Saturday, April 20, 2024

ರಂಗೇರಿದೆ ರಾಜಸ್ಥಾನ್, ತೆಲಂಗಾಣ ಚುನಾವಣಾ ಕಣ; ಜೋರಾಗಿದೆ ನಾಯಕರ ವಾಕ್ಸಮರ

ನವದೆಹಲಿ: ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಮೂರೇ ಮೂರು ದಿನ ಬಾಕಿ ಇದೆ. ಎರಡೂ ರಾಜ್ಯಗಳಲ್ಲಿಯೂ ಚುನಾವಣಾ ಕಣ ರಂಗೇರಿದೆ. ಜೊತೆಗೆ ನಾಯಕರ ನಡುವಿನ ವಾಕ್ಸಮರ ಕೂಡ ಜೋರಾಗಿ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ನಿನ್ನೆ ರಾಜಸ್ಥಾನದ ಜೋಧಪುರದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ‘ಹಿಂದುತ್ವದ ಮೂಲತತ್ವದ ಕುರಿತು ನನಗೆ ಅರಿವಿದೆ’ ಎನ್ನುವ ಮೂಲಕ ರಾಹುಲ್​ಗಾಂಧಿ  ಟೀಕೆಗೆ ತಿರುಗೇಟು ನೀಡಿದ್ದಾರೆ. “ಜ್ಞಾನ ಎಲ್ಲ ಕಡೆಯೂ ಇದೆ. ಆದರೆ ಮೋದಿಯವರು ಜಗತ್ತಿನ ಜ್ಞಾನವೆಲ್ಲಾ ತಮ್ಮಲ್ಲೆ ಇದೆ ಎಂದು ತಿಳಿದುಕೊಂಡಿದ್ದಾರೆ. ಹಿಂದೂ ಎಂದು ಹೇಳಿಕೊಳ್ಳುವ ಪ್ರಧಾನಿಯವರು ಹಿಂದುತ್ವದ ಮೂಲ ತತ್ವವನ್ನೇ ತಿಳಿದಿಲ್ಲ. ಇವರೆಂಥಾ ಹಿಂದು” ಎಂದು ರಾಹುಲ್​ಗಾಂಧಿ ಟೀಕಿಸಿದ್ದರು.

ರ‍್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್​ನಿಂದ ಸಿಎಂ ಅಭ್ಯರ್ಥಿ ಯಾರೆಂಬುದನ್ನು ಇನ್ನೂ ಡಿಕ್ಲೇರ್ ಮಾಡಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

ರಾಹುಲ್​ ಗಾಂಧಿಯಂತೇ  ಮೋದಿ ತೆಲಂಗಾಣದಲ್ಲೂ ಪ್ರಚಾರ ನಡೆಸಿದ್ದಾರೆ. ರಾಜ್​ನಾಥ್​ ಸಿಂಗ್​, ನಿತಿನ್ ಗಡ್ಕರಿ, ವಸುಂಧರಾ ರಾಜೆ ಹಾಗೂ ಹೇಮಾ ಮಾಲಿನಿ ಸೇರಿ ಹಲವು ಬಿಜೆಪಿ ನಾಯಕರು ರಾಜಸ್ಥಾನದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ರಾಹುಲ್ ಗಾಂಧಿ ನಾಲ್ಕು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳಲ್ಲೂ ಚುನಾವಣಾ ಕಾವು ಏರಿದ್ದು, ನಾಯಕರು ನಡುವಿನ ವಾಕ್ಸಮರವೂ ಜೋರಾಗಿ ನಡೆಯುತ್ತಿದೆ.

RELATED ARTICLES

Related Articles

TRENDING ARTICLES