿ ಅಧಿಕಾರಿಗಳ ವಿರುದ್ಧ ವಾಕ್ಸಮರ ನಡೆಸಿದರು. ‘ನೀವೇನು ದೇವಲೋಕದಿಂದ ಬಂದಿದ್ದೀರಾ? ನೀವೇನು ಪ್ರಾಮಾಣಿಕರಾ? ಯಾರ ಹತ್ತಿರ ಎಷ್ಟೆಲ್ಲಾ ವಸೂಲಿ ಮಾಡ್ತೀರಿ ಗೊತ್ತಿಲ್ವಾ? ಏನೆಲ್ಲಾ ಸೆಟಲ್ ಮಾಡ್ತೀರಿ ಅಂತಾ ಗೊತ್ತಿಲ್ವಾ’ ಎಂದರು. ಐಟಿ ಚೀಫ್ ಬಾಲಕೃಷ್ಣ ವಿರುದ್ಧವೂ ಆರೋಪ ಮಾಡಿದ ಕುಮಾರಸ್ವಾಮಿ, ‘ಮುಂಬೈನಲ್ಲಿ ನೀವೆಷ್ಟು ಫ್ಲಾಟ್ ಕೊಂಡಿದ್ದೀರಿ ಅಂತಾ ಗೊತ್ತಿಲ್ವಾ? ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುವುದನ್ನು ಬಿಡಿ’ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಬಂದ ಮೇಲೆ ಅಧಿಕಾರ ದುರ್ಬಳಕೆ ಆಗುತ್ತಿದೆ. ಕೇಂದ್ರದ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದೆ . ಸಂವಿಧಾನ ಶಿಲ್ಪಿ ಅಂಬೇಡ್ಕರ್ ಆದರ್ಶಕ್ಕೆ ಭಂಗ ತಂದಿದೆ ಎಂದು ಕಿಡಿಕಾರಿದರು.
ಶಾಸಕರ ಖರೀದಿಗೆ ಕೋಟಿ ಕೋಟಿ ಆಫರ್ ಕೊಟ್ಟಿದ್ದಾರೆ .ಶಾಸಕರನ್ನು ಖರೀದಿ ವಸ್ತುಗಳನ್ನಾಗಿ ಮಾಡಲಾಗಿದೆ .ಅಂಥವರ ಮೇಲೆ ಐಟಿ ಗಮನಕ್ಕೆ ಬಂದಿಲ್ವಾ? ಎಷ್ಟು ಬಿಜೆಪಿ ನಾಯಕರ ಮನೆ ಮೇಲೆ ದಾಳಿ ಮಾಡಿದ್ದೀರಿ? ಅಮಿತ್ ಶಾ ಕಳಿಸ್ತಾನೆ ದಾಳಿ ಮಾಡೋಕೆ ಲೀಸ್ಟ್? ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಧ್ಯಾಹ್ನ ಭಾಷಣ ಮಾಡ್ತಾರೆ. ರಾತ್ರಿ ವೇಳೆಗೆ ಅದೇ ರೀತಿ ಐಟಿ ದಾಳಿಯೂ ನಡೆಯುತ್ತೆ .ಇದಕ್ಕೆಲ್ಲಾ ಹೆದರುವುದಿಲ್ಲ ನಾವು ಎಂದು ಸಿಎಂ ಹರಿಹಾಯ್ದರು.
ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡೋದನ್ನು ಬಿಡಿ : ಐಟಿ ಅಧಿಕಾರಿಗಳ ವಿರುದ್ಧ ಸಿಎಂ ವಾಗ್ದಾಳಿ
TRENDING ARTICLES