ವಯಸ್ಸು 60 ಆಗ್ತಿದ್ದಂತೆ ಕೆಲವರು ಜೀವನದಲ್ಲಿ ಉತ್ಸಾಹ ಕಳೆದುಕೊಂಡು ಬಿಡ್ತಾರೆ. ಇನ್ನೂ ಒಂದಷ್ಟು ಜನ ನಮ್ಮ ಕೈಲಿ ಏನು ಆಗಲ್ಲ ಅಂತ ತಮ್ಮನ್ನು ತಾವು ಒಂದು ಚೌಕಟ್ಟಿನಲ್ಲಿ ಸೀಮಿತ ಮಾಡಿ ಕೂತು ಬಿಡ್ತಾರೆ. ಇಲ್ಲೊಬ್ರು ವಿಶೇಷ ವ್ಯಕ್ತಿ, ಶತಾಯುಷಿ ಇಳಿವಯಸ್ಸಿನಲ್ಲಿಯೂ ಯುವ ಜನತೆಯೇ ನಾಚುವಂತೆ ಕೆಲಸ ಮಾಡಿದ್ದಾರೆ. ಅವರೇ ಶತಾಯುಷಿಯ ಮನ್ಕೌರ್.
60 ವರ್ಷ ಆಗ್ತಿದ್ದಂತೆ ಮನುಷ್ಯನಿಗೆ ಅರಳು ಮರಳೋ ಅನ್ನೋ ಹಾಗಾಗಿರುತ್ತೆ. ದೇಹ ಕೊಂಚ ವೀಕ್ ಆಗಿರುತ್ತೆ, ಜೀವನದ ಸಂಧ್ಯಾ ಕಾಲದಲ್ಲಿ ರೋಗಗಳು ಕೂಡ ಕಾಡುತ್ತವೆ. ಅಪರೂಪಕ್ಕೊಮ್ಮೆ ಮುಪ್ಪಿನಲ್ಲೂ ಆರೋಗ್ಯಕರವಾಗಿರೋರನ್ನು ನೋಡಿದಾಗ ಎಂಥ ಗಟ್ಟಿಗರಪ್ಪಾ ಇವರು ಅಂತ ಆಶ್ಚರ್ಯವಾಗುತ್ತೆ. ಇನ್ನುಳಿದಂತೆ ಬಹುತೇಕ ಜನ ತಮ್ಮ ಇಳಿವಯಸ್ಸಿನಲ್ಲಿ ಮಂಡಿ ನೋವು, ಆಯಾಸ, ಬಿಪಿ, ಶುಗರ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಾರೆ. ಆದ್ರೆ ಪಂಜಾಬಿನ 102 ವರ್ಷದ ಅಥ್ಲೀಟ್ ಮನ್ ಕೌರ್ ಮಾತ್ರ ಇದಕ್ಕೆಲ್ಲ ತದ್ವಿರುದ್ಧ.
ಈ ಅಜ್ಜಿ ಶತಾಯುಷಿ. ಇವರೀಗ 102 ವರ್ಷ. ಆದ್ರೆ ವಯಸ್ಸಾಗಿರೋದು ಇವರ ದೇಹಕ್ಕೆ ಮಾತ್ರ. ಇವರ ಹುಮ್ಮಸ್ಸು ಯುವಜನರನ್ನೇ ನಾಚಿಸುತ್ತೆ. ಇವರ ಪ್ರತಿಭೆಗಾಗಲಿ, ಉತ್ಸಾಹಕ್ಕಾಗಲಿ, ಹುಮ್ಮಸ್ಸಿಗಾಗಲಿ ವಯಸ್ಸಾಗಿಲ್ಲ. ವಯಸ್ಸು ನೂರು ದಾಟಿದ್ರು ಅವರ ಉತ್ಸಾಹ ಮಾತ್ರ 21ರ ಹರೆಯದಂತಿದೆ. ಅಂದ ಹಾಗೆ ಈ ಶತಾಯುಷಿಯ ಹೆಸರು ಮನ್ಕೌರ್ ಅಂತ. 102ರ ಇಳಿವಯಸ್ಸಿನಲ್ಲಿಯೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಇತ್ತೀಚಿಗೆ ವಿಶ್ವ ಮಾಸ್ಟರ್ಸ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದು ಇವರ ಉತ್ಸಾಹಕ್ಕೆ ಸಾಕ್ಷಿ.
ಇವರು ಮಾಡಿರೋ ಸಾಧನೆಗಂತೂ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಚಂಡೀಗಢ ಮೂಲದ 102 ವರ್ಷ ವಯಸ್ಸಿನ ಮನ್ ಕೌರ್, ಕೆನಡಾದ ವ್ಯಾಂಕೋವರ್ನಲ್ಲಿ ನಡೆದ ಅಮೆರಿಕನ್ಸ್ ಮಾಸ್ಟರ್ಸ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಜೊತೆ ಜೊತೆಗೆ ವಿಶ್ವದ ಕೋಟ್ಯಂತರ ಜನರ ಹೃದಯವನ್ನೂ ಗೆದ್ದಿದ್ದಾರೆ.
ಅಮೆರಿಕನ್ಸ್ ಮಾಸ್ಟರ್ಸ್ ಗೇಮ್ಸ್, ವಯೋವೃದ್ಧರಿಗಾಗಿಯೇ ನಡೆದ ರನ್ನಿಂಗ್ ರೇಸ್. ಮನ್ ಕೌರ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ರು. ಒಂದೂವರೆ ನಿಮಿಷಗಳಲ್ಲಿ 100 ಮೀಟರ್ ಓಡುವ ಮೂಲಕ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ರು. 102 ವರ್ಷ ವಯಸ್ಸಿನ ವೃದ್ಧೆ ಜಿಂಕೆಮರಿಯಂತೆ ಓಡುತ್ತಿದ್ರೆ, 70-80 ವರ್ಷ ವಯಸ್ಸಿನವರೆಲ್ಲ ಬೆರಗುಗಣ್ಣಿನಿಂದ ನೋಡುತ್ತಿದ್ರು.
ಮನ್ ಕೌರ್ ಚಿಕ್ಕ ವಯಸ್ಸಿನಲ್ಲೇ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರಲಿಲ್ಲ. ಅವರು ಮೊದಲು ರನ್ನಿಂಗ್ ರೇಸ್ನಲ್ಲಿ ಪಾಲ್ಗೊಂಡಿದ್ದು 93ರ ಹರೆಯದಲ್ಲಿ. ಹೌದು. 93 ವರ್ಷ ವಯಸ್ಸಾಗಿದ್ದಾಗ ಮನ್ ಕೌರ್ ಅವರ ಪುತ್ರ ಗುರುದೇವ್ ಸಿಂಗ್ ರನ್ನಿಂಗ್ ರೇಸ್ನಲ್ಲಿ ಪಾಲ್ಗೊಳ್ಳುವಂತೆ ತಾಯಿಗೆ ಪ್ರೋತ್ಸಾಹ ನೀಡಿದ್ರು. ನಿಮಗೆ ಕಾಲು ನೋವಿಲ್ಲ, ಹೃದಯ ಸಮಸ್ಯೆಯಿಲ್ಲ, ಯಾವುದೇ ಖಾಯಿಲೆ ಇಲ್ಲದೇ ಇರೋದ್ರಿಂದ ಆರಾಮಾಗಿ ಓಡಬಹುದೆಂದು ಧೈರ್ಯ ತುಂಬಿದ್ದರು.
ವಿಶ್ವ ಮಾಸ್ಟರ್ಸ್ ಗೇಮ್ನ ಮುಂಚೆ ಅವರು 2011ರಲ್ಲಿ 100 ಮೀ, ಮತ್ತು 200 ಮೀ. ರಾಷ್ಟ್ರೀಯ ಟೂರ್ನಿಯಲ್ಲಿ ಪದಕ ಗೆದ್ದಿದ್ದರು. ಮೊದಲ ರನ್ನಿಂಗ್ ರೇಸ್ನಲ್ಲಿ ಓಡುವಾಗ 1 ನಿಮಿಷ ಹಾಗೂ 14 ಸೆಕೆಂಡ್ಗಳಲ್ಲಿ ಮುಗಿಸಿದ್ದು ವಿಶೇಷ. ಈ ವೇಳೆ ಅವರಿಗೆ ‘ಚಂಡೀಗಢದ ಮಿರಾಕಲ್’ ಎನ್ನುವ ಬಿರುದನ್ನು ಸಹ ನೀಡಲಾಯ್ತು.
ಮನ್ ಕೌರ್ ಚಿನ್ನದ ಪದಕ ಗೆದ್ದಿರುವುದು 100 ಮೀಟರ್ ಓಟದಲ್ಲಿ ಮಾತ್ರವಲ್ಲ. ಶಾಟ್ಪುಟ್ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಮಾಸ್ಟರ್ಸ್ ಗೇಮ್ಸ್ನಲ್ಲಿ 20ಕ್ಕೂ ಹೆಚ್ಚು ಪದಕ ಗೆಲ್ಲುವತ್ತ ಮನ್ ಕೌರ್ ಮುಂದಡಿ ಇಟ್ಟಿದ್ದಾರೆ.
ಮನ್ ಕೌರ್ ಅವರ ಆರೋಗ್ಯದ ಗುಟ್ಟು ಸರಿಯಾದ ಡಯಟ್ ಮತ್ತು ವ್ಯಾಯಾಮ. ಹಾಗಾಗಿಯೇ 102 ವಯಸ್ಸಾದ್ರೂ ಕೂಡ ಮನ್ ಕೌರ್ ಅವರು ಗಟ್ಟಿಮುಟ್ಟಾಗಿದ್ದಾರೆ. ಸಾಧನೆಗೆ ವಯಸ್ಸು ಅಡ್ಡಿಯಲ್ಲ ಅನ್ನೋದನ್ನು ಮನ್ ಕೌರ್ ಯುವ ಪೀಳಿಗೆಗೆ ಸಾರಿ ಹೇಳಿದ್ದಾರೆ.
ಪ್ರಶಾಂತ್ ಎಸ್.