Saturday, April 20, 2024

ಗುರುತಿಸಿದ ಸ್ಥಳದಲ್ಲೇ ನಾಗಶಿಲೆ ಪತ್ತೆ – ಸವಾಲು ಗೆದ್ದ ನಾಗಪಾತ್ರಿ..!

ಶಿವಮೊಗ್ಗ : ತನ್ನ ವಿರುದ್ಧ ಹೇಳಿಕೆ ನೀಡಿದ್ದವರಿಗೆ ಸವಾಲು ಒಡ್ಡಿದ ನಾಗಪಾತ್ರಿ ನುಡಿದಂತೆ ನಡೆದು ಸವಾಲಿನಲ್ಲಿ ಗೆದ್ದಿದ್ದಾರೆ. ನಾಗಪಾತ್ರಿ ನಾಗರಾಜ್​ ಭಟ್​ ಹೇಳಿದ ಜಾಗದಲ್ಲೇ ನಾಗಶಿಲೆ ಹಾಗೂ ತ್ರಿಶೂಲ ಪತ್ತೆಯಾಗಿದ್ದು, ಸವಾಲು ಒಡ್ಡಿದವರಿಗೆ ತಿರುಗೇಟು ನೀಡಿದ್ದಾರೆ. ನಾಗಬಿಂಬವಿರುವ ಸ್ಥಳದ ಕುರಿತು ಹೇಳಿ, ನಾಗಶಿಲೆ ಹಾಗೂ ತ್ರಿಶೂಲ ತೆಗೆಸುತ್ತೇನೆ ಅಂತ ಶಿವಮೊಗ್ಗದ ಜಿಲ್ಲೆಯ ತೀರ್ಥಹಳ್ಳಿಯ ಆರಗ ಗ್ರಾಮದ ನಾಗಪಾತ್ರಿ ನಾಗರಾಜ ಭಟ್​ ಮಾಧ್ಯಮಗಳ ಸಮ್ಮುಖದಲ್ಲಿ ಸವಾಲು ಹಾಕಿದ್ದರು. ಸವಾಲೆಸೆದಿದ್ದಲ್ಲದೆ, ಸವಾಲಿನಲ್ಲಿ ಗೆದ್ದು ತೋರಿಸಿದ್ದಾರೆ.
ಹೌದು, ತೀರ್ಥಹಳ್ಳಿಯ ಗುಡ್ಡೆಕೊಪ್ಪ ಗ್ರಾಮ ಪಂಚಾಯ್ತಿಯ ಮರಗಳಲೆ ವೆಂಕಟಪೂಜಾರಿಯವರ ಮನೆಯ ಹಿತ್ತಲಿನಲ್ಲಿ ನೆಲ್ಲಿ ಮರದ ಕೆಳಗೆ ನಾಗ ಶಿಲೆ ಹಾಗೂ ತ್ರಿಶೂಲ ಇದೆ ಅಂತ ಹೇಳಿದ್ದರು. ಈಗ ನಾಗರಾಜಭಟ್ಟರು ಗುರುತಿಸಿದ ಸ್ಥಳದಲ್ಲೇ ತ್ರಿಶೂಲ ಮತ್ತು ನಾಗಶಿಲೆ ಪತ್ತೆಯಾಗಿದೆ.
ಆರಗ ಸರ್ಕಲ್ ನಿಂದ ಹೊರಟ ನಾಗರಾಜ್ ಭಟ್ಟರು, ಮರಗಳಲೆ ಗ್ರಾಮದ ವೆಂಕಟ ಪೂಜಾರಿ ಮನೆಗೆ ಬಂದಿದ್ದಾರೆ. ತಮ್ಮ ಕಾರಿನಿಂದ ಇಳಿದ ನಾಗರಾಜ್ ನೇರವಾಗಿ ಹೋಗಿದ್ದು ಮನೆಯ ಹಿಂಭಾಗದಲ್ಲಿದ್ದ ನೆಲ್ಲಿ ಮರದ ಬುಡಕ್ಕೆ. ಅಲ್ಲಿ ತಮ್ಮ ದೈವಿಕೃಪೆಯ ತ್ರಿಶೂಲವನ್ನು ಹಿಡಿದು, ಏನೋ ಜಪಿಸಿದ ನಾಗಪಾತ್ರಿ ನಾಗರಾಜ್ ಭಟ್ಟರು, “ಹುತ್ತ ಅಗೆದು ತೆಗೆಯಿರಿ, ಅದರ ಕೆಳಗೆ ಸುಮಾರು 2 ವರೆ ಅಡಿ ತಲುಪುವ ಮುನ್ನವೇ ನಾಗಶಿಲೆ ಮತ್ತು ತ್ರಿಶೂಲ ಪತ್ತೆಯಾಗುತ್ತದೆ” ಎಂದರು. ಈ ವೇಳೆ ಗುದ್ದಲಿ, ಪಿಕಾಸಿ ತಂದ ವೆಂಕಟ ಪೂಜಾರಿ ಪುತ್ರ ನಾಗಪ್ಪ ಭೂಮಿ ಅಗೆಯಲು ಆರಂಭಿಸಿದ್ದಾರೆ. ಒಂದು ಅಡಿ ಗುಂಡಿ ತೆಗೆಯುವ ಮುನ್ನವೇ ನಾಗಶಿಲೆ ಹಾಗೂ ತ್ರಿಶೂಲ ಪತ್ತೆಯಾಗಿದೆ. ಈ ಮೂಲಕ ತಮ್ಮ ದೈವಿಕ ಶಕ್ತಿ ಕುರಿತು ಟೀಕಿಸುವ ವಿರೋಧಿಗಳಿಗೆ ನಾಗಪಾತ್ರಿ ತಕ್ಕ ಉತ್ತರ ನೀಡಿದ್ದಾರೆ. ಹುತ್ತ ಅಗೆಯುವ ಮುನ್ನವೇ ಒಂದು ಚೀಟಿಯಲ್ಲಿ ನಾಗಶಿಲೆ ಇರುವಿಕೆ ಬಗ್ಗೆ ನಾಗಪಾತ್ರಿ ಬರೆದು ತೋರಿಸಿದ್ದು ನೆರೆದವರನ್ನು ಅಚ್ಚರಿಗೊಳಿಸಿತು.
“ಎರಡು ದಿನ ಹಿಂದೆ ನಾನು ನಾಗರಾಜಭಟ್ಟರ ಮನೆಗೆ ಹೋಗಿ ಸಮಸ್ಯೆ ಬಗ್ಗೆ ಹೇಳಿದ್ದೆ. ಆಗ ನಮ್ಮ ಮನೆಯ ಸಮೀಪ ಒಂದು ತ್ರಿಶೂಲ, ಶಿಲೆ ಇದೆ ಎಂದಿದ್ದರು. ಇದಕ್ಕೂ ಮೊದಲು ಅವರು ಇಲ್ಲಿಗೆ ಬಂದು ನೋಡಿಲ್ಲ. ಇಂದು ಬೆಳಗ್ಗೆ ಎಲ್ಲರೂ ಬಂದು ಮಾಧ್ಯಮ ಮತ್ತು ಗ್ರಾಮಸ್ಥರ ಮುಂದೆಯೇ ತ್ರಿಶೂಲ ಹಾಗೂ ನಾಗಶಿಲೆ ತೆಗೆಸಿದ್ದಾರೆ. ಇಲ್ಲಿ ನಾಗರಕಲ್ಲು ಹಾಗೂ ತ್ರಿಶೂಲ ಇರುವ ಕುರಿತು ನಮಗೆ ಆಗಷ್ಟೇ ತಿಳಿಯಿತು” ಎನ್ನುತ್ತಾರೆ ಮನೆ ಮಾಲಿಕ ನಾಗಪ್ಪ.
ಕಳೆದ ಶನಿವಾರ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಮನೆಯ ವರಾಂಡಾದಲ್ಲಿ 6 ಅಡಿ ಒಳಗೆ ಇದ್ದ ನಾಗ ದೇವರ ವಿಗ್ರಹ ಹೊರತೆಗೆಯಲಾಗಿತ್ತು. ದಿವ್ಯಶಕ್ತಿಯಿಂದ ಆ ವಿಗ್ರಹ ತೆಗೆದಿದ್ದಾಗಿ ವರ್ಣಿಸಲಾಗಿತ್ತು. ಆದರೆ ಈ ಘಟನೆ ಬಗ್ಗೆ ಹಾಗೂ ನಾಗಪಾತ್ರಿ ನಾಗರಾಜ ಭಟ್ಟರ ದೈವಿಶಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆಗಳು ಕೇಳಿ ಬಂದಿತ್ತು. ತಮ್ಮ ಕುರಿತಾದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ನಾಗಪಾತ್ರಿ ನಾಗರಾಜ್​ ಭಟ್ ಸತ್ಯ ಸಾಬೀತುಪಡಿಸುವುದಾಗಿ ಸಾವಾಲೆಸೆದಿದ್ದರು.
-ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

RELATED ARTICLES

Related Articles

TRENDING ARTICLES