ಈತ ದಷ್ಟಪುಷ್ಟನಾಗಿದ್ದಾನೆ, ನೋಡಲು ಸ್ಫುರದ್ರೂಪಿ, ಬಹಳ ಆಕ್ಟೀವ್ ಕೂಡ. ಈತನಿಗೆ ಜಸ್ಟ್ 25 ವರ್ಷ ಅಷ್ಟೇ. ಆದ್ರೆ, ಈತನಿಗೆ ತನ್ನ ಎರಡು ಕಣ್ಣುಗಳು ಕಾಣುತ್ತಿಲ್ಲ. ಹೀಗಾಗಿ ಈತ ಪರಿತಪಿಸುತ್ತಿದ್ದಾನೆ. ನೊಂದಿದ್ದಾನೆ. ಏನಾದ್ರೂ ಮಾಡಿ ನನ್ನ ಎರಡೂ ಕಣ್ಞು ಕಾಣೋ ಹಾಗೆ ಮಾಡಿ ಅಂತಾ ಬೇಡಿಕೊಳ್ತಿದ್ದಾನೆ. ಹೀಗಿದ್ದರೂ ಕೂಡ, ಕಾಡಿನಲ್ಲಿ ಪುಂಡನಾಗಿ ವರ್ತಿಸುತ್ತಿದ್ದ, ಈತನಿಗೆ ಈಗ ಟ್ರೀಟ್ ಮೆಂಟ್ ಸಿಕ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ದ ಆಲೂರು ರೇಂಜ್ ನಲ್ಲಿರುವ ಕಿತ್ತನಕೆರೆ ಕಾಡಿನಲ್ಲಿ ರಾಜನಾಗಿ ಮೆರೆಯುತ್ತಿದ್ದ ಈ ಆನೆರಾಯ, ಇದೀಗ ಬಂಧಿಯಾಗಿದ್ದಾನೆ. ಅಲ್ಲದೇ, ತನ್ನ ಕಾಣದ ಎರಡೂ ಕಣ್ಣುಗಳಿಗೆ ಟ್ರೀಟ್ ಮೆಂಟ್ ಪಡೆಯುತ್ತಿದ್ದಾನೆ. ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಲ್ಲಿರೋ ಈ ಪುಂಡಾನೆ. ಇತ್ತೀಚಿಗೆ ಸಕಲೇಶಪುರದ ಅಲೂರಿನ ಕಿತ್ತನಕೆರೆ ಅರಣ್ಯ ಪ್ರದೇಶದಲ್ಲಿ, ಭಾರೀ ಸದ್ದು ಮಾಡಿದ್ದ. ಈ ಆನೆಯನ್ನ ಹಿಡಿಯಲು ಹಾಸನ, ಶಿವಮೊಗ್ಗ, ಮೈಸೂರು ವಲಯದ ಅರಣ್ಯಾಧಿಕಾರಿಗಳು, ಹರಸಾಹಸ ಪಡ್ತಿದ್ರು. ಸುಮಾರು ಒಂದುವರೆ ವರ್ಷಗಳಿಂದ ಇಲ್ಲಿ ಕಾಫಿ ಎಸ್ಟೇಟ್ ಗಳಿಗೆ, ಹೊಲ, ಗದ್ದೆಗಳಿಗೆ ನುಗ್ಗಿ ತೊಂದ್ರೆ ಕೊಡ್ತಿದ್ದ. ಕೊನೆಗೂ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದು, ಇದೀಗ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಬಿಡಲಾಗಿದೆ. ಇದನ್ನ ಸೆರೆ ಹಿಡಿದಾಗಲೇ, ಈ ಆನೆ ಕುರುಡು ಅಂತ ಗೊತ್ತಾಗಿದ್ದು. ಇದನ್ನು ಪಳಗಿಸಲು ಬಿಡಾರದಲ್ಲಿ ಇಡಲಾಗಿದ್ದು, ಇಲ್ಲಿ ಇದಕ್ಕೆ ಸೂಕ್ತ ಆರೈಕೆ ಮಾಡಲಾಗ್ತಾ ಇದೆ. ಅಲ್ಲದೆ, ಈ ಆನೆಯ ಕಣ್ಣಿಗೆ ಉಂಟಾಗಿರೋ ಸೋಂಕು ಏನು ಅನ್ನೋದನ್ನು ಪತ್ತೆ ಹಚ್ಚಲಾಗಿದ್ದು, ಕಾರ್ನಿಯಾ ಸೋಂಕಿಗೆ ತಕ್ಕ ಚಿಕಿತ್ಸೆ ನೀಡಲಾಗ್ತಾಯಿದೆ. ಜೊತೆಗೆ ಎರಡೂ ಕಣ್ಞಿನಿಂದ ನಿರಂತರ ಬರ್ತಿರೋ ನೀರನ್ನು ತಡೆಗಟ್ಟಲು, ಕಣ್ಣಿಗೆ ನೀರು ಮತ್ತು ಔಷಧಿ ಹಚ್ಚುವ ಮೂಲಕ, ಕಣ್ಣನ್ನು ಸ್ವಚ್ಚವಾಗಿರಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಈ ಆನೆ ಕೂಡ ಸ್ಪಂಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಂಧಿಸಬಹುದೆಂಬ ಆಶಾಭಾವನೆ ವ್ಯಕ್ತಪಡಿಸಾಗುತ್ತಿದೆ. ಅಲ್ಲದೇ, ಆನೆಯನ್ನ ಹೇಗೆ ಬೇಕು ಹಾಗೆ ಪಳಗಿಸಲು ಸಕ್ರೆಬೈಲು ಆನೆ ಬಿಡಾರದಲ್ಲಿ ತಜ್ಞ ವೈದ್ಯರು, ಮಾವುತರು ಹಾಗೂ ನೋಡಿಕೊಳ್ಳಲು ಕಾವಾಡಿಗರಿದ್ದಾರೆ. ಆದರೆ, ಇದರ ಕಣ್ಣಿಗೆ ಸೋಕಿರುವ ಸೋಂಕು ಹೋಗಲಾಡಿಸೋದು ಹಾಗೂ, ಕಣ್ಣು ಮತ್ತೆ ಕಾಣುವಂತೆ ಮಾಡುವುದು ಹೇಗೆ ಅನ್ನೋದು ಈಗ ಅರಣ್ಯಾಧಿಕಾರಿಗಳಿಗೆ ಸವಾಲಾಗಿದೆ. ಒಟ್ಟಾರೆ, ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರಕ್ಕೆ ಬಂದಂತಹ ಯಾವುದೇ ಆನೆಗಳಿರಲಿ, ಅವು ಪಳಗಿ, ಮಾವುತರ ಮತ್ತು ಕಾವಾಡಿಗಳ ಅಡಿಯಾಳಾಗಿಬಿಡುತ್ತವೆ. ಏನೇ ಆಗ್ಲೀ, ಇದೀಗ ಈ ಪುಂಡಾನೆ ಕೂಡ ಪಳಗಲು ಕಣ್ಣು ಸೋಂಕಿನ ಜೊತೆಗೆ, ಈ ಬಿಡಾರಕ್ಕೆ ಬಂದಿದ್ದು, ಇದು ಎಷ್ಟರಮಟ್ಟಿಗೆ ಸುಧಾರಿಸಲಿದೆ ಅನ್ನೋದು ಪ್ರಶ್ನೆ.
-ಗೋ. ವ. ಮೋಹನಕೃಷ್ಣ, ರಿಪೋರ್ಟರ್, ಶಿವಮೊಗ್ಗ