Tuesday, June 18, 2024

‘ನನ್ನ ಜೊತೆ ಕಾಂಗ್ರೆಸ್​​ನಲ್ಲಿದ್ದವರು ಬಿಜೆಪಿಗೆ ಬನ್ನಿ’ : ಎಸ್​.ಎಂ ಕೃಷ್ಣ

ಮಂಡ್ಯ : ‘ನನ್ನ ಜೊತೆ ಕಾಂಗ್ರೆಸ್​​ನಲ್ಲಿದ್ದವರು ಬಿಜೆಪಿಗೆ ಬರಬೇಕು’ ಅಂತ ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ‘ನನ್ನ ಜೊತೆ ಕಾಂಗ್ರೆಸ್​ನಲ್ಲಿದ್ದವರು ಬಿಜೆಪಿಗೆ ಬರಬೇಕು ಅನ್ನೋದು ನನ್ನ ಆಸೆ. ಇಂದು ನಾನು ಕರೆ ಕೊಡ್ತಿದ್ದೇನೆ. ನಿರಂತರವಾಗಿ ಈ ಬಗ್ಗೆ ಬೆಂಬಲಿಗರ ಜೊತೆ ಮಾತನಾಡುತ್ತಿದ್ದೇನೆ’ ಅಂತ ಹೇಳಿದ್ರು.
ಕಾಂಗ್ರೆಸ್ ಮತ್ತು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಗುಡುಗಿದ ಅವರು, ತಾವು ಕಾಂಗ್ರೆಸ್​ಗೆ ಕೈಕೊಟ್ಟಿದ್ದೇಕೆ ಅನ್ನೋದನ್ನು ಸಹ ಬಹಿರಂಗಗೊಳಿಸಿದ್ರು.
‘ರಾಹುಲ್​ ಗಾಂಧಿ ಹಸ್ತಕ್ಷೇಪದಿಂದ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. 80 ವರ್ಷ ಮೀರಿದವರು ಸರ್ಕಾರದಲ್ಲಿ ಬೇಡ ಎಂದು ರಾಹುಲ್​ ಗಾಂಧಿ ಹೇಳಿದ್ರು. ಈ ಮಾತು ನನ್ನ ಕಿವಿಗೆ ಬಿದ್ದ ತಕ್ಷಣ ರಾಜೀನಾಮೆ ಕೊಟ್ಟಿದ್ದೆ. ಮನಮೋಹನ್​ ಸಿಂಗ್ ಅವರ ಆಡಳಿತದಲ್ಲಿ ರಾಗಾ ಹಸ್ತಕ್ಷೇಪ ಹೆಚ್ಚಿತ್ತು. ರಾಗಾ ನೀತಿ ನಿಲುವುಗಳಿಗೆ ಬೇಸತ್ತು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದೆ’ ಅಂತ ಕಾಂಗ್ರೆಸ್​ ಬಿಟ್ಟಿದ್ದಕ್ಕೆ ಕಾರಣವನ್ನು ಬಿಚ್ಚಿಟ್ಟರು.
ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬರೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಆ ವಿಚಾರ ನಂಗೆ ಗೊತ್ತಿಲ್ಲ’ ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES