21 ಕೋಟಿ ರೂ ಡೀಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆ್ಯಂಬಿಡೆಂಟ್ ಡೀಲಿಂಗ್ ಕೇಸ್ ನಲ್ಲಿ ಸಿಸಿಬಿ ಅಧಿಕಾರಿಗಳು ಜನಾರ್ದನ ರೆಡ್ಡಿ ವಿಚಾರಣೆ ನಡೆಸಿ, 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ನ್ಯಾಯಧೀಶ ಜಗದೀಶ್ ರೆಡ್ಡಿಗೆ ನವೆಂಬರ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಆರೋಪಿ ರೆಡ್ಡಿಯನ್ನು ಪರಪ್ಪನ ಅಗ್ರಹರಾ ಜೈಲಿನತ್ತ ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಫರೀದ್ ನನ್ನು ವಿಚಾರಣೆಗೆ ಒಳಪಡಿಸಿದಾಗ ರೆಡ್ಡಿಯ 21 ಕೋಟಿ ಡೀಲಿಂಗ್, ಚಿನ್ನದ ಗಟ್ಟಿ ಕೇಸ್ ಬೆಳಕಿಗೆ ಬಂದಿತ್ತು. ಬಂಧನದ ಭೀತಿಯಲ್ಲಿ ರೆಡ್ಡಿ ಅಜ್ಞಾತ ಸ್ಥಳದಲ್ಲಿದ್ದರು. ಇವರ ಹುಡಕಾಟ ಆರಂಭಿಸಿದ್ದ ಸಿಸಿಬಿ ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ರೆಡ್ಡಿಗೆ ಸೂಚಿಸಿದ್ದರು.
ಶನಿವಾರ (ನಿನ್ನೆ) ರೆಡ್ಡಿ ಸಿಸಿಬಿ ಮುಂದೆ ಹಾಜರಾಗಿದ್ದರು. ನಿನ್ನೆ ಸಂಜೆ 4 ಗಂಟೆಯಿಂದ ಮಧ್ಯರಾತ್ರಿ 4 ಗಂಟೆವರೆಗೆ ರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದು ಬೆಳಗ್ಗೆ ಕೂಡ ವಿಚಾರಣೆ ನಡೆದಿತ್ತು.