ದೇವಾಲಯಗಳೆಂದರೆ, ಸದಾ ಭಕ್ತರಿಗಾಗಿ ತೆರೆದುಕೊಂಡಿರೋ ಆಲಯಗಳು.ಆದರೆ, ಹಾಸನದ ಅಧಿದೇವತೆ ಹಾಸನಾಂಬೆಯ ಆಚರಣೆ, ವಿಧಿ ವಿಧಾನವೇ ವಿಭಿನ್ನ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರೋ ಹಾಸನಾಂಬೆ ಹಿನ್ನೆಲೆಯೇ ಒಂದು ರೋಚಕ ಕಥೆ.
ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ದುರ್ಗೆ, ಚಾಮುಂಡಿ ಸಾವಿರಾರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದರು ಎಂಬ ಐತಿಹ್ಯವಿದೆ.
ಸಪ್ತಮಾತೃಕೆಯರಲ್ಲಿ ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಈ ಮೂವರು ಹುತ್ತದ ರೂಪದಲ್ಲಿ ನೆಲೆಸಿರೋ ನೆಲೆಯೇ ಹಾಸ ನಾಂಬೆಯ ದೇಗುಲ.
ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲಸಲು ನಿರ್ಧರಿಸಿದರು. ಅವರುಗಳಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬೆ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಉಳಿದಂತೆ ಚಾಮುಂಡಿ, ವರಾಹಿ, ಇಂದ್ರಾಣಿ ಅವರು ನಗರದ ಮಧ್ಯೆ ಭಾಗದಲ್ಲಿರುವ ದೇವಿಗೆರೆಯ ಬಳಿ ನೆಲೆಸಿದಳಂತೆ.
ದೇವನೊಬ್ಬನೇ ಆದರೂ ಆದಿ ಮಹರ್ಷಿಗಳು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಒಂದಾಗಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳೇ ಸಪ್ತಮಾತೃಕೆಯರು ಅನ್ನೋ ಮಾತಿದೆ.
ಸಾಮಾನ್ಯವಾಗಿ ಗ್ರಾಮದೇವತೆಗಳಿಗೆ ವಿಗ್ರಹಗಳು ಇರೋದಿಲ್ಲ. ಹೀಗಾಗಿ ಹುತ್ತದ ರೂಪದಲ್ಲಿ ಮೂವರು ದೇವಿಯರು ನೆಲೆಗೊಂಡಿದ್ದಾರೆ. ದೇವಾಲಯದ ರಚನೆ ಸಾಧಾರಣವಾಗಿದೆ, ಕಲ್ಲಿನ ಮಂಟಪದೋಪಾದಿಯಲ್ಲಿ. ಇಲ್ಲಿ ಶಿಲ್ಪಕಲೆ ಇಲ್ಲ. ರಕ್ಷಣೆ ದೃಷ್ಟಿಯಿಂದ ದೇವಾಲಯ ಕಟ್ಟಲಾಗಿತ್ತು. ದೇವಿಯ ಬಗ್ಗೆ ಜನರು ಅಪಾರ ಭಕ್ತಿ ಇಟ್ಟಿದ್ದರು. ಮೂವರು ದೇವಿಯರಿದ್ದರೂ ಹಾಸನಾಂಬೆ ಅಂತಲೇ ಹಿಂದಿನಿಂದಲೂ ಕರೆಯೋದು ವಾಡಿಕೆ. ಆದರೆ, ಮೂರೂ ದೇವತೆಯರ ದೈವಿ ಅಂಶ ಹೆಚ್ಚು, ಪ್ರಭಾವವೂ ಹೆಚ್ಚು ಅಂತಾರೆ ಬಲ್ಲವರು.
ಇತಿಹಾಸ ಏನೇಳುತ್ತೆ ?
ಆದಿಶಕ್ತಿ ಸ್ವರೂಪಿಣಿ, ಮಾತೃ ಸ್ವರೂಪಿಣಿಯಾಗಿರುವ ಹಾಸನಾಂಬೆ ಸಿಂಹಾಸನಾಪುರಿಯ ಅಧಿದೇವತೆ- ಭವತಾರಿಣಿ, ಅಸುರ ಸಂಹಾರಿಣಿ ಅಂತೆಲ್ಲಾ ಕರೆಸಿಕೊಂಡಿದ್ದಾಳೆ. ಬೇಡಿದ ವರಕೊಡುವ ಶಕ್ತಿದೇವತೆಯಾಗಿ ಜನಮಾನಸದಲ್ಲಿ ಹಚ್ಚ ಹಸುರಾಗಿದ್ದಾಳೆ.
ಕ್ರಿ.ಶ.12 ನೇ ಶತಮಾನದಲ್ಲಿ ಚೋಳರ ಅರಸ, ಪಾಳೆಗಾರ ಕೃಷ್ಣಪ್ಪನಾಯಕ ಚನ್ನಪಟ್ಟಣದಲ್ಲಿ ಕೋಟೆಯೊಂದನ್ನು ಕಟ್ಟಿದ್ದ. ಅವನ ನಂತರ ಬಂದ ಸಂಜೀವನಾಯಕ ಕಾರ್ಯನಿಮಿತ್ತ ಹೊರಗಡೆ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದಿತು.
ಇದು ಅಪ ಶಕುನವೆಂದು ಭಾವಿಸಿದ ಅರಸ, ಪ್ರಯಾಣವನ್ನು ರದ್ದುಗೊಳಿಸಲು ನಿರ್ಧರಿಸಿ ನಿರಾಶನಾಗಿ ಕುಳಿತ. ಈ ವೇಳೆ ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ ಹಾಸನಾಂಬೆ, ನಾನಿರುವ ಈ ಸ್ಥಳದಲ್ಲಿ ದೇಗುಲ ವೊಂದನ್ನು ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಅಂದಳಂತೆ. ದೇವಿಯ ಆದೇಶದ ಮೇರೆಗೆ ಪಾಳೆಗಾರ ಕೃಷ್ಣಪ್ಪ ನಾಯಕ ಮಂದಿರ ಕಟ್ಟಿಸದನೆಂಬುದು ಇತಿಹಾಸ.
ಹಾಸನಾಂಬೆಯಿಂದ ಹಾಸನ ಅನ್ನೋ ಹೆಸರು ಬಂತು :
ಹಾಸನಾಂಬೆ ದೇವತೆಯಿಂದಲೇ ಹಾಸನಕ್ಕೆ ಆ ಹೆಸರು ಬಂದಿದೆ ಅಂತಲೂ ಹೇಳಲಾಗುತ್ತಿದೆ. ಸಪ್ತಮಾತೃಕೆಯರು ಸದಾ ನಗುವ ದೇವರರಾಗಿದ್ದಾರೆ. ಹೀಗಾಗಿ ನಸು ನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ ಎಂದೂ ನಂಬಲಾಗಿದೆ.
ಇನ್ನೊಂದು ಐತಿಹ್ಯದ ಪ್ರಕಾರ, ಮಹಾಭಾರತದ ಕಾಲದಲ್ಲಿ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿ ಎಂದು ಹೆಸರಿತ್ತು. ನಂತರ ಸಿಂಹಾಸನ ಪುರ ಆಡು ಮಾತಿನಿಂದ ಹಾಸನ ಎಂದಾಗಿದೆ ಅಂತಲೂ ಹೇಳುತ್ತಾರೆ.
ಹಾಸನ ಒಂದು ದೊಡ್ಡ ಕಾಡಂತೆ. ಇಲ್ಲಿಗೆಪಕ್ಕದ ಪಟ್ಟಣವಾದ ಚನ್ನಪಟ್ಟಣದ ದನಗಳೆಲ್ಲಾ ಬಂದು ಮೇಯುತ್ತಿದ್ದವಂತೆ. ಆ ಹಸುಗಳಲ್ಲಿ ಒಂದು ಹಸು ಪ್ರತಿದಿನ ಸಂಜೆ, ಕಾಡಿನ ಒಂದು ಹುತ್ತದ ಮೇಲೆ ಹಾಲು ಸುರಿಸುತ್ತಿತ್ತಂತೆ. ಮನೆಯಲ್ಲಿ ಕರೆದರೆ ಹಾಲು ಬದಲು ಬರೀ ರಕ್ಷ ಬರುತ್ತಿತ್ತಂತೆ. ಪ್ರತಿ ದಿನ ಯಾರು ಹಾಲು ಕರೆದುಕೊಳ್ಳುತ್ತಿದ್ದಾರೆಂಬ ಅನುಮಾನದಿಂದ ಗಮನಿಸಿದಾಗ ವಾಸ್ತವ ಸಂಗತಿ ತಿಳಿದು,ಈ ವಿಷಯವನ್ನು ಪಾಳೆಗಾರ ಕೃಷ್ಣಪ್ಪನಾಯಕನಿಗೆ ತಿಳಿಸಿದರಂತೆ. ಆಗ ಇದೇನು ಅಶುಭ ಅಂತ ಚಿಂತೆಯಲ್ಲಿದ್ದಾಗ ದೇವಿಯು ಆತನ ಕನಸಲ್ಲಿ ಬಂದು, ಇಲ್ಲಿ ಒಂದು ಕೋಟೆ ಕಟ್ಟುವಂತೆ ಹೇಳಿದಾಗ ಆತ ಒಂದು ಕೋಟೆ ಕಟ್ಟಿಸಿದನು. ಹಸುವು ಹಾಲು ಸೂಸುತ್ತಿದ್ದರಿಂದ ಆ ಸ್ಥಳವನ್ನು ಹಸುವಿನ ಕೋಟೆ. ಹಸನಕೋಟೆ, ಹಾಸನ ಕೋಟೆ ನಂತರ ಹಾಸನ ಎಂಬ ಹೆಸರು ಬಂದಿದೆ ಅನ್ನೋ ಕಥೆಯೂ ಇದೆ.
ಹಾಸನಾಂಬ ಇದ್ದ ಕೋಟೆಯ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು ವಾಸವಿದ್ದರು. ಇವರು ಹಾಸನಾಂಬೆಯನ್ನು ಹಸನ್ ಬೀ ಎಂದು ಕರೆಯುತ್ತಿದ್ದರು. ಹೀಗಾಗಿ ಇದು ಮುಸ್ಲಿಂ ದೇವತೆ ಎಂದೂ ಹೇಳುತ್ತಾರೆ.
ಇವರು ಹೇಳುವಂತೆ ಸೊಸೆಯೊಬ್ಬಳು ಅತ್ತೆಯ ಕಾಟ ತಾಳಲಾರದೇ ದೇವಾಲಯದ ಒಳ ಹೋಗಿ ಬಾಗಿಲು ಮುಚ್ಚಿಕೊಂಡು ಅಲ್ಲೇ ಲೀನವಾದಳು.1 ವರ್ಷದ ಬಳಿಕ ಬಾಗಿಲು ತೆರೆದಾಗ ಅವಳ ಸುತ್ತಲೂ ಹುತ್ತ ಬೆಳೆದಿತ್ತು. ಜೊತೆಗೆ ಒಂದು ದೀಪ ಸಹ ಉರಿಯುತ್ತಿತ್ತು. ಆ ಸೊಸೆಯೇ ದೇವತೆಯಾದಳು. ಅವಳೇ ಹಸನ್ ಬೀ ಅನ್ನೋ ನಂಬಿಕೆ ಇದೆ.
ಹಸನ್ ಬೀ ಯ ಸಮಾಧಿ ಒಳಗಡೆ ಇದೆ ಅನ್ನೋ ನಂಬಿಕೆ ಒಂದೆಡೆಯಾದ್ರೆ ಈ ಹಸನ್ ಬೀ ಎಂಬ ಪದ ಕಾಲದ ರಭಸಕ್ಕೆ ಸಿಲುಕಿ ಹಾಸನ್ ಬೀ, ಹಾಸನ ಬೀ, ಹಸನಬಿ, ಹಾಸನಾಂಬೆ ನಂತರ ಹಾಸನ ಆಗಿರಬಹುದು ಎಂದೂ ಹೇಳಲಾಗಿದೆ.