ನವದೆಹಲಿ: ಪಾಪಿ ಪಾಕ್ಗೆ ಎದುರಾಗಿ ಭಾರತ ಈಗ ಜಿನೇವಾ ಒಪ್ಪಂದದ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ. ಏಳು ದಿನಗಳೊಳಗೆ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಬೇಕು. ಬಿಡುಗಡೆಗೊಳಿಸದಿದ್ದಲ್ಲಿ ಅದನ್ನು ಯುದ್ಧವೆಂದು ಪರಿಗಣಿಸಲಾಗುತ್ತದೆ ಅಂತ ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ಜಿನೇವಾ ಒಪ್ಪಂದದ ಪ್ರಕಾರ ಸೆರೆ ಸಿಕ್ಕ ಯೋಧನಿಗೆ ಚಿತ್ರಹಿಂಸೆ, ಹತ್ಯೆ ಮಾಡುವುದು ನಿಷಿದ್ಧವಾಗಿದೆ. ವಿಮಾನ ಪತನವಾದಾಗಲೂ ನಿಯಮ ಪಾಲನೆ ಮಾಡಬೇಕು. ಸೆರೆಸಿಕ್ಕ ಕೈದಿಯ ಹೆಸರು, ಹುದ್ದೆ, ಸೀರಿಯಲ್ ನಂಬರ್‌ಗಳ ಹಂಚಿಕೆ ಮಾಡಬೇಕು. ಎದುರಾಳಿ ರಾಷ್ಟ್ರದ ಜೊತೆಗೆ ಮಾಹಿತಿ ಹಂಚಿಕೊಳ್ಳಲೇಬೇಕು ಅಂತ ಹೆಳಲಾಗಿದೆ. ಪಾಕಿಸ್ತಾನದಲ್ಲಿ ಒತ್ತೆಯಾಳಾಗಿರುವ ಭಾರತದ ಪೈಲೆಟ್ ಅಭಿನಂದನ್‌ಗೆ ಹಿಂಸೆ ನೀಡುವಂತಿಲ್ಲ. ಏಳು ದಿನಗಳೊಳಗೆ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಬೇಕೆಂದು ಪಾಕ್ಗೆ ವಾರ್ನ್ ಮಾಡಲಾಗಿದೆ.
ಗಡಿ ದಾಟಿ ಬಂದ ಪಾಕಿಸ್ತಾನದ ಎಫ್-16 ವಿಮಾನವನ್ನು ಭಾರತದ ಸೇನಾ ಪಡೆಗಳು ನಿನ್ನೆ ಹೊಡೆದುರುಳಿಸಿತ್ತು. ಭಾರತದ ವಾಯುಪಡೆಯ ಮಿಗ್ 21 ಬೈಸನ್ ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆ ತನ್ನ ವಶದಲ್ಲಿ ಇಟ್ಟುಕೊಂಡಿದೆ.
ಜಿನಿವಾ ಒಪ್ಪಂದ:
- ಈ ಒಪ್ಪಂದಕ್ಕೆ ಜಿನಿವಾದಲ್ಲಿ 1929ರ ಜುಲೈ 27ರಂದು ಸಹಿ ಹಾಕಲಾಯಿತು.
- ಜಿನಿವಾ ಒಪ್ಪಂದ ಎಂಬುದು ಎರಡು ರಾಷ್ಟ್ರಗಳ ಯುದ್ಧ ಕೈದಿಗಳ ರಕ್ಷಣೆ, ಯೋಗಕ್ಷೇಮಕ್ಕಾಗಿ ಮಾಡಿಕೊಂಡಿರುವ ಕಾನೂನು.
- ಎರಡು ದೇಶಗಳ ನಡುವೆ ನಡೆಯುವ ಯುದ್ಧ ಸಂದರ್ಭದಲ್ಲಿ ಕೈದಿಗಳಾದವರು, ಯುದ್ಧ ಗಾಯಾಳುಗಳು, ಯುದ್ಧದ ಸಮಯದಲ್ಲಿ ಅನಾರೋಗ್ಯಕ್ಕೀಡಾದವರು, ನಾಗರಿಕರಿಗಾಗಿ ಈ ಒಪ್ಪಂದದಲ್ಲಿ ಕಾನೂನು ರೂಪಿಸಲಾಗಿದೆ
- ಜಿನಿವಾ ಒಪ್ಪಂದ ಜಾರಿಗೆ ಬಂದದ್ದು 1931ರ ಜೂನ್ 19ರಂದು. ನಂತರ ಇದು ಜಾಗತಿಕವಾಗಿ ಎಲ್ಲ ರಾಷ್ಟ್ರಗಳಿಗೂ ಅನ್ವಯವಾಗಿದೆ.
- ಈ ಒಪ್ಪಂದದ ಪ್ರಕಾರ ಯಾವುದೇ ಯುದ್ಧ ಕೈದಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುವಂತಿಲ್ಲ.
- ಅವರಿಗೆ ಅನ್ನಾಹಾರ, ಉಡುಗೆ, ವೈದ್ಯಕೀಯ ಸೇವೆ ಒದಗಿಸಬೇಕು. ಮಾನವೀಯವಾಗಿ ನಡೆಸಿಕೊಳ್ಳಬೇಕು.
- ಎರಡು ದೇಶಗಳ ನಡುವಿನ ಯುದ್ಧ ಪೂರ್ಣಗೊಂಡ ನಂತರ ಕೈದಿಗಳನ್ನು ಅವರವರ ದೇಶಕ್ಕೆ ಬಿಟ್ಟು ಕಳುಹಿಸಬೇಕು ಎಂಬುದೇ ಈ ಒಪ್ಪಂದದ ಮೂಲ ಉದ್ದೇಶ.