ಶಿವಮೊಗ್ಗ : ವಿಜ್ಞಾನ ಪ್ರಯೋಗ ತರಗತಿ ವೇಳೆ ಶಿಕ್ಷಕರ ನಿರ್ಲಕ್ಷ್ಯದಿಂದ 6ನೇ ಕ್ಲಾಸ್ ಬಾಲಕಿ ಕಾಲಿನ ಮೇಲೆ ಆ್ಯಸಿಡ್ ಬಿದ್ದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರೋ ಸೇಂಟ್ ಜೋನ್ಸ್ ಅಕ್ಷರಧಾಮ ಶಾಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಬಾಲಕಿಯ ತೊಡೆ ಹಾಗೂ ಕಾಲಿನ ಭಾಗದ ಚರ್ಮ ಸುಟ್ಟು ಹೋಗಿದೆ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳದ ವೇಳೆ ಪ್ರಯೋಗಕ್ಕೆ ಆ್ಯಸಿಡ್ ಬಳಸಲಾಗಿದೆ. ಇಂಥಾ ಪ್ರಯೋಗದ ವೇಳೆ ಮಕ್ಕಳ ಕೈಗೆ ಆ್ಯಸಿಡ್ ಕೊಡುವಂತಿಲ್ಲ ಅನ್ನೋ ನಿಯಮ ಇದ್ದರೂ ಮಕ್ಕಳಿಂದಲೇ ಈ ಪ್ರಯೋಗ ಮಾಡಿಸಿದ್ದಾರೆ.
ಬಾಲಕಿಗೆ ತಕ್ಷಣ ಆಸ್ಪತ್ರೆ ಸೇರಿಸದೆ, ಪೋಷಕರಿಗೂ ಮಾಹಿತಿ ನೀಡಿಲ್ಲ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇಲೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ತಪ್ಪೊಪ್ಪಿಕೊಂಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸೋಮಶೇಖರ ಬಾದಾಮಿ ಹಾಗೂ ಬಿಇಒ ಲೋಕೇಶ್ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯಿತು. ಮುಂದೆ ಇಂಥಾ ಘಟನೆ ನಡೆಯದಂತೆ ನೋಡಿಕೊಳ್ಳೋದಾಗಿ ಶಾಲಾ ಮುಖ್ಯೋಪಾಧ್ಯಾಯರು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಪ್ರಯೋಗಾಲಯಗಳಲ್ಲಿ ಮಕ್ಕಳ ಕೈಗೆ ಆ್ಯಸಿಡ್ ನಂತ ಮಾರಕ ವಸ್ತುಗಳನ್ನು ಪ್ರಯೋಗಗಳಿಗೆ ಕೊಡುವಂತಿಲ್ಲ. ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವುದಾಗಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ.