ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಸಚಿವ ಡಿ.ಕೆ ಶಿವಕುಮಾರ್ ರಹಸ್ಯ ಮಾತುಕತೆ ನಡೆಸಿದ್ದು, ಇದ್ರಿಂದ ಮೈತ್ರಿ ಪಾಳಯದಲ್ಲಿ ಆತಂಕ ಮನೆಮಾಡಿದೆ.
ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಡಿ.ಕೆ ಶಿವಕುಮಾರ್ ಅವರ ಗೃಹಕಚೇರಿಯಲ್ಲಿ ಬಿಎಸ್ ವೈ ಮತ್ತು ಡಿಕೆಶಿ ಸುಮಾರು 20 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ರು. ಅಧಿಕಾರಿಗಳನ್ನು ಹಾಲ್ ನಲ್ಲಿ ಕೂರಿಸಿ ಕಾಂಗ್ರೆಸ್ ಮತ್ತು ಬಿಜೆಪಿಯ ಈ ಇಬ್ಬರು ನಾಯಕರು ನಡೆಸಿದ ಮಾತುಕತೆ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ.
ತೆಲಂಗಾಣಕ್ಕೆ ತೆರಳಬೇಕಿದ್ದ ಡಿ.ಕೆ ಶಿವಕುಮಾರ್ ಬಿ.ಎಸ್ ಯಡಿಯೂರಪ್ಪ ಅವರಿಗಾಗಿ ಕಾದಿದ್ರು. ಬಿಎಸ್ ವೈ ಪುತ್ರ ರಾಘವೇಂದ್ರ ಅವರನ್ನೂ ಸಹ ಹೊರಗೆ ಕೂರಿಸಿ ಡಿಕೆಶಿ ಅವರೊಂದಿಗೆ ಚರ್ಚಿಸಿದ್ರು.
ಹೈಕಮಾಂಡ್ ಸೂಚನೆ ಮೇರೆಗೆ ಬಿಎಸ್ ವೈ ಡಿಕೆಶಿ ಅವರನ್ನು ಭೇಟಿ ಮಾಡಿದ್ರಾ ಅನ್ನೋ ಪ್ರಶ್ನೆ ಎದುರಾಗಿದ್ದು, ಈ ಇಬ್ಬರು ನಾಯಕರ ಗೌಪ್ಯ ಮಾತುಕತೆಯೂ ಹತ್ತಾರು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತಾನಾಡಿದ ಬಿ.ಎಸ್ ವೈ ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ. ರಾಜಕೀಯದ ಬಗ್ಗೆ ಮಾತಾಡಿದ್ರಾ ಅಂತ ಕೇಳಿದ್ದಕ್ಕೆ ‘ಅದನ್ನೆಲ್ಲ ಮಾಧ್ಯಮದ ಮುಂದೆ ಹೇಳಕ್ಕಾಗುತ್ತಾ’ ಅಂತ ಹೇಳಿದ್ದಾರೆ. ತುಂಬಾ ದಿನಗಳ ನಂತರ ಬಿಎಸ್ವೈ ಮೊಗದಲ್ಲಿ ನಗು ಕಂಡುಬಂದಿದ್ದು, ಇಬ್ಬರು ನಾಯಕರು ರಾಜಕೀಯ ದ್ವೇಷ ಮರೆತು ಫೋಟೋಕೆ ಪೋಸ್ ಕೂಡ ಕೊಟ್ಟಿದ್ದಾರೆ. ಖುದ್ದು ತಮ್ಮ ನಿವಾಸಕ್ಕೆ ಭೇಟಿ ನೀಡಿದ ಬಿಎಸ್ ವೈ ಅವರಿಗೆ ಹೂಗುಚ್ಛನೀಡಿ ಡಿಕೆಶಿ ಸ್ವಾಗತಿಸಿದ್ರು.
ಶಿವಮೊಗ್ಗದ ಸಿಗಂಧೂರು ಸೇತುವೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಬಿಎಸ್ ವೈ ಪುತ್ರ ರಾಘವೇಂದ್ರ ಅವರನ್ನು ಅಥವಾ ಅಧಿಕಾರಿಗಳನ್ನು ಕಳುಹಿಸಬಹುದಿತ್ತು. ಆದರೆ, ಸ್ವತಃ ತಾವೇ ನೇರವಾಗಿ ಡಿಕೆಶಿ ಅವರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ಬೆಳವಣಿಗೆಯಾಗಿದೆ.