ಕೊಡಗು : ತಾಜ್ಮಹಲ್ ಹಿಂದೆ ಶಿವಮಂದಿರವಾಗಿತ್ತು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವ ಅನಂತ್ಕುಮಾರ್ ಹೆಗಡೆಯವರು ಇಂದೂ ಒಂದಿಷ್ಟು ವಿವಾದಿತ ಹೇಳಿಕೆಗಳನ್ನು ನೀಡಿದ್ದಾರೆ.
ಕೊಡಗಿನ ಮಾದಾಪುರದಲ್ಲಿ ನಡೆದ ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ”ತಾಜ್ಮಹಲ್ ಅನ್ನು ಕಟ್ಟಿಸಿದ್ದು ಮುಸಲ್ಮಾನರಲ್ಲ. ಅದು ಶಿವಮಂದಿರವಾಗಿತ್ತು. ರಾಜಾ ಜಯಸಿಂಹನಿಂದ ಕೊಂಡುಕೊಂಡ ಕಟ್ಟಡವಾಗಿತ್ತು. ತೇಜೋ ಮಹಾಲಯ ನಂತರದಲ್ಲಿ ತಾಜ್ಮಹಲ್ ಆಯ್ತು. ಷಹಜಹಾನ್ನೇ ಸ್ವತಃ ಇದನ್ನು ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾನೆ” ಎಂದರು.
”ಕುತುಬ್ ಮಿನಾರ್ ಕಟ್ಟಿಸಿದ್ದು ಕುತು್ಬುದ್ದೀನ್ ಐಬಕ್ ಅನ್ನೋ ಸುಳ್ಳು ಇತಿಹಾಸ ಸೃಷ್ಟಿ ಮಾಡಲಾಗಿದೆ. ಆದ್ರೆ ಅದು ಜೈನರ 24ನೇ ತೀರ್ಥಂಕರ ಮಹಾವೀರರ ದೇವಾಲಯವಾಗಿತ್ತು” ಅಂತಲೂ ಹೆಗಡೆ ಹೇಳಿದ್ರು.
ಅಷ್ಟೇ ಅಲ್ಲದೆ ಇದೇ ವೇಳೆ ” ಕಮ್ಯೂನಿಸ್ಟರು ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು. ಹಿಂದೂ ಹುಡುಗಿ ಮೈ ಮುಟ್ಟಿದರೆ ಕೈ ಇರಬಾರದು. ಇತಿಹಾಸ ಬರೆಯೋದೆ ಹೀಗೆ, ಪೌರುಷ ಇದ್ರೆ ಇತಿಹಾಸ ಬರೆಯಿರಿ” ಎಂಬ ವಿವಾದಿತ ಹೇಳಿಕೆಯನ್ನೂ ನೀಡಿದ್ರು.
ಇನ್ನು ಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರು ಕೊಡಗಿನಲ್ಲಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,”ಕೊಡಗಿನಲ್ಲಿ ನಡೆಯುವ ಸಮಾಜಘಾತುಕ ಚಟುವಟಿಕೆ ಗಮನಿಸಿ, ಮನೆಮುರುಕರು ಕೊಡಗು ಪ್ರವೇಶಿಸಿದರೆ ಮಣ್ಣಲ್ಲಿ ಮಣ್ಣಾಗಿಸಿ” ಎಂದರು.