Friday, July 19, 2024

‘ಕನಗನಮರಡಿ’ಯಲ್ಲಿ ಮರಣಮೃದಂಗವಾಡಿದ ರಾಜಕುಮಾರ ‘KA19A5676’

ಈ ಬಾರಿ ಮಳೆ ಚೆನ್ನಾಗಿ ಬಂದಿತ್ತು. ಕೆಆರ್‍ಎಸ್ ಡ್ಯಾಂ ಕೂಡ ಹೆಚ್ಚು ಕಮ್ಮಿ ಭರ್ತಿಯಾಗಿತ್ತು. ರೈತರು ಈ ಬಾರಿ ಒಳ್ಳೆ ಕೃಷಿ ಮಾಡ್ಬಹುದು ಅಂತಾ ಖುಷಿಯಾಗಿದ್ರು. ಮಕ್ಕಳು ಶಾಲೆ ಬಿಟ್ಟ ಕೂಡಲೇ ಮನೆಗೆ ಹೋಗೋಕೆ ಬಸ್ಸೇರಿ ಕುಳಿತಿದ್ದರು. ಶಾಲೆಗೆ ಭಾನುವಾರ ಮತ್ತು ಸೋಮವಾರವೂ ರಜೆ ಇದ್ದಿದ್ರಿಂದ ಖುಷಿ ಖುಷಿಯಾಗಿ ಮನೆಗೆ ಹೋಗೋ ಧಾವಂತದಲ್ಲಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು..!
ಇವತ್ತು ಶನಿವಾರ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆ ಬಿಡುತ್ತೆ. ಹೀಗಾಗಿ ಮಕ್ಕಳೆಲ್ಲಾ ಮನೆಗೆ ಹೋಗೋ ಖುಷಿಯಲ್ಲಿದ್ರು. ಇನ್ನು ಕೆಲವರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಹೋಗೋದ್ರಲ್ಲಿ ಬಿಸಿಯಾಗಿದ್ರು. ಆದ್ರೆ ಇವರ ಬಾಳಲ್ಲಿ ವಿಧಿ ಇಷ್ಟು ಘನಘೋರವಾಗಿ ಆಟವಾಡುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಹೋಗ್ಬರ್ತೀನಿ ಅಂತ ತಮ್ಮ ತಮ್ಮ ಮನೆಗಳಲ್ಲಿ ಹೇಳಿ ಬಸ್ ಹತ್ತಿದ್ರು.. ಆದ್ರೆ ಹೀಗೆ ಹೇಳಿ ಹೋದವ್ರು ವಾಪಸ್ ಮನೆಗೇ ಬರಲೇ ಇಲ್ಲ.
ದಿನವೂ ಪಾಂಡವಪುರ ಮತ್ತು ಮಂಡ್ಯ ಮಧ್ಯೆ ಸಂಚರಿಸುವ ರಾಜಕುಮಾರ ಬಸ್ ಇವತ್ತು ಯಮ ಸ್ವರೂಪಿಯಾಗಿ ಬಂದಿತ್ತು. ಎಂದಿನಂತೆ ಪ್ರಯಾಣಿಕರನ್ನು ತುಂಬಿಕೊಂಡು ಮಂಡ್ಯಕ್ಕೆ ಹೋಗ್ತಿತ್ತು. ಆದ್ರೆ ಈ ಬಸ್ ಮಂಡ್ಯ ತಲುಪಲೇ ಇಲ್ಲ. ಬಸ್‍ನಲ್ಲಿದ್ದವರು ಏನಾಗ್ತಿದೆ ಅಂದುಕೊಳ್ಳುವಷ್ಟರಲ್ಲಿ ಇವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಮಕ್ಕಳು ಅಂತ ನೋಡಲಿಲ್ಲ, ವಯಸ್ಸಾದವರು ಅಂತ ನೋಡಲಿಲ್ಲ ಯಮನ ಪಾಶ ಅವರ ಕೊರಳನ್ನು ಸುತ್ತಿಬಿಟ್ಟಿತ್ತು. ಆ ಭೀಕರ ದೃಶ್ಯ ನೋಡಿದ್ರೆ ‘ವಿಧಿಯೇ ನೀನೆಷ್ಟು ಕ್ರೂರಿ’ ಅಂತ ಸಿಟ್ಟು ಬರುತ್ತೆ. ಶಾಲೆಗೋದ ಮಕ್ಕಳು ಮನೆಗೆ ಬರದೆ ದಾರಿ ಮಧ್ಯೆಯೇ ಹೆಣವಾದದ್ದನ್ನು ಕಂಡು ಹೆತ್ತವರ ಹೃದಯವೇ ಒಡೆದು ಹೋಗಿದೆ.
ಮಂಡ್ಯಕ್ಕೆ ಹೋಗ್ತಿದ್ದ ಬಸ್ ಮಧ್ಯಾಹ್ನ 12ರ ವೇಳೆಗೆ ಕನಗನಮರಡಿ ಸಮೀಪದ ವಿ.ಸಿ ನಾಲೆಯ ರಸ್ತೆ ಮೇಲೆ ಚಲಿಸುತ್ತಿತ್ತು. ಚಾಲಕನ ನಿರ್ಲಕ್ಷ್ಯದಿಂದ ಬಸ್ ನಿಯಂತ್ರಣ ತಪ್ಪಿ ತಡೆಗೋಡೆ ಇಲ್ಲದ್ದರಿಂದ ನೇರವಾಗಿ ನಾಲೆಗೆ ಉರುಳಿತು. ಕ್ಷಣಾರ್ಧದಲ್ಲೇ ಸಂಪೂರ್ಣವಾಗಿ ಮುಳುಗಿಹೋಯಿತು. ಸ್ಥಳೀಯರು ಕಾಪಾಡಲು ಬರುವಷ್ಟರಲ್ಲಿ ಮಕ್ಕಳು ಸೇರಿ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡು ಬಿಟ್ಟಿದ್ರು.
ಬಸ್ ಬಿದ್ದಿದ್ದೆ ತಡ ಅಕ್ಕ ಪಕ್ಕದಲ್ಲಿದ್ದ 100 ಕ್ಕೂ ಹೆಚ್ಚು ಜನರು ಸ್ಥಳಕ್ಕೆ ಓಡಿಬಂದು ಸಹಾಯಕ್ಕೆ ಮುಂದಾದ್ರೂ ಕೂಡ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ದುರಂತದಲ್ಲಿ ಬಾಲಕ ರೋಹಿತ್, ಗಿರೀಶ್ ಸೇರಿ ನಾಲ್ವರು ಪವಾಡದಂತೆ ಬದುಕುಳಿದಿದ್ದಾರೆ.
ಸ್ವಚ್ಛಂಧವಾಗಿ ತುಂಬಿ ಹರಿಯುತ್ತಿದ್ದ ವಿ.ಸಿ. ನಾಲೆ ಇವತ್ತು 25ಕ್ಕೂ ಹೆಚ್ಚು ಜನರ ಪ್ರಾಣ ಬಲಿ ತೆಗೆದುಕೊಂಡಿದೆ. ಬಸ್‍ನಲ್ಲಿ ಚಲಿಸುತ್ತಿದ್ದ ಪ್ರಯಾಣಿಕರಲ್ಲಿ 10 ಮಂದಿ ಪಾಂಡವಪುರ ತಾಲೂಕಿನ ವದೆ ಸಮುದ್ರದವರೇ ಆಗಿದ್ದಾರೆ. ಇದೀಗ ಈ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಸುಮಾರು 5 ರಿಂದ 6 ಮಂದಿ ಶಾಲಾ ಮಕ್ಕಳು ತೀರಿ ಹೋಗಿದ್ದಾರೆ.
ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿರುದ್ದರಿಂದ ಪ್ರಯಾಣಿಕರು ಹೊರಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ರು. ವಿಷಯ ತಿಳಿದ ತಕ್ಷಣ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ರು. ಬಸ್‌ನೊಳಗಿದ್ದ ಮೃತದೇಹಗಳನ್ನು ಹೊರಗೆ ತೆಗೆದ್ರು.

ಘನಘೋರ ದುರಂತದಲ್ಲಿ ಮೃತ್ಯು ಗೆದ್ದವರು : ಈ ಭೀಕರ ಅಪಘಾತದಲ್ಲಿ ಒಟ್ಟು ನಾಲ್ಕು ಮಂದಿ ಸಾವಿನ ಕದ ತಟ್ಟಿ ಬದುಕುಳಿದಿದ್ದಾರೆ. ನಾಲೆಯಲ್ಲಿ ಬಸ್​ನ ಎಡಭಾಗ ಮುಳುಗಡೆಯಾಗಿದ್ದರಿಂದ ಬಸ್ ಚಾಲಕ ಬಾಗಿಲು ಓಪನ್ ಮಾಡಿ ಪಾರಾಗಿದ್ದಾನೆ. ಘಟನೆ ನಂತರ ಬಸ್​ ಚಾಲಕ ಸ್ಥಳದಿಂದಲೇ ಎಸ್ಕೇಪ್​​ ಆಗಿದ್ದಾನೆ. ರೋಹಿತ್, ಶಶಿ, ಗಿರೀಶ್ ಅನ್ನೋರು ಪಾರಾಗಿ ಮೃತ್ಯುವನ್ನು ಗೆದ್ದು ಬಂದಿದ್ದಾರೆ ಇಂತಹ ರಣಭೀಕರ ದುರಂತದಲ್ಲಿ ನಾಲ್ವರು ಪಾರಾಗಿ ಬಂದಿದ್ದು ಮಾತ್ರ ಅದ್ಭುತವೇ ಸರಿ.

ಘನಘೋರ ದುರಂತಕ್ಕೆ ಕಂಬನಿ ಮಿಡಿದ ಗಣ್ಯರು, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ : ಈ ದುರಂತದ ಸುದ್ದಿ ತಿಳಿದ ಕೂಡಲೇ ಸಿಎಂ ಎಚ್.ಡಿ ಕುಮಾರಸ್ವಾಮಿ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಂಡ್ಯದತ್ತ ಧಾವಿಸಿದ್ರು.ದುರಂತ ನಡೆದ ಸ್ಥಳಕ್ಕೆ ಆಗಮಿಸಿದ ಸಿಎಂ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ ಪರಿಹಾರ ಘೋಷಿಸಿದ್ರು. ಸಾಲು ಸಾಲಾಗಿ ಮಲಗಿಸಿದ ಮೃತದೇಹಗಳನ್ನು ಕಂಡು ಸಿಎಂ ಕಣ್ಣುಗಳು ಒದ್ದೆಯಾದವು.
ದುರಂತದ ಸುದ್ದಿ ಕೇಳಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಬಹಳ ದು:ಖಿತರಾದ್ರು. ಮೃತರ ಕುಟುಂಬಗಳಿಗೆ ದೇವರು ನೋವು ಮರೆಸುವ ಶಕ್ತಿ ಭರಿಸಲಿ. ಗಾಯಾಳುಗಳು ಬೇಗ ಗುಣಮುಖರಾಗಲಿ ಅಂತ ಟ್ವೀಟ್​ ಮಾಡಿದ್ದಾರೆ.
“ಮಂಡ್ಯದ ಘಟನೆಗೆ ನನಗೆ ಅತೀವ ನೋವು ತರಿಸಿದೆ. ಮೃತರ ಕುಟುಂಬಗಳೊಂದಿಗೆ ನಾನೂ ದುಃಖಿತನಾಗಿದ್ದೇನೆ.ಈ ಹೊತ್ತಿನಲ್ಲಿ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲೆಂದು ನಾನು ಕೋರುತ್ತೇನೆ,” ಎಂದು ಮೋದಿ ಟ್ವೀಟ್​ ಮಾಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು.
ಇನ್ನೊಂದೆಡೆ ದುರ್ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ”ಮಂಡ್ಯ ಬಸ್​ ದುರಂತದ ಸುದ್ದಿ ಕೇಳಲು ಅತೀವ ಬೇಸರವಾಗ್ತಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ” ಅಂತ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ರು.

“ಪಾಂಡವಪುರದ ಕನಗನಮರಡಿಯ ಘೋರ ಘಟನೆ ಮನಕಲುಕಿದೆ. ಅದರಲ್ಲೂ, ಬಾಳಿ ಬದುಕಬೇಕಿದ್ದ ಮಕ್ಕಳೂ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ನನ್ನನ್ನು ಅತೀವ ಘಾಸಿಗೊಳಿಸಿದೆ. ಇದು ಕ್ರೂರ ವಿಧಿಯ ಅಟ್ಟಹಾಸವೇ ಸರಿ. ನೋವುಣ್ಣುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ” ಅಂತ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಟ್ವೀಟ್​ ಮಾಡಿದ್ದಾರೆ.

ಮಂಡ್ಯ ದುರಂತಕ್ಕೆ ಮೋದಿ, ರಾಹುಲ್ ಸಂತಾಪ

ರಿಜಿಸ್ಟರ್​ ಆಗಿದ್ದು ಮಂಗಳೂರಿನಲ್ಲಿ ಓಡಾಡುತ್ತಿರೋದು ಮಂಡ್ಯದಲ್ಲಿ : ಮಂಡ್ಯ ಬಸ್​ ದುರಂತದಲ್ಲಿ ತನ್ನೊಂದಿಗೆ 30 ಕ್ಕೂ ಹೆಚ್ಚು ಮಂದಿಯನ್ನು ಹೊತ್ತು ನಾಲೆಗೆ ಜಿಗಿದ ಬಸ್​ ಮೂಲತಃ ಮಂಗಳೂರಿನದ್ದು. 17 ವರ್ಷ ಹಿಂದಿನ ಈ ಬಸ್​ ಮಂಗಳೂರಿನಲ್ಲಿ 15 ವರ್ಷ ಸಂಚಾರ ನಡೆಸಿದ್ದು, ಹಲವು ಮಾಲೀಕರ ಕೈ ಬದಲಾಗಿ ಅಂತಿಮವಾಗಿ ಮಂಡ್ಯದ ಟ್ರಾವೆಲ್ಸ್​ ಮಾಲೀಕನಿಗೆ ಮಾರಾಟವಾಗಿತ್ತು.
ಕೆಎ19 ಎ 5676 ಸಂಖ್ಯೆಯ ಬಸ್​ 17 ವರ್ಷಗಳ ಹಿಂದೆ ಮಂಗಳೂರಿನಲ್ಲಿ ರಿಜಿಸ್ಟರ್​​ ಆಗಿ ರಸ್ತೆಗಿಳಿದಿತ್ತು. ಮಂಗಳೂರು ವ್ಯಾಪ್ತಿಯಲ್ಲಿ ಖಾಸಗಿ ಬಸ್​ ವ್ಯವಸ್ಥೆಯ ಜಾಲ ಬಹುದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತೆ. ಅಲ್ಲಿ ಸುತ್ತಾಡಿ ಹದಗೆಟ್ಟು ಹೋಗಿತ್ತು. ಇನ್ನೇನು ಉಪಯೋಗಕ್ಕೆ ಯೋಗ್ಯವಲ್ಲ ಅನ್ನೋ ಸ್ಥಿತಿಗೆ ಬಂದ ಬಸ್​ಗಳನ್ನು ಮಂಗಳೂರಿನ ಟ್ರಾವೆಲ್ಸ್​ ಮಾಲೀಕರು ಬೇರೆಯವರಿಗೆ ಮಾರಾಟ ಮಾಡಿ ಬಿಡ್ತಾರೆ.
ಹಾಗೆಯೇ ಈ ರಾಜ್​ಕುಮಾರ್​ ಬಸ್​ ಅನ್ನೂ ಮಂಗಳೂರಿನ ಟ್ರಾವೆಲ್ಸ್​ ಮಾಲೀಕರು 15 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಬಸ್​​ಗೆ ಒಬ್ರೆ ಮಾಲೀಕರಲ್ಲ ಬರೋಬ್ಬರಿ 8 ಮಾಲೀಕರು. ಒಬ್ಬರಿಂದ ಒಬ್ಬರಿಗೆ ಬಸ್​ ಮಾರಾಟ ಮಾಡಿ ಕೊನೆಗೆ ಮಂಡ್ಯದ ಟ್ರಾವೆಲ್ಸ್​ ಮಾಲೀಕ ಶ್ರೀನಿವಾಸ್​ ಎಂಬುವವರ ಕೈಸೇರಿದೆ.
ಒಟ್ಟು 35 ಸೀಟ್​ಗಳ ಈ ಟಾಟಾ ಬಸ್​  ಸದ್ಯ ಶ್ರೀನಿವಾಸ್​ ಎಂಬುವವರ ಸುಪರ್ದಿಯಲ್ಲಿತ್ತು. ಇಂಥ ಹಲವು ಖಾಸಗಿ ಬಸ್​ಗಳು ಮಂಡ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ವಿಮೆ, ಸೂಕ್ತ ದಾಖಲೆಗಳು, ಪರವಾನಗಿ ಇಲ್ಲದ ಬಸ್​ಗಳು ಎಗ್ಗಿಲ್ಲದೇ ಮಂಡ್ಯದಲ್ಲಿ ಸಂಚರಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದು ಜಿಲ್ಲೆಯಲ್ಲಿ ಸಿಸಿ ಪರ್ಮಿಟ್​ ಪಡೆದು ಮತ್ತೊಂದು ಜಿಲ್ಲೆಯಲ್ಲಿ ಸಂಚರಿಸೋದು ಕಾನೂನು ಬಾಹಿರ. ಆದ್ರೆ ಇಲ್ಲಿ ಸಿಸಿ ಪರ್ಮಿಟ್​ ಪಡೆದುಕೊಂಡು ಪ್ರಯಾಣಿಕರ ಬಸ್ ಆಗಿ ಪ್ರತಿನಿತ್ಯ ಓಡಿಸುತ್ತಾ ಹಣ ಮಾಡ್ತಿದ್ದಾರೆ. ಇದು ಕೇವಲ ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದೆಲ್ಲಡೆ ನಡೆಯುತ್ತಿದೆ ಎಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದುರ್ಮರಣವನ್ನಪ್ಪಿದ 30 ಮಂದಿ
೧)ಚಂದ್ರು 35 ಚಿಕ್ಕಕೊಪ್ಪಲು, ೨)ಪವಿತ್ರ 11 ವದೇಸಮುದ್ರ, ೩)ಈರಯ್ಯ 60 ಬೇಬಿ ಗ್ರಾಮ, ೪)ಕಲ್ಪನ 11 ಕೋಡಿಶೆಟ್ಟಿಪುರ, ೫) ಸೌಮ್ಯ 4 ಕೋಡಿಶೆಟ್ಟಿಪುರ, ೬) ಕರಿಯಪ್ಪ 65 ವದೇಸಮುದ್ರ, ೭)ಚಿಕ್ಕಯ್ಯ 60 ವದೇಸಮುದ್ರ, ೮)ಪ್ರೀತಿ 15 ಭುಜವಳ್ಳಿ, ೯)ಪಾಪಣ್ಣ 66 ಚಿಕ್ಕಕೊಪ್ಪಲು, ೧೦)ಸಾವಿತ್ರಮ್ಮ 40 ಬೂಕನಕೆರೆ, ೧೧ಮಂಜುಳ 60 ಡಾಮಡಹಳ್ಳಿ, ೧೨)ಅನುಷ 17 ಗಾಣದ ಹೊಸೂರು, ೧೩) ಕಮಲಮ್ಮ 55 ವದೇಸಮುದ್ರ, ೧೪)ಸುಮತಿ 35 ಹುಲ್ಕೆರೆ, ೧೫)ಯಶೋಧ 18 ಚಿಕ್ಕಕೊಪ್ಪಲು, ೧೬)ಸೌಮ್ಯ 05 ಕೋಡಿಶೆಟ್ಟಿಪುರ, ೧೭)ಪ್ರಶಾಂತ್ 15 ವದೇಸಮುದ್ರ, ೧೮)ರತ್ನಮ್ಮ 60 ವದೇಸಮುದ್ರ, ೧೯)ಶಶಿಕಲಾ 45 ವದೇಸಮುದ್ರ, ೨೦)ಪೂಜಾರಿ ಕೆಂಪಯ್ಯ 50 ಚಿಕ್ಕಕೊಪ್ಪಲು, ೨೧)ಸೌಮ್ಯ ಉಮೇಶ್ 30 ಚಿಕ್ಕಾಡೆ, ೨೨)ರತ್ಮಮ್ಮ‌w/o ರಾಮಕೃಷ್ಣ 50 ಕನಗನಮರಡಿ, ೨೩) ನಿಂಗಮ್ಮ 70 ಕನಗನಮರಡಿ, ೩೪)ರವಿಕುಮಾರ್ 12 ವದೇಸಮುದ್ರ, ೨೫) ಲಿಖಿತ 05 ವದೇಸಮುದ್ರ, ೨೬)ಮಣಿ 35 ಹುಲಿಕೆರೆಕೊಪ್ಪಲು, ೩೭)ಶಿವಮ್ಮ 50 ಕಟ್ಟೇರಿ, ೨೮)ಜಯಮ್ಮ 50 ದೊಡ್ಡಕೊಪ್ಪಲು, ೨೯) ದಿವ್ಯ ಚಿಕ್ಕಕೊಪ್ಪಲು, ೩೦) ಪ್ರೇಕ್ಷಾ 02 ಡಾಮಡಹಳ್ಳಿ

ಕರಾಳ ಶನಿವಾರ : ಡ್ರೈವರ್​ ನಿರ್ಲಕ್ಷ್ಯಕ್ಕೆ 20 ಮಂದಿ ದುರ್ಮರಣ

ಸಾವಿನ ಸಂಖ್ಯೆ 25ಕ್ಕೆ ಏರಿಕೆ, ನಾಲ್ವರು ಪ್ರಾಣಾಪಾಯದಿಂದ ಪಾರು

RELATED ARTICLES

Related Articles

TRENDING ARTICLES