Wednesday, October 4, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜ್ಯರೆಡ್ಡಿ ಡೀಲಿಂಗ್ ಪ್ರಕರಣದ ಇಂದಿನ ಪಿನ್ ಟು ಪಿನ್ ಮಾಹಿತಿ

ರೆಡ್ಡಿ ಡೀಲಿಂಗ್ ಪ್ರಕರಣದ ಇಂದಿನ ಪಿನ್ ಟು ಪಿನ್ ಮಾಹಿತಿ

ಡೀಲಿಂಗ್ ಪ್ರಕರಣದಲ್ಲಿ ಮತ್ತೊಮ್ಮೆ ಜನಾರ್ದನ ರೆಡ್ಡಿ ಜೈಲು ಪಾಲಾಗಿದ್ದಾರೆ. ಮೂರನೇ ಬಾರಿಗೆ ಜೈಲು ಸೇರಿದ ಪಾರಿಜಾತದ ಹಕ್ಕಿಯನ್ನ ಸಿಸಿಬಿ ಪೊಲೀಸ್ರು 24 ಗಂಟೆಗಳ ಕಾಲ ವಿಚಾರಣೆ ಮಾಡಿದ್ರು. ರೆಡ್ಡಿ ಡೀಲಿಂಗ್ ಪ್ರಕರಣದ ಇಂದಿನ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.
ಮೂರನೇ ಬಾರಿಗೆ ಜೈಲುಪಾಲಾದ ಜನಾರ್ದನ ರೆಡ್ಡಿ!
ನಿನ್ನೆ ಸಿಸಿಬಿ ಆಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಗಾಲಿ ಜನಾರ್ದನ ರೆಡ್ಡಿಯನ್ನ ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ರು. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಿಸಿಬಿ ಎಸಿಪಿಗಳಾದ ಸುಬ್ರಮಣ್ಯ, ವೆಂಕಟೇಶ್ ಪ್ರಸನ್ನ ರಾತ್ರಿ ಎರಡು ಗಂಟೆಯವರೆಗೆ ವಿಚಾರಣೆ ಮಾಡಿ, ಕೆಲ ಪ್ರಮುಖ ವಿಚಾರಗಳನ್ನ ರೆಡ್ಡಿಯಿಂದ ಬಾಯಿ ಬಿಡಿಸಿದ್ರು .ರಾತ್ರಿ ಎರಡು ಗಂಟೆ ಮೇಲೆ ಮಲಗಿದ ರೆಡ್ಡಿ 8 ಗಂಟೆಗೆ ಎದ್ದು ತಿಂಡಿ ತಿಂದ್ರು. ಎಂದಿನಂತೆ ಕೆಲ ನ್ಯೂಸ್ ಪೇಪರ್ ಗಳನ್ನು ಓದಿದ್ರು. ಬೆಳಗ್ಗೆ10 ಗಂಟೆಗೆ ಸಿಸಿಬಿ ಕಚೇರಿಗೆ ಬಂದ ಸಿಸಿಬಿ ಅಧಿಕಾರಿಗಳು 10:30ಕ್ಕೆ ಮತ್ತೆ ರೆಡ್ಡಿ ವಿಚಾರಣೆ ಮಾಡಿದ್ರು.
ಇನ್ನು ಸುಮಾರು 12 ಗಂಟೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರೆಡ್ಡಿಯನ್ನ ಬಂಧಿಸಿದ್ದೇವೆ. ಇಂದು ನ್ಯಾಯದೀಶರ ಮುಂದೆ ಹಾಜರು ಪಡಿಸಲಿದ್ದೇವೆ. ಜತೆಗೆ ಆ್ಯಂಬಿಡೆಂಟ್ ಕಂಪನಿಯಿಂದ ಹಣವನ್ನ ವಸೂಲಿ ಮಾಡಿ, ಮೋಸ ಹೋದವರಿಗೆ ವಾಪಸ್ ಕೊಡಿಸ್ತೀವಿ ಅಂದ್ರು.
ವಿಚಾರಣೆ ಬಳಿಕ ಮಧ್ಯಾಹ್ನ 3.15ಕ್ಕೆ ಜನಾರ್ದನ ರೆಡ್ಡಿಯನ್ನ ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಅಲ್ಲಿಂದ ನೇರವಾಗಿ ರೆಡ್ಡಿಯನ್ನ 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಜಗದೀಶರ ಮುಂದೆ ಹಾಜರು ಪಡಿಸಿದ್ರು. ವಿಚಾರಣೆ ಮಾಡಿದ ನ್ಯಾಯಾಧೀಶರು ಜನಾರ್ದನ್ ರೆಡ್ಡಿಯನ್ನ ನವೆಂಬರ್ 24 ರ ವರಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ರು. ಇನ್ನು ನ್ಯಾಯಾಧೀಶರ ಮುಂದೆ ಹಾಜರಾದ ಸಿಸಿಬಿ ಅಧಿಕಾರಿಗಳು ರೆಡ್ಡಿಯನ್ನ ಪೊಲೀಸ್ ಕಸ್ಟಡಿಗೆ ಕೊಡುವಂತೆ ಕೇಳದೇ ಇರೋದು ಕುತೂಹಲ ಮೂಡಿಸಿದೆ.
ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್, ನ್ಯಾಯಾಧೀಶರಿಗೆ ಇಂದೇ ಜಾಮೀನು ನೀಡುವಂತೆ ಮನವಿ ನೀಡಿದ್ರು. ಮನವಿ ಆಲಿಸಿದ ನ್ಯಾಯಾಧೀಶರು ನಾಳೆ ಓಪನ್ ಕೋರ್ಟ್ ಗೆ ಬನ್ನಿ ವಿಚಾರಣೆ ಮಾಡೋಣ ಅಂತ ಹೇಳಿದ್ರು. ಬಳಿಕ ರೆಡ್ಡಿಯನ್ನ ಪೊಲೀಸ್ ಭದ್ರತೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಯಿತು.
ಇದರ ಮಧ್ಯ ಡೀಲಿಂಗ್ ಪ್ರಕರಣದಲ್ಲಿ ಜೈರಾಮ್ ಹಾಗೂ ಫೈಜಲ್ ಹೆಸರು ಕೇಳಿ ಬಂದಿದೆ. ಇಬ್ಬರನ್ನು ಕರೆಸಿ ಸಿಸಿಬಿ ಪೊಲೀಸ್ರು ವಿಚಾರಣೆ ಮಾಡಿದ್ರು. ಜತೆಗೆ ನಾಳೆ ರೆಡ್ಡಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದು ಜಾಮೀನಿಗಾಗಿ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಳ್ಳಲಿದ್ದಾರೆ. ರೆಡ್ಡಿಗೆ ನಾಳೆ ಜಾಮೀನು ಸಿಗುತ್ತೋ ಅಥವಾ ಜೈಲೇ ಗತಿಯಾಗುತ್ತೋ ಅನ್ನೋದನ್ನ ಕಾದು ನೋಡಬೇಕಿದೆ..

_ಮಂಜುನಾಥ್ ,ಕ್ರೈಂ ಬ್ಯೂರೋ, ಪವರ್ ಟಿವಿ .

LEAVE A REPLY

Please enter your comment!
Please enter your name here

Most Popular

Recent Comments