Friday, July 19, 2024

ಕಳೆದ ರಾಜ’ಕೀ’ಯ ಹುಡುಕೋಣ!

ಕಾಲದ ಓಟ ತಡೆಯೋರು ಯಾರು? ವರ್ಷಪೂರ್ತಿ ನಡೆದ ರಾಜಕೀಯ ಘಟನೆ, ವಿದ್ಯಮಾನಗಳ ಅವಲೋಕನ ಸಾಕಷ್ಟು ಹೊಸ ಹಾದಿಗೆ ಮುನ್ನುಡಿಯಾದ್ರೆ , ಮುಂದಿನ ಹೆಜ್ಜೆಗಳನ್ನು ಜಾಗ್ರತೆಯಿಂದ, ಉತ್ಸಾಹದಿಂದ ಇರಿಸಲು ಪ್ರೇರೇಪಿಸುತ್ತದೆ. ಇಡೀ ವರ್ಷ ಪೂರ್ತಿ ನಡೆದ ರಾಜಕೀಯ ವಿದ್ಯಮಾನಗಳ ಬಗ್ಗೆ ಡೀಟೇಲ್ಸ್ ಇಲ್ಲಿದೆ. 
ಕಳೆಯಿತು ಮತ್ತೊಂದು ವರ್ಷ : 2018ರ ಇಡೀ ವರ್ಷ ಚುನಾವಣೆಯ ಉತ್ಸವ-ಉತ್ಸಾಹ ಕಂಡುಬಂತು. ಎಂಟು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದರೆ, ಹಲವೆಡೆ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ. ಬಿಜೆಪಿಯ ಗೆಲುವಿನ ಓಟಕ್ಕೆ ಬೇಕ್ ಹಾಕಿದ್ರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರ ಕಳೆದುಕೊಂಡಿತು.
ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 104 ಸ್ಥಾನಗಳಿಸಿ ಬಹುಮತ ಸಾಬೀತು ಪಡಿಸುವಲ್ಲಿ ಎಡವಿದ್ರೆ, ಒಲಿದು ಬಂದ ಅವಕಾಶದಲ್ಲಿ ಕಾಂಗ್ರೆಸ್​ ಬೆಂಬಲ ಪಡೆದು ಎಚ್​ಡಿಕೆ ಮುಖ್ಯಮಂತ್ರಿ ಗಾದಿಗೆ ಏರಿದ್ರು. ಈ ಮೂಲಕ ಸಿದ್ದು ಪರ್ವ ಮುಗಿದು ಕುಮಾರ ಪರ್ವ ಆರಂಭವಾಗಿದೆ. ಆದ್ರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಕೊರಗಲ್ಲಿ ಬಿಎಸ್​ವೈ ಪಡೆ ಇನ್ನೂ ಕಾಲಕಳೆಯುತ್ತಲೇ ಇದೆ. 
ಈ ವರ್ಷ ಆರಂಭವಾಗಿದ್ದೇ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರಗಳ ಭರಾಟೆಯೊಂದಿಗೆ. ಕಳೆದ ಐದು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಬಲವಾಗಿ ಬೇರೂರಿದ್ದ ಕಾಂಗ್ರೆಸ್​ ಸರ್ಕಾರವನ್ನ ಸೋಲಿಸಲು ಬಿಜೆಪಿ ಮೋದಿ ನೇತೃತ್ವದಲ್ಲಿ ಬಾರಿ ಪ್ರಚಾರಗಳನ್ನ ನೆಚ್ಚಿಕೊಂಡಿದ್ರೆ, ಸಿದ್ದು ರಾಹುಲ್​ ಗಾಂದಿಯನ್ನ ಕರೆತಂದು ಎತ್ತಿನಗಾಡಿಗಳಲ್ಲಿ ತಿರುಗಾಡಿಸಿ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ರು.

ಮೋದಿ ಏಟಿಗೆ ಪ್ರತಿ ಏಟು ನೀಡ್ತಿದ್ದ ಸಿದ್ದು : ಪ್ರಾರಂಭದಲ್ಲಿ ಸಿದ್ದು ವರ್ಸಸ್​ ಯಡಿಯೂರಪ್ಪ ಎಂದಿದ್ದ ಚುನಾವಣೆ ಪ್ರಚಾರ ಬರುಬರುತ್ತಾ ಸಿದ್ದು ವರ್ಸಸ್​ ಮೋದಿ ಎನ್ನುವಷ್ಟರ ಮಟ್ಟಿಗೆ ಹೋಗಿತ್ತು..ಈ ಮೂಲಕ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ್ರು. ಆದ್ರೆ, ಚುನಾವಣೆ ನಂತರ ಬಂದ ಪಲಿತಾಂಶ ಸಿದ್ದರಾಮಯ್ಯ ಅವರನ್ನ ಸ್ವಲ್ಪ ಮೆತ್ತಗೆ ಮಾಡಿದ್ರೆ ಬಿಜೆಪಿಯನ್ನ ಅಧಿಕಾರದ ಅಂಚಿಗೆ ತಂದು ನಿರಾಶೆ ಆಗುವಂತೆ ಮಾಡಿತು. ಇದರ ಮಧ್ಯೆ ವಿಪಕ್ಷ ಸ್ಥಾನ ಪಡೆಯಲು ಬೇಕಾದ ಬಹುಮತ ವಿಲ್ಲದ ಪಕ್ಷ ಅಧಿಕಾರಕ್ಕೆ ಹೇರಿದ್ದು ರಾಜಕೀಯ ಮೇಲಾಟಗಳ ವಿಪರ್ಯಾಸವೇ ಸರಿ.
ಪ್ಲೋ
 ಕೈ ಮೇಲಾಟದಲ್ಲಿ ಮತ್ತೆ ಸಿದ್ದು ಕಮಾಲ್​ : ಇನ್ನು ಸಿದ್ದು ಅವಧಿ ಮುಗಿದು ಎಚ್​ಡಿಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದ ಚೌಕಾಸಿ ಶುರುವಾಗಿ ಸರ್ಕಾರವೇ ಬಿದ್ದುಹೋಗುತ್ತೆ ಎನ್ನುವ ಸನ್ನಿವೇಶ ನಿರ್ಮಾಣವಾಗಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಈ ಸನ್ನಿವೇಶ ಬಳಸಿಕೊಂಡು ಮತ್ತೆ ಪಕ್ಷದ ಮೇಲೆ ತಮ್ಮ ಹಿಡಿತ ಬಲಮಾಡಿಕೊಂಡಿದ್ದು ಕೂಡ ಇತಿಹಾಸ. ಇನ್ನು 2017ರಂತೆ 2018ರಲ್ಲಿ ಕೂಡ ಡಿಕೆಶಿ ಅವರ ಮೇಲಿನ ಐಟಿ ಕೇಸ್​ ವಿಚಾರಣೆ ಮುಂದುವರೆಯಿತು. 
ಇನ್ನೂ ಕರ್ನಾಟಕದಲ್ಲಿ ಉಂಟಾದ ಸೋಲಿನ ಪ್ರಭಾವ ಲೋಕಸಭಾ ಚುನಾವಣೆ ಮೇಲಾಗದಿರಲಿ ಎಂಬ ಚಿಂತೆ, ತಳಮಳ ಕೈ ನಾಯಕರಲ್ಲಿ ಮನೆಮಾಡಿತು. ಇದೇ ಕಾರಣಕ್ಕೆ ಜೆಡಿಎಸ್​ ಜೊತೆ ಮೈತ್ರಿ ಸರ್ಕಾರಕ್ಕೆ ಶ್ರೀಕಾರ ಬರೆಯಲಾಯ್ತು. ಮೈತ್ರಿಕೂಟದ ದೋಸ್ತಿಗಳು ಕೂಡ ಅದಲು ಬದಲಾದರು.
ದೇಶದ ರಾಜಕೀಯ ನಕ್ಷೆ ಬದಲಾದ ವರ್ಷ 2018. ಕಾಂಗ್ರೆಸ್​ ಕರ್ನಾಟಕದಲ್ಲಿ ಮೈತ್ರಿ ಮೂಲಕ ಮತ್ತೇ ಅದಿಕಾರಕ್ಕೆ ಬಂದ್ರೆ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ 15 ವರ್ಷದ ಬಳಿಕ, ರಾಜಸ್ಥಾನದಲ್ಲಿ ಐದು ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿತು. ಈ ಮೂಲಕ ಕೇಸರಿಯ ವಿಸ್ತಾರವನ್ನು ತಡೆದ ಹಸ್ತ ಗೆಲುವಿನ ಟಾನಿಕ್​ನಿಂದ ಕೊಂಚ ಚೇತರಿಸಿಕೊಂಡಿತು. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಸರಿಯಾಗಿ ಒಂದು ವರ್ಷಕ್ಕೆ ಫಲಿತಾಂಶ ಪ್ರಕಟವಾಗಿದ್ದರಿಂದ, ‘ಈ ಗೆಲುವನ್ನು ಅವರಿಗೆ ಉಡುಗೊರೆ ರೂಪದಲ್ಲಿ ನೀಡಿದ್ದೇವೆ’ ಎಂದು ‘ಕೈ’ ನಾಯಕರು ಸಹ ಹೇಳಿಕೊಂಡರು.

 ಆರು ತಿಂಗಳ ಬಳಿಕ ಸಂಪುಟ ವಿಸ್ತರಣೆ : ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಾಕಿಯಿದ್ದ ಖಾತೆಗಳಿಗೆ ಸಂಪುಟ ವಿಸ್ತರಣೆ ನಡೆದಿರಲಿಲ್ಲ. ಕಳೆದ ಆರು ತಿಂಗಳಿಂದಲೂ ಮುಂದೂಡತ್ತಲೇ ಬರಲಾಗಿತ್ತು. ಆದ್ರೆ ಅಂತಿಮವಾಗಿ ಸಂಪುಟ ವಿಸ್ತರಣೆ ನಡೆದು ನೂತನ ಸಚಿವರು ಎಂಟ್ರಿ ಕೊಟ್ಟಿದ್ದಾರೆ. ಇಲ್ಲೂ ಕೂಡ ಖಾತೆ ಕ್ಯಾತೆ ಉಂಟಾಗಿತ್ತು. ಆದ್ರೆ ಇಲ್ಲೂ ಸಿದ್ದು ತಮ್ಮ ಆಪ್ತರಿಗೆ ಮಣೆ ಹಾಕಿ ತಮ್ಮ ಕೈ ಇನ್ನಷ್ಟು ಭದ್ರ ಪಡಿಸಿಕೊಂಡಿದ್ದಾರೆ..
ಪಿಡಿಪಿ ಜತೆಗೆ ಮೈತ್ರಿಭಂಗ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ, ಹಿಂಸಾಚಾರ, ಮೂಲಭೂತವಾದಿತನ ಹೆಚ್ಚುತ್ತಿದೆ ಎಂದು ಆರೋಪಿಸಿದ ಬಿಜೆಪಿ ಪಿಡಿಪಿಯೊಂದಿಗಿನ ಮೈತ್ರಿ ಕಡಿದುಕೊಂಡಿತು(ಜೂನ್ 19). ಪರಿಣಾಮ, ಮೂರೂವರೆ ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಎರಡು ಸೈದ್ಧಾಂತಿಕ ವೈರುಧ್ಯದ ಪಕ್ಷಗಳ ಸಮ್ಮಿಶ್ರ ಸರ್ಕಾರ ಪತನವಾಯಿತು. ಬಳಿಕ, ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತಳೆಯುವ ಸ್ವಾತಂತ್ರ್ಯವನ್ನು ರಾಜ್ಯಪಾಲರಿಗೆ ನೀಡಿದೆ. ನ್ಯಾಷನಲ್ ಕಾನ್ಫರೆನ್ಸ್​, ಕಾಂಗ್ರೆಸ್ ಮತ್ತು ಕೆಲ ಪಕ್ಷಗಳು ಸರ್ಕಾರ ರಚನೆಗೆ ಯತ್ನಿಸಿದವಾದರೂ, ಫಲ ನೀಡಲಿಲ್ಲ.
ಕುಶ್ವಾಹಾ ಎನ್​​ಡಿಎಯಿಂದ ಹೊರಕ್ಕೆ:  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗಿನ ವೈಮನಸ್ಯ ಹಾಗೂ ಲೋಕಸಭೆ ಚುನಾವಣೆ ಸೀಟು ಹಂಚಿಕೆಯಲ್ಲಿನ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಾಜಿ ರಾಜ್ಯ ಸಚಿವ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಎನ್​ಡಿಎ ಮೈತ್ರಿಕೂಟದಿಂದ ಡಿ.10ರಂದು ಹೊರಬಂದರು. ಬಳಿಕ ಅವರು ಮಹಾಘಟಬಂಧನದ ಜತೆಗೆ ಗುರುತಿಸಿಕೊಂಡಿದ್ದಾರೆ.
 ಪಂಚರಾಜ್ಯ ಫೈಟ್ : 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 28ರಂದು ಚುನಾವಣೆ ನಡೆಯಿತು. ಮೂರು ಅವಧಿಗೆ ಆಳ್ವಿಕೆ ನಡೆಸಿದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಪಕ್ಷವನ್ನು ಬಹುಮತಕ್ಕೆ ಸಮೀಪ ಕೊಂಡೊಯ್ಯುವಲ್ಲಿ ಯಶಸ್ವಿಯಾದರೂ, ವಿಜಯಲಕ್ಷ್ಮಿ ಕಾಂಗ್ರೆಸ್​ಗೆ ಒಲಿದಳು. ಕಾಂಗ್ರೆಸ್ 114 ಸ್ಥಾನ ಪಡೆದುಕೊಂಡರೆ, ಬಿಜೆಪಿ 109 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ಹಿರಿಯ ನಾಯಕ ಕಮಲ್​ನಾಥ್ ಮುಖ್ಯಮಂತ್ರಿ ಪಟ್ಟಕ್ಕೇರುವ ಮೂಲಕ, ಜ್ಯೋತಿರಾದಿತ್ಯ ಸಿಂಧಿಯಾ ನಿರಾಶೆ ಅನುಭವಿಸಿದರು.
ರಾಜಸ್ಥಾನದಲ್ಲಿ ಕೈ ಕಮಾಲ್​ : 200 ಸದಸ್ಯಬಲದ ರಾಜಸ್ಥಾನದಲ್ಲಿ ಕಾಂಗ್ರೆಸ್ ಮೈತ್ರಿಕೂಟ 100 ಸ್ಥಾನ ಪಡೆದುಕೊಂಡರೆ, ಬಿಜೆಪಿ 73 ಸ್ಥಾನಗಳಿಗೆ ಸೀಮಿತವಾಯಿತು. ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾದರೆ, ಸಚಿನ್ ಪೈಲಟ್ ಉಪಮುಖ್ಯಮಂತ್ರಿಯಾದರು. ಡಿಸೆಂಬರ್ 7ರಂದು ಈ ರಾಜ್ಯದಲ್ಲಿ ಚುನಾವಣೆ ನಡೆದಿತ್ತು. ಛತ್ತೀಸ್​ಗಢದಲ್ಲಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಡಾ.ರಮಣ್ ಸಿಂಗ್ ಅಧಿಕಾರದಿಂದ ನಿರ್ಗಮಿಸಬೇಕಾಯಿತು. ಇಲ್ಲಿನ 90 ಸ್ಥಾನಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಿತು. ಕಾಂಗ್ರೆಸ್ 68 ಸ್ಥಾನದ ಮೂಲಕ ಭಾರಿ ಬಹುಮತ ಪಡೆದುಕೊಂಡರೆ, ಬಿಜೆಪಿ 15 ಸ್ಥಾನ ಪಡೆದು ಆಘಾತ ಅನುಭವಿಸಿತು.
 ಪುಟ್ಟರಾಜ್ಯ ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. 40 ಸದಸ್ಯಬಲದ ವಿಧಾನಸಭೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ 26 ಸ್ಥಾನ ಪಡೆಯುವ ಮೂಲಕ ಸರ್ಕಾರ ಸ್ಥಾಪಿಸಿದರೆ, ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್​ಗೆ ದಕ್ಕಿದ್ದು ಕೇವಲ ಐದು ಸ್ಥಾನ. ತೆಲಂಗಾಣದಲ್ಲಿ ಭಾರಿ ವಿಶ್ವಾಸದಿಂದ ಅವಧಿಪೂರ್ವವೇ ವಿಧಾನಸಭೆ ವಿಸರ್ಜಿಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಮತ್ತೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಯಿತು. 119 ಸ್ಥಾನಗಳ ಪೈಕಿ ಟಿಆರ್​ಎಸ್ 88 ಸ್ಥಾನ ಪಡೆದು, ಕೆ.ಚಂದ್ರಶೇಖರ್ ರಾವ್ ಎರಡನೇ ಬಾರಿ ಸಿಎಂ ಗದ್ದುಗೆಯೇರಿದರು.
 ಈಶಾನ್ಯ ಭಾರತ ಕಾಂಗ್ರೆಸ್​ ಮುಕ್ತ : ಈಶಾನ್ಯ ಭಾರತದ ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವ ಕಂಡರೆ, ಬಿಜೆಪಿ ನೆಲೆ ವಿಸ್ತರಿಸಿಕೊಂಡಿತು. ತ್ರಿಪುರದಲ್ಲಿ ಎಡಪಕ್ಷದ ಭದ್ರಕೋಟೆ ಕುಸಿದು, 25 ವರ್ಷಗಳ ಬಳಿಕ ಸಿಪಿಐ(ಎಂ) ಸರ್ಕಾರ ಅಧಿಕಾರ ಕಳೆದುಕೊಂಡಿತು. ತ್ರಿಪುರದ ಒಟ್ಟು 59 ಕ್ಷೇತ್ರಗಳಲ್ಲಿ ಬಿಜೆಪಿ 43 ಸ್ಥಾನಗಳೊಂದಿಗೆ ಭಾರಿ ಬಹುಮತ ಪಡೆದುಕೊಂಡಿತು. ಬಿಜೆಪಿ ಯುವನಾಯಕ ಬಿಪ್ಲಬ್ ಕುಮಾರ್ ಮುಖ್ಯಮಂತ್ರಿ ಹುದ್ದೆಯೇರಿದರು. ನಾಗಾಲ್ಯಾಂಡ್​ನ 60 ಕ್ಷೇತ್ರಗಳಲ್ಲಿ ಎನ್​ಡಿಪಿಪಿ-ಎನ್​ಡಿಎ ಮೈತ್ರಿಕೂಟ 34 ಸ್ಥಾನಗಳಲ್ಲಿ ಗೆಲುವು ಕಂಡು ಬೀಗಿತು. ಮೇಘಾಲಯದಲ್ಲಿ (ಒಟ್ಟು 60 ಕ್ಷೇತ್ರ) ಎನ್​ಪಿಪಿ ಮೈತ್ರಿಕೂಟ ಅಧಿಕಾರಕ್ಕೇರಿ ಕೋನಾರ್ಡ್ ಸಂಗ್ಮಾ ಮುಖ್ಯಮಂತ್ರಿಯಾದರು.
ಎನ್​ಡಿಎಗೆ ನಾಯ್ಡು ಶಾಕ್! : ವಿಶೇಷ ಸ್ಥಾನಮಾನ ನೀಡಿಕೆಗಾಗಿ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮಾರ್ಚ್ 18ರಂದು ಕೇಂದ್ರದ ಆಡಳಿತಾರೂಢ ಎನ್​ಡಿಎಯಿಂದ ಹೊರನಡೆಯಿತು. ಈ ಮೂಲಕ ದಕ್ಷ್ಷಿಣ ಭಾರತದ ಅತಿದೊಡ್ಡ ಮಿತ್ರಪಕ್ಷವನ್ನು ಬಿಜೆಪಿ ಕಳೆದುಕೊಂಡಿತು.
 ಬ್ರೇಕಪ್ ಮತ್ತು ಹೊಸ ದೋಸ್ತಿ! : ಹಲವು ಪ್ರಾದೇಶಿಕ ಪಕ್ಷಗಳು ಒಟ್ಟಾಗಿ, ತೃತೀಯ ಶಕ್ತಿಯಾಗಿ ಹೊಮ್ಮುವ ಕಸರತ್ತು ಈ ವರ್ಷವೂ ಮುಂದುವರಿಯಿತು. ‘ಮಹಾಘಟಬಂಧನ್’ ಹೆಸರಿನಲ್ಲಿ ‘ರಾಜಕೀಯ ಒಗ್ಗಟ್ಟು’ ಪ್ರದರ್ಶಿಸುವ ಪ್ರಯತ್ನ ನಡೆಯಿತಾದರೂ ನಿರೀಕ್ಷಿತ ಫಲ ಕಾಣಲಿಲ್ಲ. ಮೈತ್ರಿಕೂಟದಿಂದ ಕೆಲ ಪಕ್ಷಗಳು ಹೊರ ಬಂದರೆ, ಮತ್ತೆ ಕೆಲ ಪಕ್ಷಗಳ ಹೊಸದಾಗಿ ಎಂಟ್ರಿಯಾದವು.
ವಿಶ್ವಾಸಮತದಲ್ಲಿ ಸರ್ಕಾರ ಪಾಸ್ : ತೆಲುಗುದೇಶಂ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ(ಜುಲೈ 20) ನಿರ್ಣಯಕ್ಕೆ ಹೀನಾಯ ಸೋಲು ಉಂಟಾಗಿ, ಮೋದಿ ಸರ್ಕಾರ ಸುಭದ್ರ ಎಂಬ ಸಂದೇಶ ರವಾನಿಸಿತು. ‘ನನ್ನನ್ನು ಈ ಸ್ಥಾನದಿಂದ (ಪ್ರಧಾನಿ) ಎಬ್ಬಿಸಲು 125 ಕೋಟಿ ದೇಶವಾಸಿಗಳಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ‘ಅವಿಶ್ವಾಸದ ಮಾತು ಏಕೆ ಬಂತು?’ ಎಂದು ತರಾಟೆಗೆ ತೆಗೆದುಕೊಂಡರು. 451 ಸದಸ್ಯರು ಸದನದಲ್ಲಿ ಹಾಜರಿದ್ದರು. ಸರ್ಕಾರದ ಪರ 325 ಮತಗಳು ಬಿದ್ದರೆ, ಅವಿಶ್ವಾಸ ನಿರ್ಣಯದ ಪರ 126 ಮತಗಳು ಬಿದ್ದವು.
ರಾಹುಲ್ ತಬ್ಬಿಬ್ಬು : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಳಿತಲ್ಲಿಗೆ ಹೋಗಿ ಆಲಂಗಿಸಿಕೊಂಡರು. ಇದರಿಂದ ಚಕಿತರಾದ ಮೋದಿ, ರಾಹುಲ್​ರನ್ನು ಕರೆದು‘ಚೆನ್ನಾಗಿ ಮಾತಾಡಿದ್ದೀರಿ’ ಎಂದು ಬೆನ್ನುತಟ್ಟಿದರು. ರಾಹುಲ್ ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ಪಕ್ಷದ ಸಂಸದರತ್ತ ಕಣ್ಣು ಮಿಟುಕಿಸಿದ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಯಿತಲ್ಲದೆ, ರಾಹುಲ್ ತಬ್ಬಿಬ್ಬಾಗಬೇಕಾಯಿತು.
ಕಮಲ್ ನ್ಯೂ ಜರ್ನಿ:  ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯದಲ್ಲೂ ‘ಕಮಾಲ್’ ಮಾಡುವ ಉದ್ದೇಶದಿಂದ ಫೆ.22ರಂದು ‘ಮಕ್ಕಳ್ ನಿಧಿ ಮೈಯಮ್ ಪಕ್ಷಕ್ಕೆ ಚಾಲನೆ ನೀಡಿದರು. ಸದ್ಯ 2019ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಈ ಪಕ್ಷ ಸ್ಥಾಪನೆಗೂ ಮೊದಲು ಕಮಲ್ ಹಾಸನ್ ಅನೇಕ ಮುಖಂಡರನ್ನು ಭೇಟಿಯಾದರು. ನಟ ರಜನಿಕಾಂತ್, ಡಿಎಂಡಿಕೆ ನಾಯಕ ಮತ್ತು ನಟ ವಿಜಯಕಾಂತ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ಸಿಎಂ ಪಿಣರಾಯಿ ವಿಜಯನ್ ಈ ಪೈಕಿ ಪ್ರಮುಖರು.
 ಡಿಎಂಕೆ ಚುಕ್ಕಾಣಿ ಸ್ಟಾಲಿನ್ ಕೈಗೆ :  ಡಿಎಂಕೆ ಅಧ್ಯಕ್ಷರಾಗಿ 50 ವರ್ಷ ಪಕ್ಷವನ್ನು ಮುನ್ನಡೆಸಿದ್ದ ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿ ನಿಧನದ ಬಳಿಕ ಪಕ್ಷವನ್ನು ಮುನ್ನಡೆಸುವ ವಿಷಯವಾಗಿ ಅವರ ಮಕ್ಕಳಾದ ಎಂ.ಕೆ. ಸ್ಟಾಲಿನ್ ಮತ್ತು ಎಂ.ಕೆ. ಅಳಗಿರಿ ನಡುವೆ ಜಟಾಪಟಿ ಉಂಟಾಯಿತು. ಕಡೆಗೂ, ಸ್ಟಾಲಿನ್ ಆಗಸ್ಟ್ 14ರಂದು ಪಕ್ಷದ ಅಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು.
 ರಾಜಾ ಮರು ಎಂಟ್ರಿ : 2ಜಿ ಹಗರಣದಲ್ಲಿ ದೋಷಮುಕ್ತಗೊಂಡ ಡಿಎಂಕೆ ಪಕ್ಷದ ಎ. ರಾಜಾ ಮತ್ತು ಕರುಣಾನಿಧಿ ಪುತ್ರಿ ಕನಿಮೋಳಿ ರಾಜಕೀಯವಾಗಿ ಮರುಹುಟ್ಟು ಪಡೆಯಲು ಯತ್ನಿಸುತ್ತಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಪಡೆದುಕೊಳ್ಳಲು ರಾಜಾ ಪ್ರಯತ್ನಿಸುತ್ತಿದ್ದರೆ, ಕನಿಮೋಳಿ ಸ್ಟಾಲಿನ್ ಜತೆಗೂಡಿ ಹುರುಪಿನಿಂದ ಪಕ್ಷ ಸಂಘಟನೆಗಾಗಿ ಸಂಚರಿಸುತ್ತಿದ್ದಾರೆ.
ರಜನಿ ರಾಜಕೀಯ ಹವಾ: ತಮಿಳುನಾಡಿನ ಸೂಪರ್​ಸ್ಟಾರ್ ರಜನೀಕಾಂತ್ ‘ರಜನಿ ಮಕ್ಕಳ್ ಮಂದರಮ್ ಪಕ್ಷ ಸ್ಥಾಪಿಸಿ, ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಲು ಯತ್ನಿಸಿದರು. ‘ಯಾವುದೇ ಕಾರಣಕ್ಕೂ ಜಾತಿ, ಮತ, ಧರ್ಮವನ್ನು ಆಧರಿಸಿ ರಾಜಕೀಯ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ ರಜನಿ 2021ರ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.
 ಲೋಕಸಭಾ ಚುನಾವಣೆ ಮೇಲೆ ಕಣ್ಣು : 2019ರ ಏಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಎಲ್ಲ ಪ್ರಮುಖ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಮತ್ತೊಮ್ಮೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಬೇಕು ಎಂದು ನಿರೀಕ್ಷೆ ಇರಿಸಿಕೊಂಡಿರುವ ಬಿಜೆಪಿ ಕಳೆದ ನಾಲ್ಕೂವರೆ ವರ್ಷಗಳ ಸಾಧನೆಯನ್ನು ಬಿಂಬಿಸಲು ಮತ್ತು 300+ ಗುರಿಯನ್ನು ತಲುಪಲು ಸಿದ್ಧತೆ ನಡೆಸಿದೆ.

 ಕಾಡಿದ ಆಘಾತಗಳು: ದೇಶದ 10ನೇ ಪ್ರಧಾನಿಯಾಗಿ ರಾಜಕೀಯ ಧುರೀಣರಲ್ಲದೆ, ಜನಸಾಮಾನ್ಯರ ಮನಸ್ಸಿನಲ್ಲಿಯೂ ಛಾಪು ಒತ್ತಿದ ಧೀಮಂತ ನಾಯಕ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಆಗಸ್ಟ್ 16ರಂದು ನಿಧನರಾದರು. ಎನ್​ಡಿಎ ಕೂಟವನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಅವರದ್ದು. ಪೋಖ್ರಾನ್ ಮರಳುಗಾಡಿನಲ್ಲಿ ಅಣುಪರೀಕ್ಷೆಯಲ್ಲಿ ಯಶಸ್ಸು, 1999ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಲಾಹೋರ್-ದೆಹಲಿ ನಡುವೆ ಬಸ್ ಸಂಚಾರ ಆರಂಭ, ಕಾರ್ಗಿಲ್ ಯುದ್ಧವನ್ನು ಸಮರ್ಥವಾಗಿ ಮುನ್ನಡೆಸಿ ದೇಶಕ್ಕೆ ಜಯ ತಂದುಕೊಟ್ಟ ಗರಿಮೆ ವಾಜಪೇಯಿ ಅವರಿಗೆ ಸಲ್ಲುತ್ತದೆ.
 ವಿಪಕ್ಷದಲ್ಲಿದ್ದರೂ ಅನೇಕ ರಾಜಕೀಯ ಧುರೀಣರು ವಾಜಪೇಯಿ ಬಗ್ಗೆ ಗೌರವ ಹೊಂದಿದ್ದರು. ರಾಜಕೀಯ ವಲಯದಲ್ಲಿ ದೇಶ ಕಂಡ ಏಕೈಕ ಅಜಾತಶತ್ರು ನಾಯಕ ಎಂದೇ ವಾಜಪೇಯಿ ಅವರನ್ನು ಹೊಗಳಲಾಗುತ್ತಿತ್ತು. ದೇಶಕ್ಕೆ ಅವರ ಕೊಡುಗೆಯನ್ನು ಸ್ಮರಿಸುತ್ತ ಹಿಮಾಲಯದ ಶಿಖರಗಳಿಗೆ ವಾಜಪೇಯಿ ನಾಮಕರಣ ಸೇರಿದಂತೆ, ಸಂಸತ್​ನ ಸೆಂಟ್ರಲ್ ಹಾಲ್​ನಲ್ಲಿ ಅವರ ದೇಹದ ಗಾತ್ರಕ್ಕೆ ಸಮನಾದ ಭಾವಚಿತ್ರವನ್ನು ಅಳವಡಿಸಲು ಸಂಸದೀಯ ಸಮಿತಿ ತೀರ್ಮಾನಿಸಿದೆ.
 ‘ಅನಂತ’ ಚೇತನವಾದ ಕುಮಾರ್
ವಾ/ಒ3: ಆರು ಬಾರಿ ಸಂಸದರಾಗಿ ದೆಹಲಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಕೇಂದ್ರ ಮತ್ತು ರಾಜ್ಯದ ಕೊಂಡಿಯಂತಿದ್ದ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ನ.12ರಂದು ನಿಧನರಾದರು. ಅವರು ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಸಂಸದೀಯ ವ್ಯವಹಾರಗಳ ಖಾತೆ ನಿಭಾಯಿಸಿ ಭೇಷ್ ಎನಿಸಿಕೊಂಡಿದ್ದರು.
ದ್ರಾವಿಡನಿಧಿ ಕಣ್ಮರೆ : ದ್ರಾವಿಡ ಚಳವಳಿಯನ್ನು ತಮಿಳುನಾಡಿನಾದ್ಯಂತ ವಿಸ್ತರಿಸಿ 2 ದಶಕಗಳ ಕಾಲ ಮುಖ್ಯಮಂತ್ರಿಯಾಗಿದ್ದ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಆ.7ರಂದು ಮೃತಪಟ್ಟರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಗೀತರಚನಾ ಸಾಹಿತಿಯಾಗಿ ಸಿನಿಮಾ ರಂಗಕ್ಕೆ ಬಂದ ಕರುಣಾನಿಧಿ, ತಮಿಳು ಸಾಹಿತ್ಯ ಸಂಬಂಧಿತ ಆಕರ್ಷಕ ಸಾಲುಗಳನ್ನು ಗೀತೆಗಳಿಗೆ ಅಳವಡಿಸುವ ಮೂಲಕ ಬಹುಬೇಗ ಜನಪ್ರಿಯತೆ ಗಳಿಸಿದರು.
ನಾಟಕ, ಕಥೆ, ಕಾದಂಬರಿಗಳನ್ನು ರಚಿಸಿ ತಮಿಳು ಜನರಿಂದ ಕಲೈನಾರ್(ಕಲಾವಿದ) ಎಂದು ಬಿರುದು ಪಡೆದರು. ಅಣ್ಣಾದೊರೈ ಬಳಿಕ ಡಿಎಂಕೆ ಚುಕ್ಕಾಣಿ ಹಿಡಿದ ಕರುಣಾನಿಧಿ, ಪ್ರಾದೇಶಿಕವಾಗಿ ಭಾರಿ ಪ್ರಾಬಲ್ಯ ಹೊಂದಿದ್ದರು. ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಪ್ರಾದೇಶಿಕ ಪಕ್ಷಗಳ ಬೆಂಬಲಕ್ಕೆ ರಾಷ್ಟ್ರೀಯ ಪಕ್ಷಗಳು ಎದುರು ನೋಡುವಂಥ ಪರಿಸ್ಥಿತಿ ನಿರ್ವಿುಸಿ, ಆ ಮೂಲಕ ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದವರಲ್ಲಿ ಕರುಣಾನಿಧಿ ಅಗ್ರಗಣ್ಯರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಂಡಿದ್ದರು ಎನ್ನುವುದು ವಿಶೇಷ.
 ಅನಾರೋಗ್ಯಕ್ಕೆ ಸೆಡ್ಡು ಹೊಡೆದ ಪರಿಕ್ಕರ್ : ರಕ್ಷಣಾ ಸಚಿವರಾಗಿ ಮಹತ್ವದ ನಿರ್ಧಾರಗಳಿಂದ ಸೇನಾಪಡೆಗಳಲ್ಲಿ ಹೊಸ ವಿಶ್ವಾಸ ಮೂಡಿಸಿದವರು ಮನೋಹರ್ ಪರಿಕ್ಕರ್. ಗೋವಾ ಮುಖ್ಯಮಂತ್ರಿಯಾದ ಹೊತ್ತಲ್ಲೇ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಬಂದೆರಗಿತು. ಆಗಸ್ಟ್​ನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ ಬಳಿಕ ಅಮೆರಿಕಕ್ಕೆ ತೆರಳಿ 3 ತಿಂಗಳ ಚಿಕಿತ್ಸೆ ಬಳಿಕ ಹಿಂದಿರುಗಿದರು. ಪ್ರಸ್ತುತ ದೆಹಲಿ ಏಮ್ಸ್​ನಲ್ಲಿ ಕೆಲಕಾಲ ಚಿಕಿತ್ಸೆ ಪಡೆದು ಗೋವಾಗೆ ಮರಳಿರುವ ಪರಿಕ್ಕರ್, ತಮ್ಮ ನಿವಾಸದಲ್ಲೇ ಅಧಿಕಾರಿಗಳ ಸಭೆ, ವಿಡಿಯೋ ಕಾನ್ಪರೆನ್ಸ್ ಮೂಲಕ ಸಚಿವರಿಗೆ ಸೂಚನೆ ನೀಡುವ ಮೂಲಕ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.
ಈ ಮಧ್ಯೆ ಬಿಜೆಪಿಯ ಫೈರ್​ಬ್ರಾಂಡ್ ನಾಯಕಿಯರಾದ ಸುಷ್ಮಾ ಸ್ವರಾಜ್, ಉಮಾಭಾರತಿ 2019ರ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ. ಸುಷ್ಮಾ ಸ್ವರಾಜ್​ರಿಗೆ ಅನಾರೋಗ್ಯ ಕಾಡುತ್ತಿದ್ದರೆ, ಉಮಾಭಾರತಿ ಮುಂದಿನ ಒಂದೂವರೆ ವರ್ಷ ಗಂಗಾ ಕಲ್ಯಾಣ ಮತ್ತು ರಾಮ ಮಂದಿರ ಆಂದೋಲನದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
 ಮೋದಿ-ಷಾ ಜೋಡಿ ಮುಂದುವರಿದ ಮೋಡಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜಿಪಿ ಅಧ್ಯಕ್ಷ ಅಮಿತ್ ಷಾರ ಜೋಡಿ ಚರಿಷ್ಮಾ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದೆ. ಈ ವರ್ಷವೂ ಪ್ರಸಕ್ತ ಜೋಡಿ ಪ್ರವಾಸ ಮತ್ತು ರ್ಯಾಲಿಗಳ ವಿಚಾರದಲ್ಲಿ ವಿಕ್ರಮವನ್ನೇ ಸಾಧಿಸಿತು. ವಿಶೇಷವೆಂದರೆ, ಪಶ್ಚಿಮ ಬಂಗಾಳದಲ್ಲಿ ಅಮಿತ್ ಷಾರ ರ್ಯಾಲಿಗಳಿಗೆ ಜನಸಾಗರವೇ ಹರಿದು ಬಂದಿತ್ತು. ಈ ಹೊಸ ಅಲೆಯ ಪರಿಣಾಮ ಅಲ್ಲಿನ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಕಂಡುಬಂತು.
ತ್ರಿಪುರಾದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುವಲ್ಲಿ ಪಕ್ಷ ಯಶಸ್ವಿಯಾದದ್ದು ಇವರಿಬ್ಬರ ರಣನೀತಿಯಿಂದಲೇ. ಮೇಘಾಲಯದಲ್ಲೂ ಮೈತ್ರಿ ಮೂಲಕ ಎನ್​ಡಿಎ ಅಧಿಕಾರಕ್ಕೇರಿತು. ಹೀಗೆ, ಪಕ್ಷದ ನೆಲೆ ಇರದ ಸ್ಥಳ, ಪ್ರದೇಶಗಳಲ್ಲಿ ಕೇಸರಿ ಮಾರುತವನ್ನು ವಿಸ್ತರಿಸಿದ ಮೋದಿ-ಷಾ ಜೋಡಿ 2019ರ ಚುನಾವಣೆಗೆ 300+ ಗುರಿ ಇಟ್ಟುಕೊಂಡಿದೆ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿಯಿಂದ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎಂದು ಸಂಘಪರಿವಾರದ ಮುಖಂಡರು ಗಟ್ಟಿದನಿಯಲ್ಲಿ ಹೇಳಿದಾಗ, ಮೈತ್ರಿ ಕೊನೆಗೊಳಿಸಿ, ಸರ್ಕಾರದಿಂದ ಹೊರಬರುವ ನಿರ್ಧಾರ ಕೈಗೊಂಡರು. ಹಲವು ರಾಜ್ಯಗಳಲ್ಲಿ ನಾಯಕತ್ವದ ಕಗ್ಗಂಟು ತಾರಕಕ್ಕೆ ಏರುವ ಮೊದಲೇ ಪರಿಹರಿಸಿದರು.
ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರಾದರೂ, ಅಲ್ಲಿ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ. ಮುಖ್ಯವಾಗಿ, ಹಲವು ರಾಜ್ಯಗಳಲ್ಲಿ ಎರಡನೇ ಪೀಳಿಗೆಯ ನಾಯಕತ್ವವನ್ನು ತಯಾರು ಮಾಡಲು ಆಸಕ್ತಿ ತೋರಿರುವ ಮೋದಿ-ಷಾ ಪಕ್ಷ ಸಂಘಟನೆಗೆ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಸಿಧು ವಿವಾದದ ಸಿಕ್ಸರ್ :  ಸರಣಿ ಹೇಳಿಕೆಗಳು ಮತ್ತು ಪಾಕ್ ಭೇಟಿಯಿಂದ ವಿವಾದದ ಕಿಡಿ ಎಬ್ಬಿಸಿದ ಮಾಜಿ ಕ್ರಿಕೆಟರ್, ಪಂಜಾಬ್ ಸರ್ಕಾರದ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಇಡೀ ವರ್ಷ ವಿವಾದಗಳಿಂದಲೇ ಸುದ್ದಿಯಲ್ಲಿದ್ದರು. ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನಕ್ಕೆ ಭೇಟಿ ನೀಡುವುದು ಆಪ್ಯಾಯಮಾನ. ದಕ್ಷಿಣ ಭಾರತದಲ್ಲಿ ಭಾಷೆ ಮತ್ತು ಆಹಾರ ಸಮಸ್ಯೆ ಆಗುತ್ತದೆ. ನನ್ನ ದೇಶಾಭಿಮಾನವನ್ನು ಸಾಬೀತು ಮಾಡುವ ಅಗತ್ಯವಿಲ್ಲ ಎಂದು ವಿವಾದ ಮಾತುಗಳನ್ನ ಆಡಿದ್ದು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
 ಪ್ರಾದೇಶಿಕ ಪಕ್ಷಗಳ ಏರಿಳಿತದ ಹಾದಿ : ಬಹುತೇಕ ಪಕ್ಷಗಳು ಈ ವರ್ಷ ಗೆಲುವು-ಸೋಲು ಎರಡೂ ಕಂಡವು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ನ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವರ್ಚಸ್ಸು ಮುಂದುವರಿದಿದೆ. ‘ಏಕಲಾ ಚಲೋ ರೇ’ ಘೋಷಣೆ ಮೂಲಕ ಚುನಾವಣೆ ಗೆದ್ದಿದ್ದ ಬಂಗಾಳದ ಈ ದೀದಿ ಪ್ರಸಕ್ತ ಎನ್​ಡಿಎ ವಿರೋಧಿ ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಯತ್ನಿಸುತ್ತಿದ್ದಾರೆ. ಪ.ಬಂಗಾಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಟಿಎಂಸಿ ಪ್ರಾಬಲ್ಯ ಸಾಧಿಸಿದರೆ, ಬಿಜೆಪಿ ಹಲವೆಡೆ ಖಾತೆ ತೆರೆದು, ಆಶಾವಾದ ತಳೆಯಿತು. ಜಮ್ಮು-ಕಾಶ್ಮೀರದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿತು. ದಕ್ಷಿಣ ಕಾಶ್ಮೀರದ 4 ಜಿಲ್ಲೆಗಳಲ್ಲಿ ಅದು ಮೊದಲ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯಿತು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿಯ ವಿಜಯಯಾತ್ರೆ ಮುಂದುವರಿಯಿತು.
ರಾಮನ ಮೊರೆ ಹೋದ ಠಾಕ್ರೆ: ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಳ್ಳಲಾಗದೆ, ಉಳಿಸಿಕೊಳ್ಳಲೂ ಆಗದೆ ಪೇಚಿಗೆ ಸಿಲುಕಿರುವ ಶಿವಸೇನೆ ಮತ್ತೆ ಹಿಂದುತ್ವದ ಮಂತ್ರವನ್ನು ಜಪಿಸುತ್ತಿದೆ. ಇದೇ ಮೊದಲಬಾರಿಗೆ ಅಯೋಧ್ಯೆಯ ರಾಮ ಮಂದಿರ ಪರಿಸರಕ್ಕೆ ಭೇಟಿ ನೀಡಿದ ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ‘ರಾಮ ಮಂದಿರ ನಿರ್ವಣಕ್ಕೆ ಕೇಂದ್ರ ಸರ್ಕಾರ ಕಾನೂನು ತರಬೇಕು’ ಎಂದು ಆಗ್ರಹಿಸಿದರು.
ಸಮಾಜವಾದಿ ಪಕ್ಷದ ಒಳಬೇಗುದಿ ಇನ್ನೂ ತಣಿದಿಲ್ಲ. ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ಸಮಾಜವಾದಿ ಪಕ್ಷ ತೊರೆದು ಅ.23ರಂದು ತಮ್ಮದೇ ಆದ ಹೊಸ ರಾಜಕೀಯ ಪಕ್ಷ ಘೋಷಿಸಿದರು. ಮತ್ತೊಂದೆಡೆ, ಪಂಜಾಬಿನ ಅಕಾಲಿದಳದಲ್ಲೂ ಬಂಡಾಯ ಎದ್ದ ನಾಯಕರು ಹೊಸ ಪಕ್ಷ ಸ್ಥಾಪಿಸಿದ್ದಾರೆ.
ತೃತೀಯ ರಂಗ ಇನ್ನೂ ಸ್ಪಷ್ಟ ರಾಜಕೀಯ ಕಾರ್ಯಸೂಚಿ ಇಲ್ಲದೆ ಮುಂದುವರಿದಿದ್ದು, ನಾಯಕರು ಯಾರಾಗಬೇಕೆಂಬ ಗೊಂದಲವೇ ಅಲ್ಲಿ ಬಗೆಹರಿಯುತ್ತಿಲ್ಲ. ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸಖ್ಯ ಮಾಡಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಈಗ ‘ಹಸ್ತ’ವನ್ನು ದೂರವಿರಿಸಿದ್ದಾರೆ. ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಕೂಡ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದಾರೆ. ಒಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾದಳ ಮುಖ್ಯಸ್ಥ ನವೀನ್ ಪಟ್ನಾಯಕ್ ಎನ್​ಡಿಎ ಜತೆಗೆ ಗುರುತಿಸಿಕೊಳ್ಳದಿದ್ದರೂ ಆಗಾಗ ಎನ್​ಡಿಎಗೆ ನೆರವಾಗುವ ಮೂಲಕ ಪ್ರಧಾನಿ ಮೋದಿಯವರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ.
 ಒಟ್ಟಾರೆ 2018 ರಾಜಕೀಯ ಪಕ್ಷಗಳಿಗೆ ಸಿಹಿ ಕಹಿ ಎರಡನ್ನು ನೀಡಿದೆ. ಕೆಲವರಿಗೆ ಗೆಲುವಿನ ಮಿಶ್ರಫಲ ನೀಡಿದ್ರೆ. ಇನ್ನು ಕೆಲವರು ರಾಜಕೀಯ ರಂಗಕ್ಕೆ ಎಂಟ್ರಿ ನೀಡಿದ್ದಾರೆ..2019ಕ್ಕೆ ನಡೆಯುವ ಲೋಕ ಸಮರಕ್ಕೆ 2018 ಅಭ್ಯಾಸ ಮಾಡಲು ವೇದಿಕೆಯಾಗಿತ್ತು ಎಂದೇ ಹೇಳಬಹುದಾಗಿದೆ.
-ಮುತ್ತುರಾಜ್​ ಹೆಳವರ್​

RELATED ARTICLES

Related Articles

TRENDING ARTICLES