ಬೆಂಗಳೂರು: ನಾಳೆಯಿಂದ ಮೈತ್ರಿ ಸರ್ಕಾರದ ಮೊದಲ ಅಧಿವೇಶನ ಶುರುವಾಗಲಿದೆ. ಇದಕ್ಕೂ ಮುನ್ನ ಇಂದು ಕಾಂಗ್ರೆಸ್ ಸಚಿವರು ಮತ್ತು ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಔತಣಕೂಟ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರು, ಮುಖಂಡರು ಹಾಗೂ ಶಾಸಕರಿಗೆ ಔತಣಕೂಟಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ ಪತ್ರ ಬರೆದು ಆಹ್ವಾನ ನೀಡಿದ್ದಾರೆ. ಇನ್ನು ಔತಣಕೂಟದಲ್ಲಿ ನಾಯಕರ ನಡುವಿನ ಅಸಮಾಧಾನ, ಮೈತ್ರಿ ಸರ್ಕಾರದಲ್ಲಿನ ಗೊಂದಲ ಹಾಗೂ ಆಪರೇಷನ್ ಕಮಲದ ಬಗ್ಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ರಿವರ್ಸ್ ಆಪರೇಷನ್ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಜೆಪಿ ಇಂದು ಸಭೆ ನಡೆಸಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕೋರ್ ಕಮಿಟಿ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತದೆ. ಬೆಂಗಳೂರಿನ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಈ ಸಭೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಕೂಡಾ ಆಗಮಿಸುತ್ತಿದ್ದಾರೆ. ಪ್ರಸಕ್ತ ರಾಜ್ಯದಲ್ಲಿ ‘ಆಪರೇಷನ್ ಕಮಲ’ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಬಿಜೆಪಿ ಕೋರ್ ಕಮಿಟಿ ಸಭೆ ಕೂಡಾ ಎಲ್ಲರ ಗಮನ ಸೆಳೆದಿದೆ.
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಬಿಜೆಪಿ ಶಾಸಕರಿಗೆ ಉಪಹಾರ ಕೂಟ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 25 ಶಾಸಕರಿಗೆ ಡಾಲರ್ಸ್ ಕಾಲನಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಕೂಟ ಆಯೋಜಿಸಲಾಗಿದೆ. ಈಗಾಗಲೇ ರಿವರ್ಸ್ ಆಪರೇಷನ್ ನಡೆಸಲು ಮುಂದಾಗಿರುವ ಕಾಂಗ್ರೆಸ್, ಜೆಡಿಎಸ್ ಪ್ಲಾನ್ಗೆ ಪ್ರತಿತಂತ್ರ ಹೂಡಲು ಕಸರತ್ತು ನಡೆದಿದೆ.