Thursday, March 28, 2024

ಗ್ರೌಂಡ್​ ರಿಪೋರ್ಟ್​ : ಮಂಡ್ಯದಲ್ಲಿ ಸ್ಟಾರ್​ವಾರ್ – ರಣಕಲಿಗಳ ಬಲಾಬಲವೇನು?

ಗ್ರೌಂಡ್​ ರಿಪೋರ್ಟ್ – 1 : ಮಂಡ್ಯ ಲೋಕಸಭಾ ಕ್ಷೇತ್ರ

ಮಂಡ್ಯ : ಲೋಕಸಭಾ ಚುನಾವಣೆ ಡೇಟ್​ ಅನೌನ್ಸ್ ಆಗುವ ಮುನ್ನವೇ ಚುನಾವಣಾ ಕಾವೇರಿದ್ದ ಕ್ಷೇತ್ರ ಕಾವೇರಿ ಸೀಮೆ ಮಂಡ್ಯ. ಆರಂಭದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್​ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದರೆ, ದೋಸ್ತಿ ಲೆಕ್ಕಾಚಾರದಿಂದ ಸುಮಲತಾಗೆ ‘ಕೈ’ಕೊಟ್ಟಿತು. ಕಾಂಗ್ರೆಸ್​ ಟಿಕೆಟ್ ಕೈ ತಪ್ಪಿದ್ರೂ ಪರವಾಗಿಲ್ಲ ನಾನು ಪಕ್ಷೇತರಳಾಗಿಯಾದರೂ ಸ್ಪರ್ಧೆ ಮಾಡೇ ಮಾಡ್ತೀನಿ. ಮಂಡ್ಯದ ಜನರಿಗಾಗಿ ಕಣಕ್ಕಿಳಿದೇ ಇಳಿಯತ್ತೇನೆ ಅಂತಿದ್ದ ಸುಮಲತಾ ಅವರು ತಾವು ಹೇಳಿದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇನ್ನು ಮೈತ್ರಿ (ಜೆಡಿಎಸ್​) ಅಭ್ಯರ್ಥಿಯಾಗಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆಗೆ ರೆಡಿಯಾಗಿದ್ದಾರೆ.
ಕಾವೇರಿ ಸೀಮೆಯಲ್ಲಿ ಸ್ವಾಭಿಮಾನದ ಕಿಚ್ಚೆಬ್ಬಿಸಿದ್ದಾರೆ ಸುಮಲತಾ… ಪಂಚೆ ಸುತ್ತಿ ಅಖಾಡಕ್ಕಿಳಿದಿದ್ದಾರೆ ರೆಡಿಮೇಡ್ ‘ಮಣ್ಣಿನ ಮೊಮ್ಮಗ’ ನಿಖಿಲ್. ಸುಮಲತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದು, ‘ಗಜ’ಕೇಸರಿ ಬಲ ಸಿಕ್ಕಿದೆ. ನಿಖಿಲ್ ತನಗೆ ತನ್ನ ಕಾರ್ಯಕರ್ತರೇ ಸೈನಿಕರು ಅಂತ ಸವಾಲೆಸೆದು ಕಣಕ್ಕೆ ಧುಮುಕಿದ್ದಾರೆ.
ಇನ್ನು ಮಂಡ್ಯ ‘ಲೋಕ’ ಕಣದ ಚಿತ್ರಣವನ್ನು ನೋಡೋದಾದ್ರೆ, 8 ವಿಧಾನಸಭಾ ಕ್ಷೇತ್ರಗಳಿದ್ದು (ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್ ನಗರ (ಮೈಸೂರು ಜಿಲ್ಲೆ) ಈ ಎಲ್ಲಾ 8 ಕ್ಷೇತ್ರಗಳಲ್ಲಿಯೂ ಜೆಡಿಎಸ್​ ಶಾಸಕರೇ ಇದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಇದುವರೆಗೆ ಕಾಂಗ್ರೆಸ್​ ಅಭ್ಯರ್ಥಿಗಳು 12 ಬಾರಿ, ಜೆಡಿಎಸ್​ ಅಭ್ಯರ್ಥಿಗಳು 3 ಬಾರಿ, ಇತರೆ (ಜನತಾ ದಳ) 3 ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಇಲ್ಲಿಯವರೆಗೂ ಖಾತೆ ತೆರೆದಿಲ್ಲ. ಈ ಬಾರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೇ ಸುಮಲತಾ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ.
1951ರಿಂದ 2014ರವರೆಗಿನ ಮಂಡ್ಯದ ಸಂಸದರು
ಮೈಸೂರು ರಾಜ್ಯ
1951, 1957, 1962, 1967 : ಎಂ.ಕೆ ಶಿವನಂಜಪ್ಪ, ಕಾಂಗ್ರೆಸ್​
1971 : ಸೋಮನಹಳ್ಳಿ ಕೃಷ್ಣ, ಕಾಂಗ್ರೆಸ್
ಕರ್ನಾಟಕ ರಾಜ್ಯ
1977 : ಕೆ. ಚಿಕ್ಕಲಿಂಗಯ್ಯ, ಕಾಂಗ್ರೆಸ್​
1980 : ಎಸ್​.ಎಂ ಕೃಷ್ಣ, ಕಾಂಗ್ರೆಸ್​
1984 : ಕೆ.ವಿ ಶಂಕರಗೌಡ, ಜನತಾ ಪಾರ್ಟಿ
1989, 1991 : ಜಿ. ಮಾದೇಗೌಡ, ಕಾಂಗ್ರೆಸ್​
1996 :ಕೆ.ಆರ್​ ಪೇಟೆ ಕೃಷ್ಣ, ಜನತಾ ದಳ
1998, 1999,2004 : ಅಂಬರೀಶ್ (1998ರಲ್ಲಿ ಜನತಾ ಪಾರ್ಟಿಯಿಂದ, ಮತ್ತೆರಡು ಬಾರಿ ಕಾಂಗ್ರೆಸ್​ನಿಂದ)
2009 : ಎನ್. ಚಲುವನಾರಾಯಣ ಸ್ವಾಮಿ, ಜನತಾ ದಳ (ಸೆಕ್ಯುಲರ್)
2013 : ರಮ್ಯಾ, ಕಾಂಗ್ರೆಸ್ (ಉಪ ಚುನಾವಣೆ)
2014 : ಸಿ.ಎಸ್ ಪುಟ್ಟರಾಜ್​, ಜನತಾ ದಳ (ಸೆಕ್ಯುಲರ್)
2018 : ಎಲ್​.ಆರ್ ಶಿವರಾಮೇಗೌಡ, ಜನತಾ ದಳ (ಸೆಕ್ಯುಲರ್) (ಉಪಚುನಾವಣೆ)

ಕಳೆದ ಲೋಕಸಭಾ ಚುನಾವಣೆ (2014)ಯಲ್ಲಿ ಜೆಡಿಎಸ್​ನ ಸಿ.ಎಸ್​ ಪುಟ್ಟರಾಜು ಅವರು 5,24,370 ಮತಗಳನ್ನು ಪಡೆದು 5,518 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ 5,18,852 ಮತಗಳನ್ನು, ಬಿಜೆಪಿಯ ಬಿ.ಶಿವಲಿಂಗೇಗೌಡ 86,993 ಮತಗಳನ್ನು ಪಡೆದಿದ್ದರು. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್​ನ ಶಿವರಾಮೇಗೌಡ ಅವರು 5,69,347 ಮತಗಳನ್ನು ಪಡೆದು ಬಿಜೆಪಿಯ ಡಾ. ಸಿದ್ದರಾಮಯ್ಯ ಅವರೆದುರು (2,44,404 ಮತ) 3,24,943 ಮತಗಳ ಅಂತರದ ಗೆಲವು ಪಡೆದಿದ್ದರು,

ಮಂಡ್ಯ ‘ಮತ’ಗಣಿತ

ಪುರುಷರು : 8,62,098
ಮಹಿಳೆಯರು : 8,59,519
ತೃತೀಯ ಲಿಂಗಿಗಳು : 717
ಒಟ್ಟು :   17,22,476

 

ಮಂಡ್ಯ ‘ಜಾತಿ’ಗಣಿತ

ಒಕ್ಕಲಿಗ : 7,85,420
ಎಸ್ಸಿ/ಎಸ್ಟಿ : 3,00,601
ಕುರುಬ : 1,70,854
ಲಿಂಗಾಯಿತ :  1,68,436
ಮುಸ್ಲಿಂ : 1,27,154
ಬೆಸ್ತರು : 55,219
ವಿಶ್ವಕರ್ಮ : 30,550
ಬ್ರಾಹ್ಮಣರು : 23,915
ಇತರರು : 65.254

ಮಂಡ್ಯ ಕದನ ಕಲಿಗಳ ಬಲಾಬಲ

ನಿಖಿಲ್​​ಗೆ ಪೂರಕ ಅಂಶಗಳು
ರಾಜ್ಯದಲ್ಲಿ ಅಧಿಕಾರದಲ್ಲಿರುವ ದೋಸ್ತಿ ಪಕ್ಷಗಳ ಒಮ್ಮತದ ಅಭ್ಯರ್ಥಿ
ತಂದೆ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿರುವುದು
ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು
ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂವರು ಸಚಿವರು
ಜೆಡಿಎಸ್ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಬೆಂಬಲ
ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಆಡಳಿತ
5 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಸಿಎಂ ಚಾಲನೆ ಕೊಟ್ಟಿದ್ದು
ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ಪರ ವಾತಾವರಣ ಸೃಷ್ಟಿಸುವ ಕುಟುಂಬದ ಚಾಣಾಕ್ಷತೆ
=

ನಿಖಿಲ್​​ಗೆ ಇರುವ ಆತಂಕಗಳು

ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆ ಕುಟುಂಬ ರಾಜಕಾರಣದ ಕಳಂಕ
ನಿಖಿಲ್ ಸ್ಥಳೀಯರಲ್ಲ, ಲೋಕಲ್ ಲೀಡರ್ಸ್ ಕಡೆಗಣನೆಗೆ ಒಳಗೊಳಗೇ ಆಕ್ರೋಶ
ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಕಾಂಗ್ರೆಸ್ನಲ್ಲಿ ಬಹಿರಂಗ ವಿರೋಧ
ಮೈತ್ರಿ ಸರ್ಕಾರ ಇದ್ರೂ, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರ ಕಡೆಗಣನೆ
ಎದುರಾಳಿ ಸುಮಲತಾ ಅಂಬರೀಶ್ ಪರ ಅನುಕಂಪದ ಅಲೆ ಇರುವುದು
ಅಂಬರೀಶ್ ನಿಧನವನ್ನು ರಾಜಕೀಯವಾಗಿ ಬಳಕೆ ಮಾಡಿದ್ದಕ್ಕೆ ಆಕ್ರೋಶ
ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಅವಮಾನ

ಸುಮಲತಾಗೆ ಪೂರಕ ಅಂಶಗಳೇನು?
—————————-
ಮಂಡ್ಯ ಉದ್ದಗಲಕ್ಕೂ ಇರುವ ಮಂಡ್ಯದ ಗಂಡು ಅಂಬರೀಶ್ ಪರ ಅನುಕಂಪದ ಅಲೆ
ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೇ ಬೆಂಬಲಿಸುವ ಸಾಧ್ಯತೆಯೂ ಇದೆ
ಬಹಿರಂಗವಾಗಿ ಅಲ್ಲದಿದ್ರೂ ರೈತ ಸಂಘದ ಮುಖಂಡರ ಆಂತರಿಕ ಬೆಂಬಲ
ಕುಟುಂಬ ರಾಜಕಾರಣದ ವಿರೋಧಿಸುವ ಜೆಡಿಎಸ್ ಮುಖಂಡರ ಆಂತರಿಕ ಬೆಂಬಲ
ಪಕ್ಷದ ಅಧಿಕೃತ ಅಭ್ಯರ್ಥಿ ಅಲ್ಲದಿದ್ರೂ ಕಾಂಗ್ರೆಸ್ ಮುಖಂಡರು ಬೆಂಬಲಿಸುವ ಸಾಧ್ಯತೆ
ಜೆಡಿಎಸ್ ಮುಖಂಡರ ಟೀಕೆಗಳಿಗೆ ಪ್ರಬುದ್ಧವಾಗಿ ಹೇಳಿಕೆ ನೀಡುತ್ತಿರುವುದು
ದರ್ಶನ್ ಸೇರಿದಂತೆ ಸ್ಟಾರ್ ನಟ ನಟಿಯರು ಸುಮಲತಾ ಪ್ರಚಾರ ಮಾಡುವ ಸಾಧ್ಯತೆ
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಒಲವು ವ್ಯಕ್ತವಾಗುತ್ತಿರುವುದು

ಸುಮಲತಾಗೆ ಇರುವ ಆತಂಕಗಳೇನು?
—————————————-
ರಾಜಕೀಯದಲ್ಲಿ ಸುಮಲತಾಗೆ ಅನುಭವವಿಲ್ಲ. 
ಅಧಿಕೃತವಾಗಿ ಯಾವುದೇ ಪಕ್ಷದಿಂದಲೂ ಬೆಂಬಲ ಇಲ್ಲದಿರುವುದು
ಬೆಂಬಲದ ಮಾತಾಡಿರುವ ಮುಖಂಡರು ಕೊನೆ ಕ್ಷಣದಲ್ಲಿ ತಟಸ್ಥರಾಗಬಹುದು
ಸುಮಲತಾ ಬೆಂಬಲಿಗರಿಗೆ ಆಫರ್ ಕೊಟ್ಟು ಎದುರಾಳಿಗಳು ಓಲೈಸಬಹುದು

ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು
——————————————–
ಕಾವೇರಿ ಜಲ ವಿವಾದ ಇಲ್ಲಿ ಸದಾ ಪ್ರಭಾವ ಬೀರುವ ವಿಚಾರ
12 ತಿಂಗಳ ನೀರಾವರಿಯಿದ್ರೂ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆ ಮಂಡ್ಯ
ಕೈಗಾರಿಕಾ ಕ್ಷೇತ್ರದಲ್ಲಿ ಯಾವುದೇ ತರಹದ ಪ್ರಗತಿ ಕಾಣದ ಕ್ಷೇತ್ರ
ಪುನಶ್ಚೇತನಗೊಳ್ಳದ ಮೈಶುಗರ್ ಮತ್ತು ಪಿಎಸ್​ಕೆ ಸಕ್ಕರೆ ಕಾರ್ಖಾನೆಗಳ 
ಸಾಕಷ್ಟು ಪ್ರವಾಸಿ ತಾಣಗಳಿದ್ರೂ ದುರಸ್ಥಿ ಕಾಣದ ಕ್ಷೇತ್ರದ ಬಹುತೇಕ ರಸ್ತೆಗಳು
ಯುವ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದರಲ್ಲೂ ಹಿಂದುಳಿದ ಕ್ಷೇತ್ರ

ಸಂಸದರು ಅನುದಾನ ಬಳಕೆ : ಸಂಸದರಾಗಿದ್ದ ಪುಟ್ಟರಾಜು 2014-15ನೇ ಸಾಲಿನಲ್ಲಿ ತಮ್ಮ ಕ್ಷೇತ್ರಕ್ಕೆ ತಂದ 4.86 ಕೋಟಿ ಅನುದಾನದಲ್ಲಿ 2.39 ಕೋಟಿ ಮೇಲುಕೋಟೆ ಸುರಿದಿದ್ದಾರೆ. 64 ಕಾಮಗಾರಿಗಳು ಪೂರ್ಣಗೊಂಡಿವೆ. 10 ಕಾಮಗಾರಿಗಳು ಪ್ರಗತಿಯಲ್ಲಿವೆ. 2015-16ರಲ್ಲಿ 4.57 ಕೋಟಿ ಅನುದಾನದಲ್ಲಿ ಮೇಲುಕೋಟೆಗೆ 2 ಕೋಟಿ ವಿನಿಯೋಗಿಸಿದ್ದಾರೆ. ಈ ಅನುದಾನದಲ್ಲಿ 75 ಕಾಮಗಾರಿ ಪೂರ್ಣಗೊಂಡಿದ್ದು, 14 ಕಾಮಗಾರಿ ಪ್ರಗತಿಯಲ್ಲಿವೆ. 2016-17ನೇ ಸಾಲಿನಲ್ಲಿ 2.61 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮೇಲುಕೋಟೆಗೆ 2.37 ಕೋಟಿ ರೂ ಬಳಸಿದ್ದಾರೆ. ನಾಗಮಂಗಲ, ಮದ್ದೂರಿಗೆ 11 ಲಕ್ಷ, ಕೆ.ಆರ್.ಪೇಟೆಗೆ 2.62 ಲಕ್ಷ ಬಳಕೆ ಮಾಡಿದ್ದಾರೆ. ಇತರೆ ಕ್ಷೇತ್ರಗಳಿಗೆ ನಯಾಪೈಸೆ ಕೂಡ ನೀಡಿಲ್ಲ..!

ಕ್ಷೇತ್ರ ವಿಶೇಷ : ಮಂಡ್ಯ ಅಂದೊಡನೆ ಥಟ್​ ಅಂತ ನೆನಪಾಗೋದು ಕೆಆರ್​ಎಸ್ ಅಣೆಕಟ್ಟು. ಐತಿಹಾಸಿಕ, ಧಾರ್ಮಿಕ ಮತ್ತು ಸುಂದರ ಪ್ರವಾಸಿ ತಾಣಗಳ ಬೀಡಾಗಿರುವ ಮಂಡ್ಯದಲ್ಲಿ ಆದಿ ಚುಂಚನಗಿರಿ ಶ್ರೀ ಕ್ಷೇತ್ರ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನ ನಿಮಿಷಾಂಭ ದೇವಾಲಯ, ಗಗನಚುಕ್ಕಿ ಫಾಲ್ಸ್, ಏಷ್ಯಾದ ಮೊದಲ ಶಿಂಷಾ ಜಲ ವಿದ್ಯುತ್ ಸ್ಥಾವರ, ಶಿವಪುರ ಸತ್ಯಾಗ್ರಹ ಸೌಧ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸುಪ್ರಸಿದ್ಧವಾಗಿವೆ.

RELATED ARTICLES

Related Articles

TRENDING ARTICLES