ಭುವನೇಶ್ವರ: ಕಳಿಂಗ ಕ್ರೀಡಾಂಗಣದಲ್ಲಿ ಅತಿಥೇಯ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಕಂಡಿತು. ಪಂದ್ಯ ಕೊನೆಗೊಳ್ಳಲು ನಾಲ್ಕು ನಿಮಿಷಗಳಿರುವಾಗ, ಡಿಫೆನ್ಸ್ ವೈಫಲ್ಯದಿಂದ ಭಾರತ ಗೆಲುವಿನ ಅವಕಾಶವನ್ನು ಕಳೆದುಕೊಂಡಿದೆ. ಹಾಕಿ ವಿಶ್ವಕಪ್ ಟೂರ್ನಿಯ ಎರಡನೇ ಲೀಗ್ ಪಂದ್ಯದಲ್ಲಿ ಭಾರತ ಬಲಿಷ್ಠ ಬೆಲ್ಜಿಯಂ ವಿರುದ್ಧ ಡ್ರಾಗೆ ತೃಪ್ತಿ ಪಡಬೇಕಾಯ್ತು.
ಭಾನುವಾರ ನಡೆದ ‘ಸಿ’ ಗುಂಪಿನ ಹೈವೋಲ್ಟೇಜ್ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಆತಿಥೇಯ ತಂಡ 2-2 ಗೋಲ್ಗಳಿಂದ ಬೆಲ್ಜಿಯಂ ವಿರುದ್ಧ ಸಮಬಲ ಸಾಧಿಸಿತು. ಈ ಡ್ರಾದಿಂದ ತಲಾ ಒಂದು ಅಂಕ ಹಂಚಿಕೊಂಡಿತು. ನಾಲ್ಕು ಅಂಕ ಗಳಿಸಿದ ಭಾರತ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಮತ್ತು ಸಮ ಅಂಕ ಪಡೆದ ಬೆಲ್ಜಿಯಂ ದ್ವಿತೀಯ ಸ್ಥಾನ ಪಡೆಯಿತು. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾಟರ್ ಫೈನಲ್ ಪ್ರವೇಶಿಸುವ ಅವಕಾಶವಿದೆ. ಈ ಕಾರಣದಿಂದ ಇದೇ 8ರಂದು ನಡೆಯುವ ಭಾರತ -ಕೆನಡಾ ಹಾಗೂ ದ.ಆಫ್ರಿಕಾ-ಬೆಲ್ಜಿಯಂ ತಂಡಗಳ ಲೀಗ್ ಪಂದ್ಯಗಳು ಹೆಚ್ಚಿನ ಮಹತ್ವ ಪಡೆದಿವೆ.