Monday, December 9, 2024

ಐಪಿಎಲ್​​ ಹಂಗಾಮ : ಸೂಪರ್​​ ಸಂಡೆ, ಡಬಲ್​ ಧಮಾಕ ..!

ಕ್ರಿಕೆಟ್​​ ಅಭಿಮಾನಿಗಳಿಂದು ಡಬಲ್​ ಧಮಾಕಾ, ಹೊಡಿಬಡಿ ಆಟದ ರೋಮಾಂಚಕ ಟೂರ್ನಿಯ 2ನೇ ದಿನ ಹೈವೋಲ್ಟೆಜ್​ ಹಣಾಹಣಿಗೆ ಸಾಕ್ಷಿಯಾಗಲಿದೆ. ಒಂದೆಡೆ ಕೊಲ್ಕತ್ತಾ ನೈಟ್​​​ ರೈಡರ್ಸ್​​ ಹಾಗೂ ಸನ್​ರೈಸರ್ಸ್​​​ ಹೈದ್ರಾಬಾದ್​​ ಕೋಲ್ಕತ್ತಾದ ಈಡನ್ ಗಾರ್ಡನ್​ ಅಂಗಳದಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಐಪಿಎಲ್​ ಟೂರ್ನಿಯ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್​​, ಹೆಸರು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿರುವ ಡೆಲ್ಲಿ ವಿರುದ್ಧ ಐಪಿಎಲ್​ ಅಭಿಯಾನ ಆರಂಭಿಸಲಿವೆ.
ಕೆಕೆಆರ್​ VS ಎಸ್​ಆರ್​ಹೆಚ್​
ಐಪಿಎಲ್​ 12ನೇ ಆವೃತ್ತಿಯ 2ನೇ ಸಮರಕ್ಕೆ ಈಡನ್​ ಗಾರ್ಡನ್​ ಅಂಗಳ ಸಜ್ಜಾಗಿದೆ. ಕಳೆದ ಆವೃತ್ತಿಯಲ್ಲಿ ನಾಯಕತ್ವ ವಹಿಸಿಕೊಂಡು ಯಶಸ್ಸು ಕಂಡಿರುವ ದಿನೇಶ್ ಕಾರ್ತಿಕ್​ , ಈ ಆವೃತ್ತಿಯಲ್ಲೂ ಮಿಂಚುವ ಭರವಸೆಯಲ್ಲಿದ್ದಾರೆ. ಆದ್ರೆ, ಡೇವಿಡ್​​ ವಾರ್ನರ್​​ ಹಾಗೂ ಕೇನ್​​ ವಿಲಿಯಮ್​ಸನ್​ರನ್ನ ಹೊರತುಪಡಿಸಿ ಆರೇಂಜ್​ ಆರ್ಮಿಯನ್ನ ವೇಗಿ ಭುವನೇಶ್ವರ್​ ಕುಮಾರ್​ ಮುನ್ನಡೆಸುವ ಸಾಧ್ಯತೆ ಇದೆ.ಈವರೆಗೆ ಸನ್​ರೈಸರ್ಸ್​​ ಹೈದ್ರಾಬಾದ್​ ಹಾಗೂ ಕೋಲ್ಕತ್ತಾ ನೈಟ್​​ ರೈಡರ್ಸ್​​ ಒಟ್ಟು15 ಬಾರಿ ಮುಖಾಮುಖಿಯಾಗಿದ್ದು 9 ಪಂದ್ಯಗಳಲ್ಲಿ ಕೊಲ್ಕತ್ತಾ ಜಯಗಳಿಸಿದ್ರೆ, 6 ಪಂದ್ಯಗಳಲ್ಲಿ SRH ಗೆಲುವಿನ ನಗೆ ಬೀರಿದೆ. ​
ಸುನೀಲ್​ ನರೈನ್​, ಕ್ರೀಸ್​​ ಲೀನ್​ ಕೆಕೆಆರ್​​ನ ಪ್ರಮುಖ ಆಕರ್ಷಣೆಯಾದ್ರೆ, ಕನ್ನಡಿಗ ರಾಬಿನ್​ ಉತ್ತಪ್ಪ, ಯುವ ಆಟಗಾರ ಶುಭ್​ಮನ್​ ಗಿಲ್​, ನಿತೀಶ್​​ ರಾಣಾ, ನಾಯಕ ದಿನೇಶ್​ ಕಾರ್ತಿಕ್​ ತಂಡದ ಬ್ಯಾಟಿಂಗ್​ ಶಕ್ತಿಯಾಗಿದ್ದಾರೆ. ಇನ್ನು ಕುಲ್​ದೀಪ್​ ಯಾದವ್​, ಪಿಯೂಷ್​ ಚಾವ್ಲಾ, ಸುನೀಲ್​ ನರೈನ್​ ಸ್ಪಿನ್​​​ ಬಲವಾಗಿದ್ರೆ, ಕನ್ನಡಿಗ ಪ್ರಸಿದ್ಧ್​​ ಕೃಷ್ಣ, ಲ್ಯೂಕ್​ ಫರ್ಗ್ಯುಸನ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದಾದ ವೇಗಿಗಳಾಗಿದ್ದಾರೆ. ಆದ್ರೆ ಪ್ರಮುಖ ಆಲ್​ರೌಂಡರ್​​​ ಆಂಡ್ರೆ ರಸೇಲ್​ ಇಂಜುರಿಗೆ ತುತ್ತಾಗಿರುವುದು ತಂಡಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯನ್ನ ತಂದಿಟ್ಟಿದೆ.
ಸನ್​ರೈಸರ್ಸ್​​​ ಹೈದ್ರಾಬಾದ್​ ತಂಡವೂ ಸಮತೋಲದಿಂದ ಕೂಡಿದೆ. ನಿಷೇಧ ಶಿಕ್ಷೆ ಮುಗಿಸಿ ಕಮ್​ಬ್ಯಾಕ್​ ಮಾಡಿರುವ ಡೇವಿಡ್​ ವಾರ್ನರ್​, ಕೇನ್​ ವಿಲಿಯಮ್​​ಸನ್​ ತಂಡಕ್ಕೆ ಡ್ಯಾಶಿಂಗ್​ ಒಪನಿಂಗ್​ ನೀಡಬಲ್ಲವರಾದ್ರೆ, ಮನೀಷ್​​ ಪಾಂಡೆ, ವಿಜಯ್​ ಶಂಕರ್​​, ಶಕೀಬ್​ ಆಲ್​ ಹಸನ್​, ಯೂಸೂಫ್​ ಪಠಾಣ್​ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಅಪಘಾನಿಸ್ತಾನದ ರಶೀದ್​ ಖಾನ್​ ಸ್ಪಿನ್​ ಮೋಡಿ ಮುಂದುವರೆಸುವ ಭರವಸೆಯಲ್ಲಿದ್ರೆ, ಭುವನೇಶ್ವರ್​ ಕುಮಾರ್​​, ಸಿದ್ಧಾರ್ಥ್​​​ ಕೌಲ್​, ಖಲೀಲ್​ ಅಹಮದ್​, ಕೆಕೆಆರ್​​ ಬ್ಯಾಟ್ಸ್​​​ಮನ್​ಗಳನ್ನ ತವರಿನಲ್ಲಿ ಕಾಡಲು ಸಜ್ಜಾಗಿದ್ದಾರೆ.
ವಾಂಖೆಡೆ ಅಂಗಳದಲ್ಲಿ ಮುಂಬೈ, ಡೆಲ್ಲಿ ಕದನ
12ನೇ ಆವೃತ್ತಿಯ 3ನೇ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್​​ ಬಳಗ ಇಂದಿನ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಇತ್ತ ತಂಡದ ಹೆಸರನ್ನೇ ಬದಲಾಯಿಸಿಕೊಂಡಿರುವ ಈ ಆವೃತ್ತಿಯಲ್ಲಿ ಕಣಕ್ಕಿಳಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್​ ಬಳಗ ಅದೃಷ್ಟ ಪರೀಕ್ಷೆಗೆ ತಯಾರಾಗಿದೆ.
ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡೂ ವಿಭಾಗಗಳಲ್ಲಿ ಉಭಯ ತಂಡಗಳು ಬಲಾಢ್ಯವಾಗಿವೆ. ಎರಡೂ ತಂಡಗಳಲ್ಲೂ ಹಾರ್ಡ್​​ ಹಿಟ್ಟಿಂಗ್​ ಬ್ಯಾಟ್ಸ್​​ಮನ್​ಗಳಿದ್ದಾರೆ. ರೋಹಿತ್​​ ಶರ್ಮಾ, ಯುವರಾಜ್​ ಸಿಂಗ್​, ಕೀರನ್​ ಪೊಲಾರ್ಡ್​​, ಇವಿನ್​ ಲೇವಿಸ್, ಹಾರ್ದಿಕ್​ ಪಾಂಡ್ಯ​ ಮುಂಬೈ ಬಳಗದ ಬ್ಯಾಟಿಂಗ್​ ಶಕ್ತಿಗಳಾಗಿದ್ರೆ, ಶಿಖರ್​ ಧವನ್​, ಶ್ರೇಯಸ್​​ ಅಯ್ಯರ್​, ಪೃಥ್ವಿ ಷಾ, ರಿಷಭ್​ ಪಂತ್, ಕಾಲಿನ್​ ಮುನ್ರೊ​ ಡೆಲ್ಲಿ ಬಳಗದ ಪ್ರಮುಖ ಬ್ಯಾಟ್ಸ್​​ಮನ್​ಗಳಾಗಿದ್ದಾರೆ.
ಬೌಲಿಂಗ್​ನಲ್ಲೂ ಎರಡೂ ತಂಡಗಳು ಶ್ರೇಷ್ಠ ಆಟಗಾರರನ್ನ ಒಳಗೊಂಡಿದ್ದಾರೆ. ಲಸಿತ್​ ಮಲಿಂಗ, ಮಿಚೆಲ್ ಮೆಕ್ಲೆನಾಘನ್, ಜಸ್ಪ್ರೀತ್​​ ಬೂಮ್ರಾ, ಎಂ​ಐ ಬಳಗದ ಬೌಲಿಂಗ್​ ಶಕ್ತಿಗಳಾದ್ರೆ, ಕ್ರಿಸ್​ ಮೋರಿಸ್​, ಕಗಿಸೋ ರಬಾಡ, ಟ್ರೆಂಟ್​ ಬೋಲ್ಟ್​, ಇಶಾಂತ್​​ ಶರ್ಮ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ​ಪ್ರಮುಖ ಬೌಲರ್​ಗಳಾಗಿದ್ದಾರೆ. ಈ ಹಿಂದೆ ಒಟ್ಟು 22 ಬಾರಿ ಡೆಲ್ಲಿ ಡೇರ್​​ಡೆವಿಲ್ಸ್​ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿ ತಲಾ 11 ಪಂದ್ಯಗಳನ್ನ ಜಯಿಸಿವೆ. ಇದೀಗ ಡೆಲ್ಲಿ ತಂಡ ನೂತನ ಹೆಸರಿನೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ.
ಒಂದೆಡೆ ಕೋಲ್ಕತ್ತಾ-ಹೈದ್ರಾಬಾದ್​​ ನಡುವಿನ ಜಟಾಪಟಿಯಾದ್ರೆ, ಇನ್ನೊಂದೆಡೆ ಡೆಲ್ಲಿ-ಮುಂಬೈ ನಡುವಿನ ಹೋರಾಟ. 2 ಪಂದ್ಯಗಳಲ್ಲೂ ಇತ್ತಂಡಗಳು ಸಮಬಲವನ್ನ ಹೊಂದಿವೆ. ತವರಿನಂಗಳದಲ್ಲಿ ಗೆಲ್ಲುವ ಭರವಸೆಯಲ್ಲಿ ಕೆಕೆಆರ್​​, ಮುಂಬೈ ತಂಡಗಳಿದ್ರೆ, 12ನೇ ಆವೃತ್ತಿಯನ್ನ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ಹೈದ್ರಾಬಾದ್​​, ಡೆಲ್ಲಿ ತಂಡಗಳಿವೆ. ಇಂತಹ ರೋಚಕ ಹೋರಾಟದಲ್ಲಿ ಗೆಲುವು ಯಾರಿಗೆ ಅನ್ನೋದನ್ನ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES