Wednesday, May 22, 2024

ಭುಗಿಲೆದ್ದಿದೆ ಕಬ್ಬು ಬೆಳೆಗಾರರ ಹೋರಾಟ.. 3 ವರ್ಷಗಳಿಂದಲೂ ಹಣಕ್ಕಾಗಿ ಪರದಾಟ..

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದಿದೆ. ಕಬ್ಬಿಗೆ ವೈಜಾನಿಕ ಬೆಲೆ ನಿಗದಿಗೊಳಿಸಿ, ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕೋಟಿ ಕೋಟಿ ಹಣವನ್ನ ಪಾವತಿ ಮಾಡಿ ಅಂತ ಕಬ್ಬು ಬೆಳೆಗಾರರು ಹೋರಾಟಕ್ಕಿಳಿದಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಮರ ಸಾರಿದ್ದಾರೆ. ಇದು ಮಾತಲ್ಲೇ ಆಟ ಆಡುತ್ತೀರೋ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದೆ.. ಕಬ್ಬು ಕಾದಾಟ ಫುಲ್ ಡೀಟೆಲ್ಸ್ ಇಲ್ಲಿದೆ.
ಕಬ್ಬು ಬೆಳೆಗಾರರು ತಬ್ಬಿಬ್ಬು..! ದರ ನಿಗದಿಗಾಗಿ ಬೀದಿಗಿಳಿದ ರೈತರು..! : ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ತೀವ್ರಗೊಂಡಿದೆ. ಬಾಕಿ ಪಾವತಿ ಮತ್ತು ದರ ನಿಗದಿ ವಿಷಯವಾಗಿ ಸಕ್ಕರೆ ಕಾರ್ಖಾನೆಗಳು ಮತ್ತು ರಾಜ್ಯ ಸರಕಾರದ ವಿರುದ್ಧ ಕಬ್ಬು ಬೆಳೆಗಾರರು ಕಳೆದೆರಡು ತಿಂಗಳಿನಿಂದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಒಂದು ಟನ್ ಕಬ್ಬಿನ ದರ 3 ಸಾವಿರ ರೂಪಾಯಿ ಮೇಲ್ಪಟ್ಟು ದರ ನಿಗದಿ ಮಾಡಬೇಕು. ಕಬ್ಬು ಪೂರೈಸಿದ 15 ದಿನಗಳೊಳಗೆ ಮೊದಲ ಕಂತಿನ ಹಣ ಪಾವತಿಸಬೇಕು. ಎಸ್ಎಪಿ’ಯಂತೆ ಸಕ್ಕರೆ ಮಾರಾಟದ ಲಾಭಾಂಶ ಬೆಳೆಗಾರರಿಗೆ ಕೊಡಬೇಕು. ಕಬ್ಬಿನ ಹಳೆಯ ಬಾಕಿ ಪಾವತಿಸಬೇಕು ಎನ್ನುವುದು ಕಬ್ಬು ಬೆಳಗಾರರ ಪ್ರಮುಖ ಆಗ್ರಹ.

ಬೆಳಗಾವಿ, ಬಾಗಲಕೋಟೆಯಲ್ಲಿ ಸರ್ಕಾರದ ವಿರುದ್ಧ ರೊಚ್ಚು : ರಾಜ್ಯದಲ್ಲಿರುವ 71 ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 500 ಕೋಟಿ ರೂಪಾಯಿಗೆ ಹೆಚ್ಚು ಕಬ್ಬಿನ ಬಾಕಿ ಹಣ ಉಳಿಸಿಕೊಂಡಿವೆ. ಅದರಲ್ಲೂ ರಾಜ್ಯದಲ್ಲೇ ಹೆಚ್ಚು ಸಕ್ಕರೆ ಕಾರ್ಖಾನೆಗಳು ಇರುವ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಹುತೇಕ ಬೆಳೆಗಾರರು ಈ ಬಾರಿ ಕಬ್ಬು ಕಟಾವು ಮಾಡದೆ ಪ್ರತಿಭಟನೆಗಿಳಿದಿದ್ದರು.
ಇತ್ತ ದಕ್ಷಿಣ ಕರ್ನಾಟಕದ ಮಂಡ್ಯ, ಚಾಮರಾಜನಗರ ಜಿಲ್ಲೆಯ ರೈತರು ಕಳೆದ ಒಂದು ತಿಂಗಳಿನಿಂದ ಧರಣಿ, ಪ್ರತಿಭಟನೆ, ರಸ್ತೆ ತಡೆ ಮಾಡುವ ಮೂಲಕ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಬ್ಬು ಬೆಳೆಗೆ ನ್ಯಾಯೋಚಿತ ದರ ನಿಗದಿ ಮಾಡುವಂತೆ ಆಗ್ರಹಿಸಿ ಕಳೆದೆರಡು ತಿಂಗಳಿನಿಂದ ದೊಡ್ಡ ಸಂಖ್ಯೆಯ ರೈತ ಸಮುದಾಯ ಹೋರಾಡುತ್ತಿದ್ದರೂ ರಾಜ್ಯ ಸರಕಾರಕ್ಕೆ ಕಾಣುತ್ತಿಲ್ಲ.

ವರ್ಷವಾದರೂ ಬಾಕಿ ಹಣ ಪಾವತಿ ಇಲ್ಲ : ಕಾರ್ಖಾನೆಗಳು, ಕಬ್ಬು ನುರಿಸಿದ 14 ದಿನಗಳಲ್ಲಿ ಬಿಲ್ ಪಾವತಿಸಬೇಕು ಎಂಬ ಆದೇಶವಿದೆ. ಆದರೆ ಆರೇಳು ತಿಂಗಳು ಕಳೆದರೂ ಕಾರ್ಖಾನೆಗಳು ಬಿಲ್ ಪಾವತಿಸುತ್ತಿಲ್ಲ. ಮನಬಂದಂತೆ ದರ ನಿಗದಿಪಡಿಸುವ ಕಾರ್ಖಾನೆಗಳು ಕಬ್ಬು ಪೂರೈಕೆ ಕಡಿಮೆಯಾಗುತ್ತಿದ್ದಂತೆ ದರ ಇಳಿಸಿ ರೈತರನ್ನು ಗೊಂದಲಕ್ಕೀಡು ಮಾಡುತ್ತಿವೆ.

ರಾಜಕೀಯ ನಾಯಕರ ಮಾಲೀಕತ್ವದಲ್ಲಿರುವ ಕಾರ್ಖಾನೆಗಳು ಹೆಚ್ಚಿನ ದರ ಘೋಷಣೆ ಮಾಡಿದರೂ ಕಬ್ಬು ನುರಿಸಿದ ಬಳಿಕ ಬೆಳೆಗಾರರಿಗೆ ಬೇರೊಂದು ದರ ಪಾವತಿಸಿ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಪ್ರಭಾವಿ ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳೇ ಕಬ್ಬು ಬಿಲ್ ಬಾಕಿ ಉಳಿಸಿಕೊಂಡಿವೆ.

ಕಾರ್ಖಾನೆಗಳ ಲಾಬಿಗೆ ಮಣಿದ ಅಧಿಕಾರಿಗಳು..!? : ಈ ವಿಚಾರದಲ್ಲಿ ಅಧಿಕಾರಿಗಳೂ ಕೈ ಚೆಲ್ಲಿ ಕುಳಿತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಲಾಬಿಗೆ ಅಧಿಕಾರಿಗಳು ಮಣಿದಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿಂದೆ ಸಕ್ಕರೆ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರನ್ನು ರಾತೋರಾತ್ರಿ ವರ್ಗಾವಣೆ ಮಾಡಿದ್ದೇ ಇಂದು ಅಧಿಕಾರಿಗಳ ಮೌನವಹಿಸಲು ಕಾರಣ ಎಂಬ ಮಾತುಗಳಿವೆ.

ಈ ನಡುವೆಯೇ ಮತ್ತೆ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡಲೇ ಮಧ್ಯೆ ಪ್ರವೇಶಿಸಿ ಕಬ್ಬು ಬೆಳೆಗಾರರ ಹಿತ ಪ್ರತಿ ವರ್ಷವೂ ಕಬ್ಬು ಖರೀದಿ ಉದ್ದೇಶಕ್ಕೆ ಕೇಂದ್ರ ಸರಕಾರ ನಿಗದಿ ಮಾಡುವ ಎಫ್ಆರ್ ಪಿ -ನ್ಯಾಯೋಚಿತ ಮತ್ತು ಲಾಭದಾಯಕ ದರ, ಆಧರಿಸಿ ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ.

ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರಕ್ಕೆ ದೊಡ್ಡ ಸವಾಲು : ಒಂದು ವೇಳೆ ಎಫ್ಆರ್ ಪಿ ಕಡಿಮೆಯಾದರೂ ರಾಜ್ಯದ ಕಡೆಯಿಂದ ಪ್ರೋತ್ಸಾಹ ಧನ ಸೇರಿಸಿ ಕೊಡುವ ಮೂಲಕ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಸಂಖ್ಯೆಯನ್ನು ತಡೆಯಬೇಕಿದೆ. ಇಲ್ಲವಾದಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯೇ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

500 ಕೋಟಿ ರೂಪಾಯಿಗೂ ಅಧಿಕ ಬಾಕಿ : ಇದು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಕಬ್ಬು ಬೆಳೆಯುವ ಇತರ ರಾಜ್ಯಗಳ ಪರಿಸ್ಥಿತಿಯೂ ಸರಿಸುಮಾರು ಹೀಗೇ ಇದೆ. ದೇಶದ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣ ಬರೋಬ್ಬರಿ 10 ಸಾವಿರದ 520 ಕೋಟಿ ರೂಪಾಯಿ ಆಗಿದ್ದರೆ, ಕರ್ನಾಟಕದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಹಣ ರೈತರಿಗೆ ಬರಬೇಕಾಗಿದೆ.

ಈ ಹಿಂದೆ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ, ರೈತ ಸಂಘ ಹಾಗೂ ಕಬ್ಬು ಬೆಳಗಾರರ ಭಾರಿ ಆಗ್ರಹದ ನಂತರ ಪ್ರತಿ ಟನ್ ಕಬ್ಬಿಗೆ 2 ಸಾವಿರದ 500 ರೂಪಾಯಿವೆಂದು, ಎಸ್.ಎ.ಪಿ ಘೋಷಿಸಿತು. ನಿಜ, ಜತೆಯಲ್ಲಿ, ಸರಕಾರ ತನ್ನ ವತಿಯಿಂದ ಪ್ರತಿ ಟನ್ ಕಬ್ಬಿಗೆ 150 ರೂಪಾಯಿ ದರದಲ್ಲಿ ಪ್ರೋತ್ಸಾಹ ಧನ ನೀಡುವ ಭರವಸೆಯನ್ನೂ ಪ್ರಕಟಿಸಿತು.

ಸರ್ಕಾರದ ಮಾತೇ ಕೇಳುತ್ತಿಲ್ಲ ಸಕ್ಕರೆ ಕಾರ್ಖಾನೆಗಳು : ಆದರೆ, ರಾಜ್ಯ ಸರಕಾರದ ಈ ಆದೇಶವನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೇರ್ ಲೆಸ್ ಮಾಡಿದರು. ಸರ್ಕಾರಕ್ಕೆ ಸೆಡ್ಡು ಹೊಡೆದು ರಾಜ್ಯ ಹೈಕೋರ್ಟ್​​ನಿಂದ ತಡೆಯಾಜ್ಞೆ ತಂದರು. ತೀರ್ಪು ಬರುವವರೆಗೂ ರಾಜ್ಯ ಸರ್ಕಾರ ನಿಗದಿಪಡಿಸಿದ ದರವನ್ನು ಜಾರಿಮಾಡಲು ಬರುವುದಿಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿತು.

ಏನೇ ಹೇಳಿ, ಮೊದಲೇ ಬೆಳೆ ಮತ್ತು ಬೆಲೆ ಇಲ್ಲದೆ ಕಂಗಾಲಾಗಿರುವ ರೈತರು, ಸಾಲದ ಶೂಲಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿ ತೀರ್ಪು ಬರುವವರೆಗೂ ರೈತರಿಗೆ ಭಾಗಶಃ ಹಣವನ್ನೂ ಕೊಡದೆ ಸತಾಯಿಸುವುದು ನ್ಯಾಯವಲ್ಲ. ಕನಿಷ್ಠ ಕೇಂದ್ರ ಸರ್ಕಾರ ನಿಗದಿಪಡಿಸಿದ 2 ಸಾವಿರದ 100ರ ದರದಲ್ಲಾದರೂ ಕಾರ್ಖಾನೆಗಳು ರೈತರಿಗೆ ಹಣ ಸಂದಾಯ ಮಾಡಬಹುದಾಗಿತ್ತು.

21 ಸಕ್ಕರೆ ಕಾರ್ಖಾನೆಗಳಿಂದ ಪಾವತಿಯಾಗದ ಬೆಳೆಗಾರರ ಹಣ : ಆದರೆ ರಾಜ್ಯದ ಒಟ್ಟು 71 ಸಕ್ಕರೆ ಕಾರ್ಖಾನೆಗಳ ಪೈಕಿ 39 ಕಾರ್ಖಾನೆಗಳಷ್ಟೇ 2 ಸಾವಿರದ 100 ರೂಪಾಯಿ ದರದಲ್ಲಿ ರೈತರಿಗೆ ಹಣವನ್ನು ಸಂದಾಯ ಮಾಡಿವೆ ನಿಜ, ಇನ್ನುಳಿದ 21 ಕಾರ್ಖಾನೆಗಳು ಇದುವರೆಗೆ ಕಬ್ಬು ಒದಗಿಸಿದ ರೈತರಿಗೆ ಹಣವನ್ನು ನೀಡಿಲ್ಲ. ಹಾಗಾಗಿ ಈಗ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಮಾಲೀಕರ ವಿರುದ್ಧ ಕಬ್ಬು ಬೆಳೆಗಾರರು ತಿರುಗಿಬಿದ್ದಿದ್ಧಾರೆ.

ಇನ್ನೊಂದು ಗಂಭೀರ ವಿಚಾರ ಹೇಳಬೇಕೆಂದರೆ, ಬೆಳಗಾವಿ ಹಾಗೂ ಬಾಗಲಕೋಟೆ ಇವೆರಡೂ ಜಿಲ್ಲೆಗಳಲ್ಲೂ ಈಗಾಗಲೇ ಕಬ್ಬಿನ ಕಟಾವು ಶುರುವಾಗಿದೆ. ಆದರೆ, ಈ ಎರಡೂ ಜಿಲ್ಲೆಗಳಲ್ಲಿ ಬೆಳೆಗಾರರು ಈ ಬಾರಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುವುದನ್ನೇ ನಿಲ್ಲಿಸಿದ್ದಾರೆ. ಇದಕ್ಕೆ ಕಾರಣಗಳು ಹಲವಾರು.

ಕಬ್ಬು ತರುವಾಗ ಒಂದು.. ನುರಿಸಿದ ನಂತರ ಮತ್ತೊಂದು ದರ : ಪ್ರಮುಖ ಕಾರಣ ಏನೆಂದರೆ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜಕೀಯ ನಾಯಕರ ಮಾಲೀಕತ್ವದ ಕಾರ್ಖಾನೆಗಳು ಹೆಚ್ಚಿನ ದರ ಘೋಷಣೆ ಮಾಡಿದರೂ ಕಬ್ಬು ನುರಿಸಿದ ಬಳಿಕ ಬೆಳೆಗಾರರಿಗೆ ಬೇರೊಂದು ದರ ಪಾವತಿಸಿ ಕೈತೊಳೆದುಕೊಳ್ಳುತ್ತಿವೆ ಎನ್ನುವ ದೂರು ಸಹ ಇದೆ.
ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜಕೀಯ ಪ್ರಭಾವಕ್ಕೆ ಹೆದರಿ ಕೆಲ ಬೆಳಗಾರರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುತ್ತಿಲ್ಲವಂತೆ, ಮುಖ್ಯವಾಗಿ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ ಎನ್ನುವುದು ಪ್ರಮುಖ ಆರೋಪ. ಬೆಳಗಾವಿ ಜಿಲ್ಲೆಯ 17 ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಹಣವನ್ನು ಪಾವತಿಸುತ್ತಿಲ್ಲವಂತೆ.

ಬೆಳಗಾವಿಯಲ್ಲಿ ಜಾರಕಿಹೊಳಿ, ಕತ್ತಿಯವರದ್ದೇ ಪಾರುಪತ್ಯ : ಕಾಂಗ್ರೆಸ್ ಪ್ರಭಾವಿ ಮುಖಂಡ ಸತೀಶ ಜಾರಕಿಹೊಳಿ, ಬಿಜೆಪಿ ಮುಖಂಡ, ಶಾಸಕ ಉಮೇಶ ಕತ್ತಿ ತಲಾ ಎರಡು ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ. ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದಲ್ಲಿ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಇದ್ದು, ಇದೇ ಹೆಚ್ಚು ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗ್ತಿದೆ.

ನೋಡಿ, ಈ ವರ್ಷ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​ ಕೂಡ ಹರ್ಷ ಎನ್ನುವ ಸಕ್ಕರೆ ಕಾರ್ಖಾನೆ ಆರಂಭಿಸಿದ್ದಾರೆ. ಇನ್ನು ಬಾಕಿ ಹಣ ಹೇಳಬೇಕೆಂದರೆ, ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಕಬ್ಬು ಬೆಳೆಗಾರರಿಗೆ ಬಾಕಿ ಹಣ ಬರಬೇಕಿದೆ ಎನ್ನಲಾಗಿದೆ. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಹೊರತುಪಡಿಸಿದರೆ ಇನ್ನುಳಿದ ಕಾರ್ಖಾನೆಗಳು ಗಮನವನ್ನೇ ಹರಿಸಲಿಲ್ಲ.

ಮೇಲ್ಪಂಕ್ತಿ ಪ್ರದರ್ಶಿಸದ ರಾಜಕೀಯ ಪಕ್ಷಗಳು..! : ತಮ್ಮ ತಮ್ಮ ಪಕ್ಷಗಳಲ್ಲೇ ಇರುವ ತಮ್ಮ ವೈರಿಗಳನ್ನು ಗುರುತಿಸಲಾಗದೆ ಕಬ್ಬುಬೆಳೆಗಾರರು ವಂಚನೆಗೆ ಒಳಗಾಗುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಹೊಂದಿರುವ ತಮ್ಮ ರಾಜಕೀಯ ಪಕ್ಷಗಳ ಮುಖಂಡರಿಂದ ಕಬ್ಬಿನ ಬಾಕಿ ಹಣ ಕೊಡಿಸುವ ಮೇಲ್ಪಂಕ್ತಿಯನ್ನು ಯಾವ ಪಕ್ಷವೂ ಪ್ರದರ್ಶಿಸುತ್ತಿಲ್ಲ.

ಇನ್ನು ಬಾಗಲಕೋಟೆಯ ಮುಧೋಳ ಭಾಗದ ಕಬ್ಬಿನ ಬೆಳೆಗಾರರು ತಮಗಾಗುತ್ತಿರುವ ಅನ್ಯಾಯವನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿಗೆ ಪತ್ರ ಬರೆದಿರುವ ರೈತರು ಸಕ್ಕರೆ ಕಾರ್ಖಾನೆಗಳಿಂದ ರಾಜ್ಯ, ಕೇಂದ್ರ ಸರಕಾರಕ್ಕೆ ಹೇಗೆ ವಂಚನೆಯಾಗುತ್ತಿದೆ ಎನ್ನುವುದನ್ನು ಎಳೆ ಎಳೆಯಾಗಿ ಹೇಳಿದ್ದಾರೆ.

ಸಕ್ಕರೆ ರಿಕವರಿ, ತೂಕದಲ್ಲೂ ಭಾರಿ ಮೋಸ : ಬಾಗಲಕೋಟೆ ಜಿಲ್ಲೆಯಲ್ಲಿರೋ 11 ಸಕ್ಕರೆ ಕಾರ್ಖಾನೆಯಿಂದಾಗುವ ವಂಚನೆಯನ್ನು ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾರೆ. ರೈತ ಹಿತರಕ್ಷಣಾ ಸಮಿತಿಯಿಂದ ಪ್ರಧಾನಿಗೆ ಪತ್ರ ಬರೆಯಲಾಗಿದ್ದು, ಕಾರ್ಖಾನೆ ಸಕ್ಕರೆ ರಿಕವರಿ ಹಾಗೂ ತೂಕದಲ್ಲಿ ಭಾರಿ ಲೋಪವುಂಟಾಗುತ್ತಿದೆ.

ಮಹಾರಾಷ್ಟ್ರ, ಕೊಲ್ಲಾಪುರ ಸಾಂಗ್ಲಿ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು 13ರಿಂದ 13.80 ಪರ್ಸೆಂಟ್​ ರಿಕವರಿ ತೋರಿಸುತ್ತಿವೆ. ಆದ್ರೆ ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಯವರು 10ರಿಂದ 10.80ರಷ್ಟು ಮಾತ್ರ ರಿಕವರಿ ತೋರಿಸೋ ಮೂಲಕ ಭಾರಿ ವಂಚನೆ ಮಾಡುತ್ತಿವೆ. ಪ್ರತಿ ಟನ್ ಗೆ ರೂ 550ರಿಂದ 687 ರಷ್ಟು ವಂಚನೆ ರಿಕವರಿಯಲ್ಲಿ ಆಗುತ್ತಿದೆ ಎನ್ನುವುದು ರೈತರ ಆರೋಪ.

ಸಕ್ಕರೆ ಸೆಸ್, ಅಬಕಾರಿ ಸೆಸ್​ನಲ್ಲೂ ವಂಚನೆ: ಅಲ್ಲದೆ, ಸಕ್ಕರೆ ಸೆಸ್ ಹಾಗೂ ಅಬಕಾರಿ ಸೆಸ್ನಲ್ಲೂ ಪ್ರತಿ ಟನ್ ಗೆ 350 ರೂಪಾಯಿ ನಿಂದ 500 ರೂಪಾಯಿ ಆದಾಯ ವಂಚಿಸುತ್ತಿದ್ದಾರೆ. ಇದ್ರಿಂದ ಪ್ರತಿ ಹಂಗಾಮಿನಲ್ಲಿ 500 ಕೋಟಿ ರೂಪಾಯಿ ರಾಜ್ಯ, ಕೇಂದ್ರಕ್ಕೆ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಿಂದ ವಂಚನೆಯಾಗುತ್ತಿದೆ ಎಂದು ರೈತರು ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೀದಿಗಿಳಿಯುವುದು ಬೇಡ, ಸಮಸ್ಯೆ ಬಗೆಹರಿಸೋಣ…! ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಯ..! : 
ಈ ಎಲ್ಲ ಬೆಳವಣೆಗಳ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು, ಮಂಗಳೂರಿನಲ್ಲಿ ಕಬ್ಬು ಬೆಳೆಗಾರರ ವಿಷಯ ಪ್ರಸ್ತಾಪಿಸಿ, ಕಬ್ಬು ಬೆಳೆಗಾರರು ಹೋರಾಟಕ್ಕೀಳಿಯುವುದು ಬೇಡ; ಅವರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನಹರಿಸುತ್ತೇನೆಂದು ಭರವಸೆ ನೀಡಿದ್ದಾರೆ. ಕಾದು ನೋಡೋಣ.

-ಎನ್.ಜಿ ರಮೇಶ್, ಸ್ಪೆಷಲ್ ಡೆಸ್ಕ್, ಪವರ್ ಟಿವಿ

RELATED ARTICLES

Related Articles

TRENDING ARTICLES