Wednesday, September 18, 2024

ದೇವೇಗೌಡ್ರೇ ರೇವಣ್ಣ ಅವರ ಕಿವಿಹಿಂಡಿ ಬುದ್ಧಿ ಹೇಳಿ: ಸುರೇಶ್ ಕುಮಾರ್​

ಬೆಂಗಳೂರು: ಸುಮಲತಾ ಬಗ್ಗೆ ಸಚಿವ ರೇವಣ್ಣ ಹೇಳಿರೋ ಮಾತು ನಾವೆಲ್ಲರೂ ತಲೆ ತಗ್ಗಿಸೋ ಮಾತು. ಈಗ ದೇವೇಗೌಡ್ರು ಇದನ್ನು ಗಂಭೀರವಾಗಿ ಪರಿಗಣಿಸಿ ಹಿರಿಯ ಮಗ ರೇವಣ್ಣ ಅವ್ರ ಕಿವಿ ಹಿಂಡಿ, ಮಗಾ ಈ ರೀತಿ ಮಾತನಾಡಬೇಡ, ಇದು ಒಳ್ಳೆಯದಲ್ಲ ಅಂತ ಹೇಳ್ಬೇಕು. ಇದು ಮಾಜಿ ಪ್ರಧಾನಿ ಅವ್ರು ಮಾಡಲೇ ಬೇಕಾದ ಕೆಲ್ಸ ಅಂತ ಬಿಜೆಪಿ ಶಾಸಕ ಎಸ್​. ಸುರೇಶ್ ಕುಮಾರ್​ ಹೇಳಿದ್ದಾರೆ.

“ರೇವಣ್ಣ ಅವರು ಸುಮಲತಾ ಬಗ್ಗೆ ಹೇಳಿರೋದನ್ನು ನಾನು ಸ್ವತಃ ಮತ್ತು ಬಿಜೆಪಿ ಪರವಾಗಿ ಖಂಡಿಸ್ತೇನೆ. ರೇವಣ್ಣ ಅವ್ರೇ ಈ ಅಟ್ಟಹಾಸ ಬಹಳ ದಿನ ನಡೆಯೋದಿಲ್ಲ. ಈ ರೀತಿ ಮಾಡೋವಾಗ ಎಚ್ಚರಿಕೆಯಿಂದಿರಿ. ಯಾವುದೋ ರೀತಿಯಲ್ಲಿ ನಿಮಗೆ ಪ್ರತ್ಯುತ್ತರ ಸಿಕ್ಕೇ ಸಿಗುತ್ತದೆ” ಅಂತ ಎಚ್ಚರಿಸಿದ್ದಾರೆ.

“ಆವತ್ತು ಹೆಚ್. ಡಿ ರೇವಣ್ಣ ಅವರು ಬಿಸ್ಕತ್ ಎಸೆದಿದ್ರು. ಈ ಮೂಲಕ ತಮ್ಮ ದರ್ಪ, ಅಹಂಕಾರ, ಅಟ್ಟಹಾಸವನ್ನು, ಸಂವೇದನಾ ರಹಿತ ನಡವಳಿಕೆಯನ್ನು ತೋರಿಸಿದ್ರು. ಈಗ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಬಗ್ಗೆ ಅತ್ಯಂತ ಕೆಟ್ಟದಾದ ಮಾತನ್ನು ಹೇಳಿದ್ದಾರೆ. ಇದು 21ನೇ ಶತಮಾನ. ಇಂದು ವಿಶ್ವ ಮಹಿಳಾ ದಿನಾಚರಣೆ. ಎಲ್ಲಡೆ ಮಹಿಳಾ ದಿನಾಚರಣೆ ಆಚರಿಸಲಾಗ್ತಿದೆ. ರೇವಣ್ಣ ಅವರು ತಮ್ಮ ಆ ಕೆಳಮನಸ್ಥಿತಿಯನ್ನು ತೋರಿಸೋದಕ್ಕೆ ಈ ದಿನವನ್ನೇ ಆರಿಸ್ಕೊಳ್ಬೇಕಿತ್ತಾ” ಅಂತ ಪ್ರಶ್ನಿಸಿದ್ದಾರೆ.

“ಸುಮಲತಾ ಅವರ ಬಗ್ಗೆ ರೇವಣ್ಣ ಅವರು ಹೇಳಿರೋ ಮಾತು ನಾವೆಲ್ಲರೂ ತಲೆ ತಗ್ಗಿಸೋ ಮಾತು. ಅಂಬರೀಶ್ ಅವರಿಗೆ ಅವರದೇ ಆದ ಅಭಿಮಾನಿಗಳಿದ್ದಾರೆ. ಅವರು ಕಾಂಗ್ರೆಸ್​​​ನಲ್ಲಿದ್ರು. ಸುಮಲತಾ ಅವರಿಗೆ ಟಿಕೆಟ್ ಕೊಡ್ತಾರೋ ಇಲ್ವೋ ಅನ್ನೋದು ಬೇರೆ ಪ್ರಶ್ನೆ. ಆದರೆ ರೇವಣ್ಣ ಅವ್ರು ಈ ರೀತಿ ಮಾತನಾಡೋದು ತಪ್ಪು” ಅಂತ ಹೇಳಿದ್ದಾರೆ.

“ರೇವಣ್ಣ ಅವ್ರು ಪದೇ ಪದೇ ಈ ರೀತಿ ಹೇಳಿಕೆಗಳನ್ನು ಕೊಡ್ತಿದ್ದಾರೆ. ನಾನೇನ್ ಮಾಡಿದ್ರು ನಡೆಯುತ್ತೆ, ನಾನು ಹೋಗಿದ್ದೇ ದಾರಿ. ನಾನು ಮಾತನಾಡಿದ್ದೇ ವ್ಯಾಖ್ಯ ಅಂತ ಅವರಿಗನಿಸ್ತಿದೆ. ರೇವಣ್ಣ ಅವ್ರು ಕ್ಷಮೆ ಕೇಳಲ್ಲ. ಅದು ಗೊತ್ತು. ಅದವರ ಸ್ವಭಾವದಲ್ಲೇ ಇಲ್ಲ. ಆದರೆ ಅವರ ಕುಟುಂಬದವರಾದ್ರೂ ಈ ಬಗ್ಗೆ ಮಾತನಾಡ್ಬೇಕು. ತಮ್ಮ ಖೇದವನ್ನಾದ್ರೂ ವ್ಯಕ್ತಪಡಿಸ್ಬೇಕು. ಒಟ್ಟಾರೆ ರೇವಣ್ಣ ಅವ್ರ ನಡವಳಿಕೆ ಇಂದಿನ ರಾಜಕಾರಣವನ್ನು ಇನ್ನಷ್ಟು ಕೆಳ ಹಂತಕ್ಕೆ ತೆಗೆದುಕೊಂಡು ಹೋಗುತ್ತೆ” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES