Friday, April 26, 2024

ಒಡಿಐ ವರ್ಲ್ಡ್ ಕಪ್ ಸೇಡು ತೀರಿಸಿಕೊಳ್ಳುತ್ತಾ ಟೀಮ್ ಇಂಡಿಯಾ..?

ಕೆರಿಬಿಯನ್​ ನಾಡಿನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವರ್ಲ್ಡ್ ಕಪ್ ಸೋಲಿಲ್ಲದೆ ಮುನ್ನುಗುತ್ತಿರುವ ಟೀಮ್ ಇಂಡಿಯಾ ನಾಳೆ ನಡೆಯಲಿರೋ ಮೊದಲ ಸೆಮಿಫೈನಲ್ ನಲ್ಲಿ ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಆ್ಯಂಟಿಗಾದಲ್ಲಿ ನಡೆಯಲಿರೋ ಮ್ಯಾಚ್ ಗೆದ್ದು ಏಕದಿನ ವಿಶ್ವಕಪ್​ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಕೌರ್ ಪಡೆ. 2017ರ ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ನಲ್ಲಿ ಇಂಗ್ಲೆಂಡ್​ ವನಿತೆಯರು ಟೀಮ್​ಇಂಡಿಯಾವನ್ನ 9ರನ್ ಗಳಿಂದ ಸೋಲಿಸಿದ್ದರು.
ಟೂರ್ನಿಯ ಲೀಗ್​ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ ಸೇರಿದಂತೆ ಆಡಿದ ನಾಲ್ಕೂ ಪಂದ್ಯಗಳನ್ನೂ ಜಯಸಿರುವುದು ಟೀಮ್​ಇಂಡಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೇ ಇಂಜುರಿ ಸಮಸ್ಯೆಯಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದರಿಂದ ಕೌರ್​ ಬಳಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ, ನಾಯಕಿ ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್​, ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ಉತ್ತಮ ಫಾರ್ಮ್​ನಲ್ಲಿರುವುದು ತಂಡದ ಬ್ಯಾಟಿಂಗ್​ ಶಕ್ತಿಯನ್ನ ಹೆಚ್ಚಿಸಿದೆ. ಟೀಮ್​ಇಂಡಿಯಾದ ಬೌಲಿಂಗ್​ ವಿಭಾಗ ಟೂರ್ನಿಯೂದ್ದಕ್ಕೂ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡಿದೆ. ದೀಪ್ತಿ ಶರ್ಮಾ, ದಯಾಳನ್ ಹೇಮಲತಾ, ಪೂನಂ ಯಾದವ್ ಹಾಗೂ ರಾಧಾ ಯಾದವ್​ ಇಂಗ್ಲೆಂಡ್​ ಬ್ಯಾಟ್ಸ್​​ವುಮೆನ್​ಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.
ಎದುರಾಳಿ ಇಂಗ್ಲೆಂಡ್​ ತಂಡವೂ ಉತ್ತಮ ಫಾರ್ಮ್​ನಲ್ಲಿದೆ. ಆದ್ರೆ ನಾಯಕಿ ಹಿಥರ್​ ನೈಟ್​​ ಹಾಗೂ ​ತಂಡದ ಡ್ಯಾನಿ ವೈಟ್​​ ಮಧ್ಯಮ ಕ್ರಮಾಂಕದಲ್ಲಿ ವಿಫಲತೆಯನ್ನ ಅನುಭವಿಸುತ್ತಿರುವುದು ಆಂಗ್ಲ ಪಡೆಗೆ ತಲೆನೋವಾಗಿದೆ. ಟೂರ್ನಿಯಲ್ಲಿ ಇಂಗ್ಲೆಂಡ್​ ಪರ ಹೆಚ್ಚು ರನ್​ ಸಿಡಿಸಿರುವ ಎಮಿ ಜೋನ್ಸ್​ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಇನ್ನುಳಿದಂತೆ ನತಾಲೀ ಸಿವರ್, ಎನಿ ಶುಬ್ರ್ ಸೋಲ್ ಆಂಗ್ಲ ಪಡೆಯ ಬೌಲಿಂಗ್​ನ ಶಕ್ತಿಯಾಗಿದ್ದಾರೆ.
ಭಾರತ ಮಹಿಳಾ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಟಿ-20 ಮಾದರಿಯಲ್ಲಿ ಈವರೆಗೂ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದೂ 10 ಪಂದ್ಯಗಳಲ್ಲಿ ಇಂಗ್ಲೆಂಡ್​ ಜಯಸಿದ್ರೆ, 3 ಮ್ಯಾಚ್​ಗಳಲ್ಲಿ ಟೀಮ್​ಇಂಡಿಯಾ ಜಯಸಿದೆ.
ನೂತನ ಕೋಚ್​ ರಮೇಶ್​ ಪವಾರ್​ ನೇತೃತ್ವದಲ್ಲಿ ಟೂರ್ನಿಯಲ್ಲಿ ಕೌರ್​ ಬಳಗ ಭರ್ಜರಿ ಪ್ರದರ್ಶನ ನೀಡಿದೆ. ಈ ಬಗ್ಗೆ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ದೊಡ್ಡ ಮೊತ್ತವನ್ನು ಬೆನ್ನತ್ತಲು ಶಕ್ತರಾಗಿದ್ದೇವೆ. ನಾವು ಸೆಮಿಪೈನಲ್​ ತಲುಪಿದ ಕ್ರೇಡಿಟ್​ ಅನ್ನು ರಮೇಶ್​ ಅವರಿಗೆ ನೀಡಲಿಚ್ಛಿಸುತ್ತೇವೆ” ಅಂದಿದ್ದಾರೆ.
ಆಟಗಾರ್ತಿಯರ ನಡುವಿನ ಮನಸ್ತಾಪದ ಕಾರಣದಿಂದ ಹಿಂದಿನ ಕೋಚ್ ತುಷಾರ್ ಅರೋತೆ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ರಮೇಶ್ ಪವಾರ್ ನೇಮಿಸಲಾಗಿತ್ತು.
ನಾಳಿನ ಪಂದ್ಯ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಪಂದ್ಯ ಆರಂಭವಾಗಲಿದ್ದು, ಸರ್ ವಿವಿಎನ್ ರಿಚರ್ಡ್ಸ್​​ ಮೈದಾನದಲ್ಲಿ ಪಂದ್ಯ ನಡೆಯಲಿದೆ.

RELATED ARTICLES

Related Articles

TRENDING ARTICLES