ತುಮಕೂರು: ತುಮಕೂರು ಕ್ಷೇತ್ರ ಉಳಿಸಿಕೊಳ್ಳಲು ಮುದ್ದಹನುಮೇಗೌಡರೊಂದಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳಿದ ತುಮಕೂರು ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆ. ಮುದ್ದಹನುಮೇಗೌಡರೊಂದಿಗೆ ದೆಹಲಿ ತಲುಪಿದ ಬೆಂಬಲಿಗರು ಕ್ಷೇತ್ರ ಕಾಂಗ್ರೆಸ್ಗೆ ಬಿಟ್ಟುಕೊಡುವಂತೆ ಕೇಳಿ, ಲೋಕಸಭಾ ಟಿಕೆಟ್ ಮುದ್ದಹನುಮೇಗೌಡರಿಗೆ ನೀಡುವಂತೆ ವೇಣುಗೋಪಾಲ್ ಅವರನ್ನು ಒತ್ತಾಯಿಸಲಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅನಿಲ್ ಪಾಟೀಲ್, ಕಾಂಗ್ರೆಸ್ ಅಧ್ಯಕ್ಷರು ಪರಮೇಶ್ವರ ಆಪ್ತ ಅರಕೆರೆ ಶಂಕರ್ ಅವರೂ ದೆಹಲಿಗೆ ತೆರಳಿದ್ದಾರೆ.
ಲೋಕಸಭಾ ಚುನಾವಣೆ ಡೇಟ್ ಫಿಕ್ಸ್ ಆದಾಗಿನಿಂದಲೂ ದೋಸ್ತಿಗೆ ಸೀಟು ಹಂಚಿಕೆ ಕಗ್ಗಂಟಾಗಿದೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದು ಜಿಲ್ಲಾ ಕಾಂಗ್ರೆಸ್ ನಾಯಕರ ಮತ್ತು ಮುದ್ದಹನುಮೇಗೌಡರ ಬೆಂಬಲಿಗರ ಅಸಮಧಾನಕ್ಕೆ ಕಾರಣವಾಗಿದೆ. ತುಮಕೂರು ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು, ಕ್ಷೇತ್ರ ಉಳಿಸಿಕೊಳ್ಳಲು ಕೈ ನಾಯಕರು ಕಸರತ್ತು ನಡೆಸಿದ್ದಾರೆ.