Friday, July 19, 2024

ಬಿ.ವೈ ರಾಘವೇಂದ್ರ ಅವರ ಒಟ್ಟು ಆಸ್ತಿ ಎಷ್ಟು?

ಶಿವಮೊಗ್ಗ : ಲೋಕಸಭಾ ರಣಕಣ ಕಾವೇರುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವೈ ರಾಘವೇಂದ್ರ ಅವರು ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ. ಇಂದು ಅವರು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಅವರು ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಅದರ ವಿವರಗಳನ್ನ ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ. ಒಟ್ಟು ಚರಾಸ್ತಿ ಮೌಲ್ಯ ಸುಮಾರು 30 ಲಕ್ಷ ಘೋಷಿಸಿಕೊಂಡಿದ್ದು, ಸ್ಥಿರಾಸ್ತಿ ಮೌಲ್ಯ ಒಟ್ಟು 33 ವರೆ ಕೋಟಿ ರೂ. ಘೋಷಿಸಿಕೊಂಡಿದ್ದಾರೆ. ವಾರ್ಷಿಕ ಆದಾಯ 1 ಕೋಟಿ 12 ಲಕ್ಷ ಎಂದು ತಿಳಿಸಿದ್ದಾರೆ.
ರಾಘವೇಂದ್ರ ಅವರು ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ, ತಮ್ಮ ಪತ್ನಿ ತೇಜಸ್ವಿನಿ ಅವರಿಗೆ ಸುಮಾರು 29 ಲಕ್ಷ, ಸಹೋದರ ಬಿ.ವೈ. ವಿಜಯೇಂದ್ರ ಅವರಿಗೆ ಸುಮಾರು 20 ಲಕ್ಷ ಸಾಲ ನೀಡಿದ್ದಾರೆ. ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ ಅವರ ಬಳಿ ಬೆಳ್ಳಿ – ಬಂಗಾರದ ವಸ್ತುಗಳೇ ಇಲ್ಲ. ಎಲ್ಲವೂ, ಪತಿಯ ಹೆಸರಿನಲ್ಲಿಯೇ ಇವೆ. 72 ಲಕ್ಷ ರೂ. ಮೌಲ್ಯದ ಬಂಗಾರ, 76 ಲಕ್ಷ ಮೌಲ್ಯ ಬೆಳ್ಳಿ ವಸ್ತುಗಳು ಇವೆ. ಆದರೆ ಪತಿಗಿಂತ ಪತ್ನಿ ತೇಜಸ್ವಿನಿ ಅವರ ಸಾಲವೇ ಹೆಚ್ಚು. ರಾಘವೇಂದ್ರ ಅವರು 69,24,700 ರೂ. ಸಾಲವಿದ್ದರೆ ಅವರ ಪತ್ನಿ, ಅವರಿಗಿಂತ ಹೆಚ್ಚು 72,25,947 ರೂ. ಸಾಲ ಮಾಡಿದ್ದಾರೆ. ಇನ್ನು, ರಾಘವೇಂದ್ರ ಅವರ ಬಳಿ ಫಾರ್ಚುನರ್, ಟೊಯೋಟ ಇನ್ನೋವಾ, ಅಂಬಾಸಿಡರ್, ಸ್ಕೋಡಾ ಕಾರುಗಳು, ಒಂದು ಟ್ರ್ಯಾಕ್ಟರ್, ಎರಡು ಬೈಕ್ ಇವೆ.
ಬಿ.ವೈ. ರಾಘವೇಂದ್ರ ಅವರು ಒಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದಾಖಲಾದ ಪ್ರಕರಣವು, ನಂತರ ರಾಜ್ಯ ಹೈಕೋರ್ಟ್ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತೀರ್ಪು ಕಾಯ್ದಿರಿಸಿದ್ದು, ಇದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಐಟಿ ಇಲಾಖೆ ಆಯುಕ್ತರ ಎದುರು ರಾಘವೇಂದ್ರ ಅವರ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ 2 ಪ್ರಕರಣಗಳಿವೆ. 

*ಕೃಷಿ ಭೂಮಿ ಮಾರುಕಟ್ಟೆ ಮೌಲ್ಯ ರೂ. 89,80,000*
*ಕೃಷಿಯೇತರ ಭೂಮಿ ಒಟ್ಟು ಮೌಲ್ಯ ರೂ. 24,87,51,194*
*ವಾಣಿಜ್ಯ ಕಟ್ಟಡ ಒಟ್ಟು ಮೌಲ್ಯ ರೂ. 3,62,95,724*
*ವಸತಿ ಕಟ್ಟಡಗಳ ಒಟ್ಟು ಮೌಲ್ಯ ರೂ. 42,89,33,860*

ಚನ್ನೇನಹಳ್ಳಿ, ಬಂಡಿಬೈರನಹಳ್ಳಿಯಲ್ಲಿ ಕೃಷಿ ಜಮೀನು ಇದೆ. ಶಿವಮೊಗ್ಗದ ಹರಕೆರೆ, ಗಾಡಿಕೊಪ್ಪ, ಊರಗಡೂರು, ಗೋಪಾಳದ ಸ್ವಾಮಿ ವಿವೇಕಾನಂದ ನಗರ, ಕಾಶಿಪುರದಲ್ಲಿ ಕೃಷಿಯೇತರ ಭೂಮಿ ಇದೆ. ಶಿಕಾರಿಪುರ ಮಾಳೇರಕೇರಿಯಲ್ಲಿ ನಾಲ್ಕು ನಿವೇಶನ, ನಂದಿಹಳ್ಳಿಯಲ್ಲಿ ನಿವೇಶನವಿದೆ. ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ ಒಂದು ಬೃಹತ್ ವಾಣಿಜ್ಯ ಕಟ್ಟಡ, ಶಿಕಾರಿಪುರದ ದೇವರಾಜ ಅರಸ್ ನಗರದಲ್ಲಿ ಒಂದು ವಾಣಿಜ್ಯ ಕಟ್ಟಡವಿದೆ. ಶಿಕಾರಿಪುರದ ಮಾಳೇರಕೇರಿಯಲ್ಲಿ, ಶಿವಮೊಗ್ಗದ ವಿನೋಬ ನಗರದಲ್ಲಿ, ಬೆಂಗಳೂರಿನ ಮಾನ್ಯತಾ ರೆಸಿಡೆನ್ಸಿಯಲ್ಲಿ ಮನೆಗಳಿವೆ. ತೇಜಸ್ವಿನಿ ಅವರ ಹೆಸರಿನಲ್ಲಿ ಅರಕೆರೆ ಗ್ರಾಮದ್ಲಲಿ 8 ಎಕರೆ, ಗೋಪಾಳದಲ್ಲಿ 3 ಎಕರೆ ಕೃಷಿಯೇತರ ಭೂಮಿ ಇದೆ. ಶಿಕಾರಿಪುರದಲ್ಲಿ ಒಂದು ಮನೆ ಇದೆ. ಹಲವು ಉದ್ಯಮಗಳಲ್ಲಿ ಇವರ ಕುಟುಂಬದ ಶೇರು ಬಂಡವಾಳವಿದೆ. ದವಳಗಿರಿ ಪಾಪರ್ಟೀಸ್, ಸಹ್ಯಾದ್ರಿ ಹೆಲ್ತ್​ಕೇರ್, ಫ್ಲುಯಿಟ್ ಪವರ್ ಟೆಕ್ನಾಲಜಿ, ಭದ್ರಾ ಕಾಂಕ್ರಿಟ್ ಪ್ರಾಡಕ್ಟ್ಸ್, ಭಗತ್ ಹೋಮ್ಸ್ ಪ್ರೈ.ಲಿ., ಆದಿತ್ಯ ಕಾಂಕ್ರಿಟ್ ಪ್ರಾಡಕ್ಟ್ಸ್, ಇಂದಿವರ್ ಕುಟೀರ್ ಪ್ರೈ.ಲಿ., ಸುಖಾನ್ ಟ್ರೇಡರ್ಸ್ನಲ್ಲಿ ಬಂಡವಾಳ ತೊಡಗಿಸಿದ್ದಾರೆ. ಆದರೆ ಹೆಚ್ಚು ಬಂಡವಾಳ ಇರುವುದು ಮೈತ್ರಿ ಮೋಟಾರ್ಸ್ನಲ್ಲಿ. ಹಲವು ಸಂಸ್ಥೆಗಳಿಗೆ ಮುಂಗಡವನ್ನೂ ರಾಘವೇಂದ್ರ ಅವರು ನೀಡಿದ್ದಾರೆ. ಫ್ಲುಯಿಡ್ ಪವರ್ ಟೆಕ್ನಾಲಜೀಸ್, ದವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆಗಳಲ್ಲಿ ರಾಘವೇಂದ್ರ ಮುಂಗಡ ಹಣ ನೀಡಿದ್ದಾರೆ.

RELATED ARTICLES

Related Articles

TRENDING ARTICLES