Friday, April 12, 2024

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ ; ಕರ್ನಾಟಕದ ಬಹುದಿನಗಳ ಬೇಡಿಕೆಗೆ ಸಿಕ್ತು ಮನ್ನಣೆ

ಕರ್ನಾಟಕದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಮೇಕೆದಾಟು ಯೋಜನೆಯ ಫ್ರೀ ಫೀಸಿಬಿಲಿಟಿ ರಿಪೋರ್ಟ್‌ ನ್ನು ಕೇಂದ್ರ ಜಲ ಆಯೋಗ ಒಪ್ಪಿಕೊಂಡಿದೆ. ಫ್ರೀ ಫೀಸಿಬಿಲಿಟಿ ರಿಪೋರ್ಟ್‌ ಅಂದ್ರೆ ಪೂರ್ವ ಕಾರ್ಯ ಸಾಧ್ಯತಾ ವರದಿ ಅಂತ. ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ.

ವರದಿಯನ್ನು ಒಪ್ಪಿಕೊಂಡಿರೋ ಕೇಂದ್ರ ಜಲಸಂಪನ್ಮೂಲ ಇಲಾಖೆ, ಸಮಗ್ರ ಯೋಜನೆ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದ್ರೆ, ಈ ಯೋಜನೆಯಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯಾಗುವ ಪ್ರಮಾಣದಲ್ಲಿ ವ್ಯತ್ಯಯ ಆಗಬಾರದು ಎಂದು ಷರತ್ತು ಹಾಕಿದೆ.

5 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ : ರಾಮನಗರದ ಮೇಕೆದಾಟುವಿಲ್ಲಿ ಅಣೆಕಟ್ಟು ನಿರ್ಮಿಸಲು 2013ರಲ್ಲಿ ರಾಜ್ಯ ಸರಕಾರ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ವಿಚಾರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸಿದ್ದು, ಅಂದಿನ ಸಿಎಂ ಜಯಲಲಿತಾ, ಯೋಜನೆಗೆ ಅನುಮತಿ ನೀಡಿದರೆ ತಮಿಳುನಾಡಿಗೆ ಸಮಸ್ಯೆಯಾಗುವುದೆಂದು ಕೇಂದ್ರಕ್ಕೆ ಪತ್ರ ಬರೆದಿದ್ದರು.
ಯೋಜನೆಯ ಉದ್ದೇಶವೇನು..?
66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಿ, ರಾಮನಗರ ಹಾಗೂ ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ನೀರು ಹಾಗೂ ವಿದ್ಯುತ್‌ ಉತ್ಪಾದನೆ ಮಾಡುವುದು ಯೋಜನೆ ಪ್ರಮುಖ ಉದ್ಧೇಶವಾಗಿದೆ. ಬೆಂಗಳೂರು ಭಾಗಕ್ಕೆ ಸುಮಾರು 16 ಟಿಎಂಸಿ ನೀರು ತರಲು ಉದ್ಧೇಶಿಸಲಾಗಿದ್ದು, ಸುಮಾರು 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶ ಇರಲಿದೆ.
ಈ ಮೂಲಕ ರಾಜಧಾನಿಯ ವಿದ್ಯುತ್‌ ಸಮಸ್ಯೆಯನ್ನು ನಿವಾರಿಸಲು ಸರಕಾರ ಯೋಜನೆ ರೂಪಿಸಿದೆ. ಒಂದು ವೇಳೆ ಯೋಜನೆಗೆ ಅನುಮತಿ ಸಿಕ್ಕಲ್ಲಿ ಯೋಜನೆ ಆರಂಭಿಸುವುದಾಗಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸಿದ್ದರು. 2018 ಜುಲೈನಲ್ಲಿ ಪ್ರಧಾನಿ ಮೋದಿ ಹಾಗೂ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ, ಯೋಜನೆಯ ಬಗ್ಗೆ ವಿವರಿಸಿದ್ದರು. ಇದೀಗ ಆಯೋಗ ವರದಿಯನ್ನು ಒಪ್ಪಿಕೊಂಡಿದೆ.
ತಮಿಳುನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿ, ಬಾಕಿ ಸಮುದ್ರಕ್ಕೆ ಹೋಗಿ ವ್ಯರ್ಥವಾಗುವ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಹುದು ಎಂಬುದು ರಾಜ್ಯ ಸರ್ಕಾರದ ಲೆಕ್ಕಾಚಾರವಾಗಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಜ್ಯಕ್ಕೆ ಮೊದಲ ಹಂತದ ಮುನ್ನಡೆ ಸಿಕ್ಕಂತಾಗಿದೆ. ಇನ್ನುಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಪತ್ರ ಬರೆದು ಒತ್ತಡ ಹೇರಿದ್ದರು. ಇದೀಗ ರಾಜ್ಯ ಸರ್ಕಾರಕ್ಕೆ ಕೇಂದ್ರ ಸ್ಪಂದಿಸಿರುವುದು ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ.

RELATED ARTICLES

Related Articles

TRENDING ARTICLES