ಅನಂತ ‘ಅದಮ್ಯ ಚೇತನ’..!!
ರಾಜ್ಯದಿಂದ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಹೆಸರು ಮಾಡೋದು ಸಾಮಾನ್ಯವೇನಲ್ಲ. ಅದ್ರಲ್ಲೂ ಬಿಜೆಪಿ ಮತ್ತು ಸಂಘಪರಿವಾರದಲ್ಲೇ ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ಒಂದೇ ರೀತಿಯ ಸಾಮರ್ಥ್ಯವನ್ನು ಉಳಿಸಿಕೊಂಡು ಬಂದಿರುವ ಪ್ರಬುದ್ಧ ರಾಜಕಾರಣಿ ಅನಂತ ಕುಮಾರ್. ದಿಲ್ಲಿ ಮಟ್ಟದಲ್ಲಿಯೂ ವೆರಿ ಫವರ್ ಫುಲ್ ಲೀಡರ್. ಇಂದು ಇವರು ನೆನಪು ಮಾತ್ರ. ಈ ಹೊತ್ತಲ್ಲಿ ಅವರ ವ್ಯಕ್ತಿ-ವಿಶೇಷ, ರಾಜಕೀಯ ಏಳುಬೀಳುಗಳು, ಮಾಡಿದ ಸಾಧನೆ ಬಗ್ಗೆ ಕಿರುನೋಟ ಬೀರೋ ಪ್ರಯತ್ನ ಇಲ್ಲಿದೆ.
ಬಿಜೆಪಿ, ಸಂಘಪರಿವಾರದ ಕಟ್ಟಾಳು..! ದಿಲ್ಲಿಯ ವೆರಿ ಪವರ್ಫುಲ್ ಲೀಡರ್ ..!
ನೋಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಿನಿಸ್ಟರ್, ಸಂಸತ್ತಿನಲ್ಲಿ ಅಗ್ರ ನಾಯಕರ ಸಾಲಿನಲ್ಲಿ ಕೂರುತ್ತಿದ್ದ ಕರ್ನಾಟಕದ, ಅನಂತಕುಮಾರ್ ಜೊತೆ ವಿಧಿಯಾಟ ಹೇಗೆ ಆಟವಾಡ್ತು ಅಂತ..! ವೆರಿ ಪವರ್ ಫುಲ್ ಲೀಡರ್ ಅನಂತಕುಮಾರ್ .. ಅದೂ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದ ಪ್ರಭಾವಿ ನಾಯಕ. ಯಶಸ್ವಿ ರಾಜಕಾರಣಿ… ಭಾರತೀಯ ಜನತಾ ಪಕ್ಷದ ಪ್ರಭಾವಿ ಮುಖಂಡ. ಸದ್ಯ ಕೇಂದ್ರದ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಮೋದಿ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದವರು.
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಪ್ರಭಾವಿ ಸಚಿವರು. ಮೋದಿಯವರಿಗೆ ಪರಮಾಪ್ತರಲ್ಲೊಬ್ಬರು. ಮೋದಿ ಅಷ್ಟೇ ಅಲ್ಲ, ಅಟಲ್ ಬಿಹಾರಿ ವಾಜಿಪೇಯಿ, ಎಲ್ .ಕೆ. ಅಡ್ವಾಣಿಯವರಿಗೆ ಅತ್ಯಂತ ನಿಕಟವರ್ತಿ. ಅನಂತ ಕುಮಾರ್ ಅವರಿಗೆ ಎಲ್.ಕೆ. ಅಡ್ವಾಣಿಯವರು ರಾಜಕೀಯ ಗುರು. ವಾಜಪೇಯಿ ಅವರ ನೀಲಿಗಣ್ಣಿನ ಹುಡುಗ ಅನ್ನೋದು ಈ ಅನಂತಕುಮಾರ್ ಅವರಿಗೆ ಇದ್ದ ವಿಶೇಷಣ.
ರಾಜಕೀಯ ಪ್ರೌಢಿಮೆ, ಭಾಷಣ ಕಲೆ ಅದ್ಭುತ..!!
ಅನಂತಕುಮಾರ್, ಒಳ್ಳೆಯ ಸಂಸದೀಯ ಪಟು, ವಿಚಾರಶೀಲ ರಾಜಕಾರಣಿ. ಸದಾ ನಗುವ ಮೊಗ. ಬರೀ ಸ್ಮೈಲ್ ನಲ್ಲೇ ಆಕರ್ಷಿಸೋ ವ್ಯಕ್ತಿತ್ವ.. ಅವರಿಗೆ ಒಮ್ಮೆ ಪರಿಚಯವಾದ್ರೆ ಮುಗಿಯಿತು. ಎಷ್ಟೇ ವರ್ಷಗಳಾದರೂ ಅವರ ಹೆಸರಿಡಿದು ಮಾತನಾಡಿಸೋ ಗುಣ ಅವರಲ್ಲಿತ್ತು. ರಾಜ್ಯದಲ್ಲಿರುವ ಎಲ್ಲಾ ಬಿಜೆಪಿ ಕಾಯಕರ್ತರು ಸಹ ಅವರಿಗೆ ಗೊತ್ತಿತ್ತು.
ಅನಂತಕುಮಾರ್ ..ದಿಢೀರನೆ ರಾಜಕೀಯದ ಉತ್ತಂಗಕ್ಕೆ ಏರಿದವರೇನಲ್ಲ. ಕೇಂದ್ರದಲ್ಲಿ ಸಚಿವ ಸ್ಥಾನ ಸುಮ್ಮನೇ ಬಂದಿಲ್ಲ. ಬರೋಬ್ಬರಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬಿಜೆಪಿ, ಸಂಘ ಪರಿವಾರಕ್ಕೆ ಮಣ್ಣು ಹೊತ್ತವರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ರಾಜ್ಯದಲ್ಲಿ ಇರಬಹುದು ಅಥವಾ ರಾಷ್ಟ್ರ ಮಟ್ಟದಲ್ಲೂ ಇರಬಹುದು ಬಿಜೆಪಿ ಇಷ್ಟೊಂದು ಪ್ರವರ್ಧಮಾನಕ್ಕೆ ಬರಲು ಅನಂತಕುಮಾರ್ ಕೊಡುಗೆ ಅನನ್ಯ.
ಕರ್ನಾಟಕ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರ, ಮಧ್ಯ ಪ್ರದೇಶ ಹೀಗೆ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಪಕ್ಷದ ಜವಾಬ್ದಾರಿಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿದವರು.ಗುಜರಾತ್, ರಾಜಸ್ಥಾನ್, ಉತ್ತರ ಪ್ರದೇಶ, ಮೇಘಾಲಯ ಹೀಗೆ ಅನೇಕ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೂ ತಂದಿದ್ದುಂಟು. ಆರ್. ಅಶೋಕ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ವಿ. ಸುನೀಲ್ ಕುಮಾರ್ ಸೇರಿದಂತೆ ಅನೇಕ ಮುಖಂಡರನ್ನು ರಾಜಕೀಯವಾಗಿ ತಂದರು.
ಹುಟ್ಟಿದ್ದು ಬೆಂಗಳೂರು, ಓದಿದ್ದು ಬೇರೆ ಬೇರೆ ಊರು..!!
ಅನಂತಕುಮಾರ್ ಅವರ ಬಾಲ್ಯ, ರಾಜಕೀಯ ಜೀವನದ ಬಗ್ಗೆ ಹೇಳಬೇಕೆಂದ್ರೆ, ನಿಮಗೂ ತಿಳಿದಿರುವಂತೆ ಅನಂತಕುಮಾರ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಅವರು ಬೆಳೆದಿದ್ದು ಮಾತ್ರ ಹುಬ್ಬಳ್ಳಿಯಲ್ಲಿ. ವ್ಯಾಸಂಗ ಮಾಡಿದ್ದೂ ಅಲ್ಲೇ. ಆದರೆ, ರಾಜಕೀಯವಾಗಿ ನೆಲೆ ಕಂಡು ಕೊಂಡಿದ್ದು ಮಾತ್ರ ಬೆಂಗಳೂರಿನಲ್ಲಿ. ಅವರ ಬಗೆಗೆ ಹಲವು ಕೌತುಕಗಳಿವೆ.
ಬಾಲ್ಯದಲ್ಲೇ ಆರ್. ಎಸ್. ಎಸ್. ನಿಂದ ಪ್ರಭಾವಿತ ..!!
ಅನಂತ ಕುಮಾರ್ ಅವರ ಹುಟ್ಟಿದ ದಿನಾಂಕ ದಾಖಲೆಗಳ ಪ್ರಕಾರ 1959ರ ಜುಲೈ 22. ಆದರೆ, ಅವರ ಕುಟುಂಬದ ಮಾಹಿತಿಯಂತೆ ಅವರು ಜನಿಸಿದ್ದು 1959ರ ಸೆಪ್ಪಂಬರ್ 22ರಂದು. ಅವರ ತಂದೆ ಎಚ್.ಎನ್. ನಾರಾಯಣಶಾಸ್ತ್ರಿ ತಾಯಿ ಗಿರಿಜಾ ಶಾಸ್ತ್ರಿ. ತಂದೆ ನಾರಾಯಣಶಾಸ್ತ್ರಿಯವರು ರೈಲ್ವೆ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಅವರಿಗೆ ರಾಷ್ಟ್ರೀಯ ಸ್ವಯಂಸೇವಾ ಸಂಘದೊಂದಿಗೆ ನಂಟಿತ್ತು. ಹಾಗಾಗಿ ಅನಂತಕುಮಾರ್ ಕೂಡ ಬಾಲ್ಯದಿಂದಲೂ ಆರ್ ಎಸ್ ಎಸ್ ನಿಂದ ಪ್ರೇರಿತರಾಗಿದ್ದರು.
1977ರಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ..ಜೆಪಿ ಚಳವಳಿಗೆ ಧುಮುಕಿದ ವಿದ್ಯಾರ್ಥಿ ನಾಯಕ ..!!
ಹುಬ್ಬಳ್ಳಿಯ ಕೆ.ಎಸ್. ಆರ್ಟ್ಸ್ ಕಾಲೇಜಿನ ಬಿಎ, ಮೈಸೂರಿನ ಜೆಎಸ್ಎಸ್ ಲಾ ಕಾಲೇಜಿನಲ್ಲಿ ಎಲ್ ಎಲ್ ಎಂ ಪದವಿ ಪಡೆದುಕೊಂಡರು. ವಿದ್ಯಾರ್ಥಿ ದಿಸೆಯಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ – ಎಬಿವಿಪಿ ಜತೆಗೆ ನಂಟು. ಎಬಿವಿಪಿಯಿಂದಲೇ ಸಾಮಾಜಿಕ ಜೀವನಕ್ಕೂ ಪಾದಾರ್ಪಣೆ ಮಾಡಿದ್ದು. ಅವರಿಗೆ ಹೋರಾಟ ಎನ್ನುವುದು ರಕ್ತಗತವಾಗಿತ್ತು. 1977ರ ತುರ್ತು ಪರಿಸ್ಥಿತಿ ವೇಳೆ, ಅವರು ಜೆಪಿ ಚಳುವಳಿಯಲ್ಲಿ ಭಾಗವಹಿಸಿ 40 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು.
1982ರಲ್ಲಿ ಕರ್ನಾಟಕ ಘಟಕದ ಎಬಿವಿಪಿ ಕಾರ್ಯದರ್ಶಿ..1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆದ ಅನಂತಕುಮಾರ್
ವಿದ್ಯಾರ್ಥಿ ಅನಂತಕುಮಾರ್ ಅವರ ಬುದ್ಧಿವಂತಿಕೆ, ಹೋರಾಟ ಕಂಡು ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಎಬಿವಿಪಿಯಲ್ಲಿ ದೊಡ್ಡ ದೊಡ್ಡ ಜವಾಬ್ದಾರಿಯನ್ನ ವಹಿಸುತ್ತಾ ಹೋದರು. ಅದಕ್ಕೆ ಎದೆಗುಂದದೆ ಅವರ ಆದೇಶಕ್ಕೆ ತಲೆಬಾಗಿದರು. 1982ರಲ್ಲಿ ಕರ್ನಾಟಕ ಘಟಕದ ಎಬಿವಿಪಿ ಕಾರ್ಯದರ್ಶಿ, 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಗಿ ಕೆಲಸ ಮಾಡಿ, ಎಲ್ಲರಿಂದಲೂ ಸೈ ಎನಿಸಿಕೊಂಡರು.
ಎಪಿವಿಪಿಯಿಂದ ಬಿಜೆಪಿಯತ್ತ ಮುಖ ಮಾಡಿದ ಯುವ ನಾಯಕ
ಅನಂತಕುಮಾರ್ ಅವರು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಆದ ಮೇಲೆ ರಾಷ್ಟ್ರೀಯ ಮುಖಂಡರೊಂದಿಗೆ ನಂಟು ಬೆಳೆಯುತ್ತದೆ. ಎಲ್.ಕೆ. ಅಡ್ವಾಣಿ, ವಾಜಪೇಯಿಯವರ ಅಣತಿಯಂತೆ ವರ್ಷದಿಂದ ವರ್ಷಕ್ಕೆ ಅನಂತಕುಮಾರ್ ಅವರು, ಸಂಘಟನಾ ಚಾತುರ್ಯದಿಂದ ಬಿಜೆಪಿಯಲ್ಲಿ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಿದರು.1987ರಿಂದ 88ರವರೆಗೆ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ರು.
ರಾಜ್ಯ ಬಿಜೆಪಿಗೆ ಅನಂತ್ -ಯಡಿಯೂರಪ್ಪ ಜೋಡೆತ್ತು..!!
ಬಿಸಿರಕ್ತದ ಯುವಕ, ಅನಂತಕುಮಾರ್ 1988-95ರವರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಆಗಿ ಕೆಲಸ ಮಾಡಿದರು. ಅದರಲ್ಲೂ ಸದಾ ಸಿಡುಕಿನ ಮನುಷ್ಯ, ಮುಂಗೋಪಿ, ಬಿ.ಎಸ್. ಯಡಿಯೂರಪ್ಪನವರು ಪಕ್ಷದ ಅಧ್ಯಕ್ಷರಾಗಿದ್ದಾಗ, ಅನಂತಕುಮಾರ್ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ಯಡಿಯೂರಪ್ಪ ಅವರ ಕೈ ಒಂದಾದರೆ, ಮತ್ತೊಂದು ಕೈ ಅದು ಅನಂತಕುಮಾರ ಅವರದು. ಇಂದಿಗೂ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರನ್ನು ಜೋಡೆತ್ತೆಂದು ಕರೆಯುವುದು ಸಾಮಾನ್ಯ.
ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿಯವರ ನಂಬಿಕಸ್ಥ, ಬಲಗೈ ‘ಬಂಟ’..!
ಅನಂತಕುಮಾರ್ ಎಂದರೆ ರಾಷ್ಟ್ರ ರಾಜಕಾರಣವಷ್ಟೇ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಆದರೆ, 2003ರಲ್ಲಿ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ನೇಮಕವಾಗಿದ್ದರು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸಂಘಟಿಸುವತ್ತ ಹೆಚ್ಚಿನ ಗಮನ ಹರಿಸಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿಯೂ ಹೊರಹೊಮ್ಮಿತ್ತು.. ಅಷ್ಟೇ ಅಲ್ಲ, ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿಯವರ ಆಯೋಧ್ಯೆ ರಾಮಮಂದಿರ ನಿರ್ಮಾಣ ರಥಯಾತ್ರೆಯನ್ನು ಕರ್ನಾಟಕದಲ್ಲಿ ಮುನ್ನಡೆಸಿದ್ದ ಅನಂತಕುಮಾರ್, ಅಯೋಧ್ಯೆ ರಾಮ ಮಂದಿರ ಹೋರಾಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳಲ್ಲಿ ಅಗ್ರಗಣ್ಯರು.
ರಾಜ್ಯದಲ್ಲಿ ಅನಂತಕುಮಾರ್ ಅವರ ಸಂಘಟನಾ ಶಕ್ತಿ, ಪಕ್ಷ ಕಟ್ಟುವ ರೀತಿ ರಿವಾಜು, ಮತ್ತೆ ತೆಗೆದುಕೊಳ್ಳುವ ತೀರ್ಮಾನ, ಹೋರಾಟ ಇವೆಲ್ಲವನ್ನು ನೋಡಿದ ಬಿಜೆಪಿಯ ದಿಲ್ಲಿ ನಾಯಕರು, ಅನಂತಕುಮಾರ್ ಅವರನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಕರೆಸಿಕೊಂಡರು.1995ರಿಂದ 98ವರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಎಲ್.ಕೆ. ಅಡ್ವಾಣಿ, ಅಟಲ್ ಬಿಹಾರಿ ವಾಜಿಪೇಯಿ, ಡಾ. ಮುರಳಿ ಮನೋಹರ್ ಜೋಷಿ, ಮದನ್ ಲಾಲ್ ಖುರಾನ, ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್, ಅರುಣ ಜೇಟ್ಲಿ ಹೀಗೆ ಅನೇಕ ರಾಷ್ಟ್ರಮಟ್ಟದ ನಾಯಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ರು.
ಕಾಂಗ್ರೆಸ್ಸಿನ ಮಾಜಿ ಸಿಎಂ, ದಿವಂಗತ ಆರ್. ಗುಂಡೂರಾವ್ ಪರಾಭವ. ಬಿಜೆಪಿಯಿಂದ ಪ್ರೊ. ವೆಂಕಟಗಿರಿಗೌಡ ಗೆಲ್ಲಿಸಿದ ಅನಂತಕುಮಾರ್
ಈ ಬೆಳವಣೆಗೆಗಳ ನಡುವೆಯೇ, ಬೆಂಗಳೂರಿನ ನಂಟಿನ ಬಗ್ಗೆ ಹೇಳಬೇಕೆಂದರೆ, ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ, ಬಸವನಗುಡಿಯಲ್ಲಿ ಮನೆ ಇತ್ತು. ಈ ಭಾಗದಿಂದಲೇ ಚುನಾವಣೆ ಎದುರಿಸಬೇಕೆನ್ನುವುದು ಮೊದಲಿನಿಂದಲೂ ಅನಂತಕುಮಾರ ಅವರಿಗೆ ಆಸೆಯಿತ್ತು. ಆದರೂ, 1991ರಲ್ಲಿ ನಡೆದ 10ನೇ ಲೋಕಸಭಾ ಚುನಾವಣೆಗೆ ಪಕ್ಷ ಟಿಕೆಟ್ ನೀಡುವುದಾಗಿ ಹೇಳಿದ್ದು, ಅದನ್ನು ಅಷ್ಟೇ ನಯವಾಗಿ ನಿರಾಕರಿಸಿ, ಬಿಜೆಪಿಯಿಂದ ಆರ್ಥಿಕ ತಜ್ಞ ಪ್ರೊ. ಕೆ. ವೆಂಕಟಗಿರಿಗೌಡ್ರು ಸ್ಪರ್ಧಿಸಿ ಸಂಸತ್ ಪ್ರವೇಶ ಮಾಡುವಂತೆ ಮಾಡಿದ್ರು.
ಮೊದಲ ಬಾರಿಗೆ 1996ರ 10ನೇ ಲೋಕಸಭೆಗೆ ಯುವ ನಾಯಕ..! ದೇವೇಗೌಡರು ಪ್ರಧಾನಿಯಾದ ಹೊತ್ತಿನಲ್ಲಿ ಸಂಸತ್ ಪ್ರವೇಶ
ಮಾಜಿ ಸಿಎಂ, ದಿವಂಗತ ಆರ್. ಗುಂಡೂರಾವ್ ಅವರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಪ್ರೊ. ಕೆ. ವೆಂಕಟಗಿರಿಗೌಡ್ರರನ್ನು ನಿಲ್ಲಿಸಿ ಗೆಲ್ಲಿಸಿದ್ದು ಸಾಮಾನ್ಯ ವಿಷಯವೇನಲ್ಲ. ಮುಖ್ಯವಾಗಿ ಹೇಳಬೇಕೆಂದರೆ. ಇದು ವೆಂಕಟಗಿರಿಗೌಡರ ಗೆಲುವಾಗಿರಲಿಲ್ಲ. ಅನಂತಕುಮಾರ್ ಅವರದ್ದಾಗಿತ್ತು. ಅನಂತರದಲ್ಲಿ ನಡೆಯುವ ಚುನಾವಣೆಯಲ್ಲಿ ತಾವು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಮತ್ತೆ ಕಮಲವನ್ನು ಅರಳಿಸಬೇಕೆನ್ನುವ ಆಸೆ ಅನಂತಕುಮಾರ್ ಅವರಲ್ಲಿ ಮೊಳಕೆಯೊಡಿಯಿತು. ಅದರಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು, 1996ರ 11ನೇ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರು.
ಅದರಂತೆ, ಅನಂತಕುಮಾರ್ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಲು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದರು. ತಮ್ಮ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ, ಮಾಜಿ ಸಿಎಂ ಆರ್. ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡೂರಾವ್ ಅವರ ವಿರುದ್ಧ ಗೆದ್ದರು. ಮೊದಲ ಚುನಾವಣೆಯಲ್ಲೇ ಅನಂತಕುಮಾರ್ ಲೋಕಸಭೆ ಪ್ರವೇಶ ಮಾಡಿದರು. ನೋಡಿ, ಕರ್ನಾಟಕದಿಂದ ಅವರೊಬ್ಬರೇ ಸಂಸತ್ ಗೆ ಹೋಗಲಿಲ್ಲ; ತುಮಕೂರಿನಿಂದ ಎಸ್. ಮಲ್ಲಿಕಾರ್ಜುನಯ್ಯ, ಬೀದರ್ ನಿಂದ ರಾಮಚಂದ್ರಪ್ಪ ವೀರಪ್ಪ, ಮಂಗಳೂರಿನಿಂದ ಧನಂಜಯಕುಮಾರ್, ಕಾರವಾರದಿಂದ ಅನಂತಕುಮಾರ್ ಹೆಗ್ಗಡೆ, ಹುಬ್ಬಳ್ಳಿ-ಧಾರವಾಡದಿಂದ ವಿಜಯಸಂಕೇಶ್ವರ್ ಅವರನ್ನು ಸಹ ಪಾರ್ಲಿಮೆಂಟಿಗೆ ಕರೆದೊಯ್ದರು.
ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ ಅನಂತಕುಮಾರ್ ಅವರನ್ನು ಸಂಸತ್ತಿನಲ್ಲೂ ಅನೇಕ ಗುರುತರ ಜವಾಬ್ದಾರಿಗಳು ಹುಡುಕಿಕೊಂಡು ಬಂದವು. 1996-97ವರೆಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟ್ಟಿಟ್ಯೂಟ್ ಆಫ್ ಸೈನ್ಸ್ ನ ಸದಸ್ಯರಾಗಿ, ಕೇಂದ್ರ ಕೈಗಾರಿಕಾ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸದಸ್ಯರಾಗಿ, ಕೇಂದ್ರ ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿದರು. 1996ರಿಂದ ಈವರೆಗೂ ನಡೆದಂತಹ ಎಲ್ಲ ಚುನಾವಣೆಗಳಲ್ಲೂ ಅನಂತಕುಮಾರ್ ಗೆದ್ದಿದ್ದು, ಅದೂ ಗೆದ್ದಿರುವುದು ಘಟನಾನುಘಟಿ ನಾಯಕರ ವಿರುದ್ಧವೇ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಎಂ. ಕೃಷ್ಣಪ್ಪ, ಕೃಷ್ಣಬೈರೇಗೌಡ, ನಂದನ್ ನೀಲೇಕಣಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು.
ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಖಾಯಂ..!
ಇನ್ನು ಅನಂತಕುಮಾರ್ , ಎರಡು ಬಾರಿ ಅಂದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲೆಲ್ಲ ಅನಂತಕುಮಾರ್ ಗೆ ಸಚಿವ ಸ್ಥಾನ ಖಾಯಂ ಎಂದೇ ಹೇಳಬಹುದು. ಮುಖ್ಯವಾಗಿ 1998ರಲ್ಲಿ ಅಟಲ್ ಬಿಹಾರಿ ವಾಜಿಪೇಯಿ ನೇತೃತ್ವದ ಎನ್ ಡಿಎ ಸರ್ಕಾರದ ಸಚಿವರನ್ನಾಗಿ ಮಾಡಿತು. ಅದು ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೇಂದ್ರ ಸಚಿವ ಸ್ಥಾನ ಪಡೆದರು. ಮೊದಲಿಗೆ ವಿಮಾನ ಖಾತೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ತದನಂತರದಲ್ಲಿ ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ವ್ಯವಹಾರ, ಸಂಸ್ಕೃತಿ ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡಿದರು.
ಈ ನಡುವೆಯೇ ರಾಷ್ಟೀಯ ಬಿಜೆಪಿ ನಾಯಕರಿಗೆ ಆಘಾತ ಎದುರಾಗುತ್ತದೆ. ಪಕ್ಷದ ಪ್ರಮುಖ ನಾಯಕರೆನಿಸಿದ್ದ ಪ್ರಮೋದ್ ಮಹಾಜನ್, ಸಹೋದರನಿಂದಲೇ ಹತ್ಯೆಯಾದರು. ಅನಂತರದಲ್ಲಿ ಪ್ರಮೋದ್ ಮಹಾಜನ್ ನಿರ್ವಹಿಸುತ್ತಿದ್ದ ಎಲ್ಲಾ ಜವಾಬ್ದಾರಿಗಳು ಅನಂತಕುಮಾರ್ ಹೆಗಲೇರಿದವು. ಆಗ ಅನಂತಕುಮಾರ್, ವಾಜಪೇಯಿ, ಅಡ್ವಾಣಿ ಸಾಲಿನಲ್ಲಿ ಕುಳಿತು ನಿರ್ಧಾರ ಕೈಗೊಳ್ಳುವ ಮಟ್ಟಿಗೆ ಬೆಳೆದರು.
ಇನ್ನು ಸದ್ಯದ ವಿಚಾರ ನಿಮಗೂ, ತಿಳಿದಿರುವಂತೆ ಅನಂತಕುಮಾರ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವರು. ನೋಡಿ, ಮೋದಿ, ಅಮಿತ್ ಷಾ ನಂತರದಲ್ಲಿ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತಕುಮಾರ್ ಈ ಹೆಸರುಗಳು ಹೆಚ್ಚು ಚಾಲ್ತಿ. ಈ ಮುಖಂಡರೇ ಪಕ್ಷದ ಆಗುಹೋಗುಗಳ ನಿರ್ಣಾಯಕರು. ಈ ಪೈಕಿ, ಅದರಲ್ಲೂ ಅನಂತಕುಮಾರ್ ಡಿಸಿಷನ್ ಎಂದರೆ ಸ್ವತಃ ಮೋದಿ, ಅಮಿತ್ ಷಾ ಕೂಡ ತೆಗೆದುಹಾಕುವುದಿಲ್ಲ. ಅಷ್ಟೊಂದು ಹಿಡಿತ, ಅನಂತಕುಮಾರ್ ಅವರಿಗಿತ್ತು.
ನಿಷ್ಠುರ ಮಾಡಿಕೊಳ್ಳದ ಆದರ್ಶ ರಾಜಕಾರಣಿ..!
ಅನಂತಕುಮಾರ್, ಪ್ರತಿಷ್ಠಿತ ಬೆಂಗಳೂರು ಲೋಕಸಭಾ ಕ್ಷೇತ್ರದ ಮಟ್ಟಿಗೆ ಈಗಲೂ ಮೊದಲ ಸ್ಥಾನ ಕಾಯ್ದುಕೊಂಡಿರುವವರು. ರಾಜಕೀಯವಾಗಿ ಯಾರನ್ನೂ ನಿಷ್ಠುರ ಮಾಡಿಕೊಂಡಿಲ್ಲ. ಸಾಮಾನ್ಯ ಕಾರ್ಯಕರ್ತರ ಕರೆದರೂ ಬರುವುದಿಲ್ಲ ಇಲ್ಲ ಅಂತಿರ್ಲಿಲ್ಲ. ಹೆಗಲ ಮೇಲೆ ಸರ್ಕಾರ ಮತ್ತು ಪಕ್ಷದ ಹಲವಾರು ಜವಾಬ್ದಾರಿಗಳಿದ್ದರೂ ಈ ಮಧ್ಯೆಯೂ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿಶೇಷವಾಗಿತ್ತು. ಕ್ಷೇತ್ರದಲ್ಲಿ ಕೆಲಸ ಮಾಡಲು ತಮ್ಮದೇ ಕಾರ್ಯಕರ್ತರ ಪಡೆ ಕಟ್ಟಿಕೊಂಡಿದ್ದರು, ಅವರು ಇರಲಿ, ಇಲ್ಲದಿರಲಿ, ಜನರ ಕೆಲಸ ಸದ್ದಿಲ್ಲದೆ ಆಗುತ್ತಿತ್ತು.
ರಾಜಕೀಯದ ಯಶಸ್ವಿ ನಾಯಕ ಅನಂತಕುಮಾರ್ ಅವರಿಗೆ ಬೆಂಗಳೂರಿನಲ್ಲಿ ತನ್ನದೆ ಆದ ಕಾರ್ಯಕರ್ತರ ಕಾರ್ಯಪಡೆ ಇತ್ತು ಅನ್ನುವುದರ ಜೊತೆಗೆ ನಿಮಗೂ ತಿಳಿದಿರುವಂತೆ ಸಂಘಪರಿವಾರದಿಂದ ಬಂದ ಅನೇಕ ಮುಖಂಡರನ್ನು ಇವರು ಬೆಳೆಸಿದ್ದಾರೆ. ಅವರಲ್ಲಿ ಆರ್. ಅಶೋಕ್ ಸಿ.ಟಿ.ರವಿ, ಅರವಿಂದ ಲಿಂಗಾವಳಿ, ವಿ. ಸುನೀಲ್ ಕುಮಾರ್, ರವಿಸುಬ್ರಮಣ್ಯ, ರಘು ಹೀಗೆ ಹಲವಾರು ಮುಖಂಡರನ್ನು ವಿಧಾನಸೌಧ ಮತ್ತು ಸಂಸತ್ತಿಗೂ ಕರೆತಂದಿರುವ ಹೆಗ್ಗಳಿಕೆ ಇದೆ.
ಮುಖ್ಯಮಂತ್ರಿಗಾದಿಗೆ ಆಸೆಪಟ್ಟಿದ್ದು ಸತ್ಯವೋ.. ಮಿಥ್ಯವೋ …!!
ಇನ್ನು ಅನಂತಕುಮಾರ್ ಬಗ್ಗೆ ಮತ್ತೊಂದು ಗಂಭೀರವಾದ ವಿಚಾರ ಹೇಳಬೇಕಿದೆ. ಅದು, ರಾಜ್ಯದಲ್ಲಿ ಅಂದರೆ, 2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ , ಅದರಲ್ಲೂ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿದಾಗ ಆ ಸ್ಥಾನಕ್ಕೆ ಅನಂತಕುಮಾರ್ ಬರುತ್ತಾರೆ, ಸಿಎಂ ಆಕ್ತಾರೆ..!! ಎಂಬೆಲ್ಲಾ ಮಾತುಗಳು ಕೇಳಿಬಂದಿದ್ವು. ಆದರೆ, ಅನಂತಕುಮಾರ್ ಅವರು ತಾವು ರಾಷ್ಟ್ರ ರಾಜಕಾರಣ ಬಿಟ್ಟು, ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿದ್ದರಂತೆ; ಅಂದೆಷ್ಟು ಸತ್ಯವೋ.. ಮಿಥ್ಯವೋ ಗೊತ್ತಿಲ್ಲ..!!
ಆದ್ರೂ, ನೋಡ್ರಿ,, ದಿಲ್ಲಿಯ ಈ ಪವರ್ ಫುಲ್ ಲೀಡರ್ ಅನಂತಕುಮಾರ್ರಿಗೆ ಒಮ್ಮೆಯಾದರೂ ತಾವು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇತ್ತೋ ಅಥವಾ ಇಲ್ಲವೋ ಗೊತ್ತಿಲ್ಲ…ಆದರೆ, ಅನಂತಕುಮಾರ್ ಎಲ್ಲೂ ಅದನ್ನು ಬಹಿರಂಗಪಡಿಸುತ್ತಿರಲಿಲ್ಲ. ಸೂಕ್ತ ಕಾಲದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತದೆ; ಅದಕ್ಕಾಗಿ ಕಾಯೋಣ ಎಂದೆಲ್ಲ ಮಾಧ್ಯಮಗಳಿಗೆ ಹೇಳುತ್ತಿದ್ದದ್ದು ಬಿಟ್ಟರೆ, ಬಹಿರಂಗವಾಗಿ ಸಿಎಂ ಗಾದಿಗೆ ಆಸೆಪಟ್ಟಿದ್ದಿಲ್ಲ..!!
ಸಂಸತ್ತಿನಲ್ಲಿ ರಾಜ್ಯದ ಪರ ‘ಅನಂತ’ ಧ್ವನಿ…!!
ಏನೇ ಹೇಳಿ, ಈ ನಡುವೆಯೂ ಅನಂತಕುಮಾರ್ ರಾಜಕೀಯವಾಗಿ ಹೇಳೋದಂದು ಮಾಡೋದೊಂದು ವ್ಯಕ್ತಿತ್ವದವರಲ್ಲ. ಸಂಸತ್ತಿನಲ್ಲಿ ರಾಜ್ಯದ ಪರ ಗಟ್ಟಿದನಿಯಲ್ಲಿ ಮಾತನಾಡಿದವರಲ್ಲಿ ಅನಂತಕುಮಾರ್ ಮೊದಲಿಗರು. ನೆಲಜಲ, ಗಡಿವಿವಾದ, ಮೊದಲಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ, ಮಹಾಜನ ವರದಿ ಜಾರಿಗೆ ಆಗ್ರಹ, ಕೃಷ್ಣ ಕಾವೇರಿ ಸಮಸ್ಯೆಗಳು, ಮಹದಾಯಿ, ಕಳಸಾ ಬಂಡೂರಿ, ಹೊಗೇನಕಲ್ ವಿವಾದ ಸಹಿತ ರಾಜ್ಯದ ಪರ ಹೋರಾಟ ನಡೆಸಿದವರಲ್ಲಿ ಮೊದಲಿಗರು.
ನಾಡಿಗೆ ಅನ್ಯಾಯವಾಗಲು ಬಿಡದ ನಾಯಕ
ಇನ್ನು ರಾಜ್ಯದ ಸಮಸ್ಯೆಗಳಿಗೆ ಅನಂತಕುಮಾರ್ ಧ್ವನಿಯಾಗಿದ್ದರು. ವಿಶೇಷವಾಗಿ ಬಿಜೆಪಿ, ಕಾಂಗ್ರೆಸ್, ಅಥವಾ ಜೆಡಿಎಸ್ ಯಾವುದೇ ಪಕ್ಷವಿರಲಿ, ಅಥವಾ ಸರ್ಕಾರವಿರಲಿ, ಯಾವುದೇ ವಿಷಯಗಳನ್ನು ಹೊತ್ತೊಯ್ದು ದಿಲ್ಲಿಗೆ ನಿಯೋಗ ಬಂದರೆ ಅಲ್ಲಿಗೆ ಅನಂತಕುಮಾರ್ ಹಾಜರ್. ಅಷ್ಟೊಂದು ರಾಜ್ಯದ ಬಗ್ಗೆ ಅವರಿಗೆ ಕಾಳಜಿ. ರೈಲ್ವೆ ಯೋಜನೆ ಹಾಗೂ ನೇಮಕದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ, ಮಹಾಜನ್ ವರದಿ ಅನುಷ್ಠಾನ, ಕಳಸಾ ಬಂಡೂರಿ, ಮತ್ತೆ ನೆರೆ-ಬರ ಹೀಗೆ ಎಲ್ಲಾ ವಿಚಾರದಲ್ಲೂ ಹೋರಾಟ ನಡೆಸಿದ್ದರು. ಕೇಂದ್ರ ಸರ್ಕಾರಗಳಿಂದ ರಾಜ್ಯಕ್ಕೆ ಸಾಕಷ್ಟು ಅನುದಾನ ದೊರಕಿಸಿದ್ದರು.
ಮತ್ತೆ ಅನಂತಕುಮಾರ್ ಸ್ವಕ್ಷೇತ್ರ ಬೆಂಗಳೂರು ದಕ್ಷಿಣ ಹೊರತುಪಡಿಸಿ, ರಾಜಧಾನಿ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದರು. ಬೆಂಗಳೂರಿನ ಮೆಟ್ರೋ ರೈಲು, ಕಾವೇರಿ ಕುಡಿಯುವ ನೀರು ಯೋಜನೆಗೆ ಕೇಂದ್ರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ದೊರಕಿಸಿದ್ದಾರೆ. ಬೆಂಗಳೂರು-ಸಿಲಿಕಾನ್ ಸಿಟಿಯೀಗ ಜಾಗತಿಕ ನಕಾಶೆಯಲ್ಲಿ ದೊಡ್ಡ ಹೆಸರು ಮೂಡಲು ಅನಂತಕುಮಾರ್ ಕೊಡುಗೆ ಅನನ್ಯ.
ಮುಖ್ಯವಾಗಿ ಬೆಂಗಳೂರಿನ ಜನ ಅನಂತಕುಮಾರ ಅವರನ್ನು ಮರೆಯಬಾರದು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ರೂವಾರಿ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ನಿರ್ಮಾಣವಾಗುವುದರಲ್ಲಿ ಅನಂತಕುಮಾರ್ ಅವರ ಶ್ರಮ ಹೆಚ್ಚಿದೆ. ವಾಜಪೇಯಿ ಸರ್ಕಾರದಲ್ಲಿ ವಿಮಾನ ಖಾತೆ ಸಚಿವರಾಗಿದ್ದಾಗ ಅವರೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆಗೆ ಸಹಿ ಮಾಡಿದ್ದು.
ದೇಶ, ಭಾಷೆಯಲ್ಲಿ ಅಪಾರ ಪ್ರೀತಿ…!! ವಿಶ್ವಸಂಸ್ಥೆಯಲ್ಲಿ ಕನ್ನಡ ಮೊಳಗಿಸಿದ ಕೀರ್ತಿ..!!
ದೇಶ , ಭಾಷೆ ವಿಚಾರದಲ್ಲಿ ಅನಂತಕುಮಾರ್ ಅವರಿಗೆ ಅಪಾರವಾದ ಪ್ರೀತಿ. ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಅನಂತಕುಮಾರ್.. 2015ರ ಅಕ್ಟೋಬರ್ 15ರಂದು ವಿಶ್ವಸಂಸ್ಥೆಯ 67ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಅನಂತಕುಮಾರ್ ಕನ್ನಡದಲ್ಲಿ ಭಾಷಣ ಆರಂಭಿಸಿದ್ದರು. ಸನ್ಮಾನ್ಯ ಅಧ್ಯಕ್ಷರೇ ಮತ್ತು ವಿಶ್ವದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ ನಿಮ್ಮೆಲ್ಲರಿಗೂ ನನ್ನ ಮುಂಜಾನೆಯ ಶುಭಾಶಯಗಳು ಅಂತ ಅನಂತಕುಮಾರ್ ಮಾಡಿದ ಬಾಷಣ ಕನ್ನಡಿಗರು ಎಂದೂ ಮರೆಯಲಾರರು.
ಹೃದ್ರೋಗಿಗಳಿಗೆ ವರದಾನ ಮಾಡಿದ ಜನಾನುರಾಗಿ…ದೇಶದೆಲ್ಲೆಡೆ 3,600ಕ್ಕೂ ಹೆಚ್ಚು ಜನೌಷಧಿ ಮಳಿಗೆ ಸ್ಥಾಪನೆ
ಅನಂತಕುಮಾರ್ ಮಾಡಿದ ಮತ್ತೊಂದು ಮಹಾನ್ ಕಾರ್ಯ ಅಂದ್ರೆ, ಅದು ಹೃದಯ ಸ್ಟೆಂಟ್ ಬೆಲೆ ಇಳಿಕೆ ಮಾಡಿಸಿದ್ದು. ಹೃದ್ರೋಗಿಗಳಿಗೆ ವರದಾನವಾಗುವಂತೆ ಹೃದಯ ಸ್ಟೆಂಟ್ ಗಳ ಬೆಲೆಯನ್ನು ಶೇಕಡ 85ಕ್ಕೆ ಇಳಿಸಿದ್ದರು. ಇದರಿಂದ ಬಡವರ್ಗಕ್ಕೆ ಅನುಕೂಲವಾಗಿದೆ. ಮಂಡಿಚಿಪ್ಪು, ಕಸಿಯಲ್ಲೂ ಶೇಕಡ 69ರಷ್ಟು ಇಳಿಸಿದ್ದರು. ಆಗ್ಗದ ವೈದ್ಯಕೀಯ ಚಿಕಿತ್ಸೆಗೆ ಆದ್ಯತೆ ನೀಡಿದ್ದ ಅವರು 3600ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭ ಮಾಡೋ ಮೂಲಕ ಕಡಿಮೆ ಬೆಲೆಗೆ ಎಲ್ಲ ವರ್ಗದವರಿಗೂ ಔಷಧಿ ಸಿಗುವಂತೆ ಮಾಡಿದ್ದರು. ಬೆಂಗಳೂರು ಬಳಿಯ ರಾಗಿಹಳ್ಳಿ ಗ್ರಾಮವನ್ನು ಸಂಸದರ ಆದರ್ಶ ಗ್ರಾಮದಡಿ ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸಿದ್ದರು.ಸಮಾಜಸೇವೆಗಾಗಿ ಅದಮ್ಯ ಚೇತನ ಸ್ಥಾಪಿಸಿ ಈಗ ಅನಂತದತ್ತ ಹೊರಟುಹೋಗಿದ್ದಾರೆ.
-ಎನ್.ಜಿ ರಮೇಶ್, ಸ್ಪೆಷಲ್ ಡೆಸ್ಕ್, ಪವರ್ ಟಿವಿ