Sunday, June 4, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜ್ಯಲಂಡನ್ ನಿಂದ ಶಿವಮೊಗ್ಗಕ್ಕೆ ಬರ್ತಿದೆ ಶ್ರೀ ಬಸವೇಶ್ವರರ ಪುತ್ಥಳಿ..!

ಲಂಡನ್ ನಿಂದ ಶಿವಮೊಗ್ಗಕ್ಕೆ ಬರ್ತಿದೆ ಶ್ರೀ ಬಸವೇಶ್ವರರ ಪುತ್ಥಳಿ..!

ಈಗಾಗಲೇ, ಶಿವಮೊಗ್ಗ ಪಾಲಿಕೆಗೆ ಲಂಡನ್ ನಿಂದ ಹಸ್ತಾಂತರವಾಗಿದ್ದ ವಿಶ್ವಗುರು ಶ್ರೀ ಬಸವೇಶ್ವರರ ಪುತ್ಥಳಿ ಕೊನೆಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದೆ. ಆದರೆ, ಅದರ ಸ್ಥಾಪನೆಗೆ ಮಾತ್ರ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಪಾಲಿಕೆಯ ನಿಷ್ಕಾಳಜಿ ಹಾಗೂ ಕಾನೂನು ತೊಡಕಿನಿಂದಾಗಿ ಲಂಡನ್ ನಲ್ಲೇ ಧೂಳು ಹಿಡಿದು ಮೂಲೆ ಸೇರಿದ್ದ ಬಸವೇಶ್ವರರ ಪ್ರತಿಮೆ ಇದೀಗ ಶಿವಮೊಗ್ಗಕ್ಕಾಗಮಿಸುತ್ತಿದ್ದು, ಇದರ ಸ್ವಾಗತವೇನೋ ಭರ್ಜರಿಯಾಗಿಯೇ ನಡೆಯುತ್ತಿದೆ. ಆದರೆ, ಪ್ರತಿಷ್ಠಾಪನೆಗಾಗಿ, ಪೌರಾಡಳಿತ ನಿರ್ದೇಶನಾಲಯದ ಅನುಮತಿಗಾಗಿ ಎದುರು ನೋಡುವಂತಾಗಿದೆ. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾನ್ ಮಾನವತಾವಾದಿ, ವಿಶ್ವಗುರು ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಈಗಾಗಲೇ, ಪುತ್ಥಳಿ ನಿರ್ಮಾಣ ಕೂಡ ಆಗಿದ್ದು, ಲಂಡನ್ ನಲ್ಲಿದ್ದ ಬಸವೇಶ್ವರರ ಪುತ್ಥಳಿ ಇದೀಗ ಶಿವಮೊಗ್ಗಕ್ಕೆ ಆಗಮಿಸುವ ಎಲ್ಲಾ ತಯಾರಿ ನಡೆದಿವೆ. ಲಂಡನ್ ನ ಲ್ಯಾಂಬರ್ತ್ ಬಸವೇಶ್ವರ ಫೌಂಡೇಷನ್ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಗೆ, ವಿಶ್ವಗುರು ಬಸವೇಶ್ವರ ಪುತ್ತಳಿ ಹಸ್ತಾಂತರಗೊಂಡಿದ್ದು, ನ. 22 ರಂದು ಪುತ್ತಳಿ ಶಿವಮೊಗ್ಗಕ್ಕೆ ಆಗಮಿಸಲಿದೆ. ಈ ಪುತ್ಥಳಿ ಪ್ರತಿಷ್ಠಾಪನೆಗೆ ಈಗಾಗಲೇ, ನಗರದ ಬಸವೇಶ್ವರ ವೃತ್ತದ ಪಕ್ಕದಲ್ಲಿಯೇ ಇರುವ ಗಾಂಧಿ ಪಾರ್ಕ್ ಗೇಟ್ ಮುಂಭಾಗದ ಜಾಗ ಅಂತಿಮಗೊಂಡಿದ್ದು, ಆದರೆ, ಇದರ ಪ್ರತಿಷ್ಠಾಪನೆಗೆ ಮಾತ್ರ ಬೆಂಗಳೂರು ಪೌರಾಡಳಿತ ಇದುವರೆಗೂ ಯಾವುದೇ ಒಪ್ಪಿಗೆ ನೀಡಿಲ್ಲ.

ಹೆದ್ದಾರಿಯ ಆಸುಪಾಸು ಯಾವುದೇ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೊಡುವುದಿಲ್ಲ ಎಂದು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಖಡಕ್ ಆಗಿ ಹೇಳಿದೆ. ಈ ಬಗ್ಗೆ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಸೊಪ್ಪು ಹಾಕಿಲ್ಲ. ಇದು ಪಾಲಿಕೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಪೌರಾಡಳಿತದ ಅನುಮತಿ ಸಿಗುವವರೆಗೂ, ಪ್ರತಿಷ್ಠಾಪನೆಯ ಭಾಗ್ಯ ಇಲ್ಲ ಎಂದೇ ಹೇಳಲಾಗುತ್ತಿದೆ. ಆದರೆ, ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಎಲ್ಲಾ ಅಗತ್ಯ ತಯಾರಿ ನಡೆಸಲಾಗಿದ್ದು, ಪಾಲಿಕೆ ಜೊತೆಗೆ ವೀರಶೈವ ಗುರುಗಳು ಹಾಗೂ ಮುಖಂಡರು ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ. ಇನ್ನು, ನ. 22ರ ಮದ್ಯಾಹ್ನ 3 ಗಂಟೆಗೆ ನಗರದ ಬೆಕ್ಕಿನ ಕಲ್ಮಠ ಆವರಣದಲ್ಲಿ ಬಸವೇಶ್ವರ ಪುತ್ಥಳಿ ಬರಮಾಡಿಕೊಂಡು, ಅಲ್ಲಿಂದ, ಬೈಕ್, ಕಾರುಗಳ ಮೂಲಕ ಮೆರವಣಿಗೆಯಲ್ಲಿ ಪುತ್ಥಳಿಯನ್ನ ನೆಹರೂ ರಸ್ತೆ, ಗೋಪಿ ವೃತ್ತ, ಕಮಲಾ ನೆಹರೂ ಕಾಲೇಜು ರಸ್ತೆಯ ಮೂಲಕ ವೀರಶೈವ ಕಲ್ಯಾಣ ಮಂದಿರದವರೆಗೆ ಮೆರವಣಿಗೆಯಲ್ಲಿ ತರಲು ತೀರ್ಮಾನಿಸಲಾಗಿದೆ. ಭಾರತೀಯ ಮೂಲದ ಇಂಗ್ಲೆಂಡ್ ನಿವಾಸಿ, ಲಂಡನ್ ನ ಲ್ಯಾಂಬರ್ತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರನ್ನು 2016 ರಲ್ಲಿ ಶಿವಮೊಗ್ಗಕ್ಕೆ ಕರೆಸಿ ಸನ್ಮಾನಿಸಿದ್ದ ವೇಳೆಯಲ್ಲಿ, ಬಸವಣ್ಣನವರ ಪುತ್ಥಳಿಯನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಭರವಸೆ ನೀಡಿದ್ದರು.

ಅವರು ಕೊಟ್ಟ ಮಾತಿನಂತೆ, ಶಿವಮೊಗ್ಗದ ಖ್ಯಾತ ಶಿಲ್ಪಿ ಕಾಶಿನಾಥ್ ಅವರ ಪುತ್ರ ಕಲಾವಿದ, ಶ್ರೀಧರ್ ಅವರಿಂದ 2 ಪುತ್ಥಳಿ ನಿರ್ಮಿಸಲಾಗಿತ್ತು. ಒಂದನ್ನು ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ಪ್ರತಿಷ್ಠಾಪಿಸಲಾಗಿದ್ದು, ಮತ್ತೊಂದನ್ನು, ಶಿವಮೊಗ್ಗಕ್ಕೆ ಮೀಸಲಿಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಪುತ್ಥಳಿ ಹಸ್ತಾಂತರ ಹಾಗೂ ಪ್ರತಿಷ್ಟಾಪನೆಗೆ ಸಂಬಂಧಿಸಿದಂತೆ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಅಂದಿನ ಮೇಯರ್ ಏಳುಮಲೈ ಬಾಬು ಹಾಗೂ ಸದಸ್ಯ ಹೆಚ್.ಸಿ. ಯೋಗಿಶ್ ಅವರನ್ನು ಕಳೆದ 2017 ರ ಅಕ್ಟೋಬರ್ 8 ರಂದು ಲಂಡನ್ ಗೆ ಪಾಲಿಕೆ ಕಳಿಸಿ ಕೊಟ್ಟಿದ್ದು, ಅಲ್ಲಿ, ಶಿವಮೊಗ್ಗಕ್ಕೆ ಈ ಪುತ್ಥಳಿಯನ್ನು ಹಸ್ತಾಂತರಿಸಲಾಗಿತ್ತು. ಇದೀಗ ಈ ಪುತ್ಥಳಿ ಶಿವಮೊಗ್ಗಕ್ಕಾಗಮಿಸುತ್ತಿದ್ದು, ಇದರ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿದೆ.

LEAVE A REPLY

Please enter your comment!
Please enter your name here

Most Popular

Recent Comments