ಆಸ್ಟ್ರೇಲಿಯಾ ವಿರುದ್ಧದ 3 ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ಇಂಡಿಯಾ ಐತಿಹಾಸಿಕ ಟೆಸ್ಟ್ ಜಯ ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 137 ರನ್ಗಳ ಗೆಲುವಿನ ನಗೆ ಬೀರಿದೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿ ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿ ನೂತನ ಮೈಲಿಗಲ್ಲು ತಲುಪಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 399 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ಭಾರತದ ಬೌಲಿಂಗ್ ದಾಳಿಗೆ ನಲುಗಿತು. ಪರಿಣಾಮವಾಗಿ 261 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ತವರಿನಲ್ಲಿ ಮುಖಭಂಗ ಅನುಭವಿಸಿತು.
ಮಳೆಯಿಂದಾಗಿ ಇಂದಿನ ದಿನದಾಟ ತಡವಾಗಿ ಆರಂಭವಾಯ್ತು. ನಿನ್ನೆಯ ದಿನದಾಟದಲ್ಲಿ ಆಸೀಸ್ನ ದಾಂಡಿಗರೆಲ್ಲರೂ ಭಾರತದ ಬಿಗಿ ಬೌಲಿಂಗ್ ದಾಳಿಗೆ ಉದುರಿದರೂ,ನೆಲಕಚ್ಚಿ ನಿಂತಿದ್ದ ಪಾಟ್ ಕಮಿನ್ಸ್ ಗೆ ಇಂದು ಬೂಮ್ರಾ ಗೇಟ್ ಪಾಸ್ ನೀಡಿದ್ರು. ಇನ್ನು ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ನಥಾನ್ ಲಯನ್ ಔಟಾಗೂ ಮೂಲಕ ಆಸಿಸ್ ಸರ್ವಪತನ ಕಾಣ್ತು.
ಭಾರತದ ಪರವಾಗಿ ಬೂಮ್ರಾ, ಜಡೇಜಾ ತಲಾ 3 ಹಾಗೂ ಇಶಾಂತ್ ಶರ್ಮ ಹಾಗೂ ಮೊಹ್ಮದ್ ಶಮಿ ತಲಾ 2 ವಿಕೆಟ್ ಕಬಳಿಸಿದ್ರು. ಈ ಪಂದ್ಯದಲ್ಲಿ ಜಯ ಸಾಧಿಸಿದ ಟೀಮ್ ಇಂಡಿಯಾ 2-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತು. ಮುಂದಿನ ಟೆಸ್ಟ್ ಪಂದ್ಯ ಜ.3 ರಿಂದ ಆರಂಭವಾಗಲಿದ್ದು, ಆ ಮ್ಯಾಚ್ನಲ್ಲಿ ಗೆದ್ದು ಇತಿಹಾಸ ಸೃಷ್ಟಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ್ರೆ, ಕಾಂಗರೂ ನಾಡಲ್ಲಿ ಮೊದಲ ಟೆಸ್ಟ್ ಸರಣಿ ಜಯಸಿದ ಸಾಧನೆ ಮಾಡಲಿದೆ.