ಕೇರಳ ರಾಜ್ಯದ ಪ್ರಮುಖ ನದಿಯಾಗಿದ್ದ ಕುಟ್ಟೆಂಪೂರ್ ನದಿ ಕಳೆದ 10 ವರ್ಷಗಳಿಂದ ಸಾಕಷ್ಟು ಮಲೀನಗೊಂಡಿತ್ತು. ಕುಡಿಯೋದಕ್ಕೆ ಇರಲಿ. ಬಳಸೋದಕ್ಕೂ ಕೂಡ ಯೋಗ್ಯವಾಗಿರದಷ್ಟು ಕಲುಶಿತವಾಗಿತ್ತು. ಆದ್ರೆ ಸ್ಥಳೀಯರಿಗೆ ಯಾವಾಗ ನದಿಯ ಮಹತ್ವ ಅರಿವಾಯ್ತೋ ಆಗ ತಡ ಮಾಡದೇ, ತ್ಯಾಜ್ಯವನ್ನೆಲ್ಲಾ ಒಂದೆಡೆ ಸರಿಸಿ, ಕಟ್ಟೆಂಪೆರೂರ್ ನದಿಯನ್ನು ಶುಚಿಗೊಳಸಿದ್ದಾರೆ.
ಅಲೆಪ್ಪಿ ಜಿಲ್ಲೆಯ ಬುಧ್ನೋರ್ ಪಂಚಾಯತ್ ವ್ಯಾಪ್ತಿಯ ಸುಮಾರು 700 ಜನರ ಶ್ರಮದಿಂದ ಈ ನದಿ ಶುಚಿಗೊಂಡಿದೆ. ಪುರುಷರು, ಮಹಿಳೆಯರು ಎನ್ನದೇ ವಯಸ್ಸಾದವರು ಮತ್ತು ಮಕ್ಕಳು ಸೇರಿ ಸುಮಾರು 70 ದಿನ ಜೊತೆ ಸೇರಿ ನದಿ ಸ್ವಚ್ಛಗೊಳಿಸೋ ಕಾರ್ಯದಲ್ಲಿ ತೊಡಗಿದ್ರು. ಇವರ ಶ್ರಮದ ಪರಿಣಾಮದಿಂದ ಕಟ್ಟೆಂಪೆರೂರ್ ನದಿ ಶುಭ್ರವಾಗಿ ಕಂಗೊಳಿಸುತ್ತಿದೆ.
ಅಷ್ಟಕ್ಕೂ ಈ ನದಿ ಇಷ್ಟರ ಮಟ್ಟಿಗೆ ಗಲೀಜಾಗೋದಕ್ಕೆ ಕಾರಣ ಕಟ್ಟೆಂಪೆರೂರ್ ನದಿಯ ಉದ್ದಕ್ಕೂ ಇರುವ ಕಾರ್ಖಾನೆಗಳು. ಕಾರ್ಖಾನೆಗಳಿಂದ ಬಂದ ತ್ಯಾಜ್ಯ, ವಿಷಯುಕ್ತ ನೀರು ನದಿಗೆ ಸೇರಿ ಸಂಪೂರ್ಣವಾಗಿ ಕಲುಶಿತಗೊಂಡಿತ್ತು. ಅಷ್ಟೇ ಅಲ್ಲ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳನ್ನು ನದಿಗೆ ಎಸೆದಿದ್ದ ಕಾರಣ ತಾಜ್ಯಗಳಿಂದ ತುಂಬಿ ಹೋಗಿತ್ತು.
ಇಲ್ಲಿನ ಜನರು 10 ವರ್ಷಗಲಿಂದ ಶುಚಿ ಮಾಡದೆ ಸುಮ್ಮನಿದ್ರು. ಆದ್ರೆ ಈಗ ಶುಚಿ ಮಾಡೋದಕ್ಕೂ ಒಂದು ಕಾರಣವಿದೆ. ಬುಧ್ನೋರ್ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾಗಿತ್ತು. ಈ ವೇಳೆಯಲ್ಲಿ ನದಿ ನೀರನ್ನು ಬಿಟ್ಟು ಬೇರೆ ನೀರಿನ ಸೋರ್ಸ್ ಕೂಡ ಇರಲಿಲ್ಲ. ತ್ಯಾಜ್ಯದಿಂದ ತುಂಬಿ ಹೋಗಿದ್ದ ನದಿಯನ್ನು ಶುಚಿಗೊಳಿಸೋದು ಬಿಟ್ರೆ ಬೇರೆ ದಾರಿ ಇರಲಿಲ್ಲ. ಅದಕ್ಕಾಗಿಯೇ ಹಗಲು ರಾತ್ರಿ ಎನ್ನದೇ ಶುಚಿಕಾರ್ಯದಲ್ಲಿ ತೊಡಗಿಕೊಂಡು ಈ ಕಾರ್ಯ ಮಾಡಿದ್ದಾರೆ.
ಸರಕಾರಕ್ಕೆ ನದಿಯನ್ನು ಸ್ವಚ್ಛಗೊಳಿಸುವ ಬಗ್ಗೆ ಮತ್ತು ಪರಿಸರಕ್ಕೆ ಅದರಿಂದಾಗುವ ಲಾಭದ ಬಗ್ಗೆ ವರದಿ ನೀಡಿದ್ರು. ಸುತ್ತಮುತ್ತಲಿನ ಜನರಿಗೆ ನದಿ ನೀರಿನ ಮಹತ್ವವನ್ನು ತಿಳಿ ಹೇಳಿದ್ರು. ಅಷ್ಟೇ ಅಲ್ಲ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರನ್ನು ಕೂಡ ಸೇರಿಸಿಕೊಂಡ್ರು. ಊರಿನ ಜನರೇ ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದ ಮೇಲೆ ಎಲ್ಲಾ ಕೆಲಸಗಳು ಸುಲಭವಾಯಿತು. ಕಟ್ಟೆಂಪೆರೂರ್ ನದಿ ತನ್ನ ನೈಜತೆಯನ್ನು ಮರಳಿ ಪಡೆಯಿತು.
ಸರಕಾರ ಮತ್ತು ಪಂಚಾಯತ್ ಜಂಟಿಯಾಗಿ ಮಾಡಿದ ಈ ಕೆಲಸ ಸಾಕಷ್ಟು ಯಶಸ್ಸು ತಂದುಕೊಟ್ಟಿದೆ. ನದಿ ಮಾತ್ರ ಶುದ್ಧವಾಗಿದ್ದು ಅಲ್ಲದೆ, ಅಲ್ಲಿನ ನೀರು ಕೂಡ ಈಗ ಬಳಕೆಗೆ ಲಭ್ಯವಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಅನ್ನುವುದನ್ನು ಬೂಧನೂರ್ ಗ್ರಾಮಸ್ಥರು ಮಾಡಿ ತೋರಿಸಿದ್ದಾರೆ.