ಬರೋಬ್ಬರಿ 14 ವರ್ಷದ ನಂತ್ರ ಗುರು ದೇವೇಗೌಡರು ಮತ್ತು ಶಿಷ್ಯ ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ನಡೆದ ಮೈತ್ರಿ ಸರ್ಕಾರದ ಸುದ್ದಿಗೋಷ್ಠಿ ಈ ಐತಿಹಾಸಿಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ , ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಸಚಿವ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
”ಮೈತ್ರಿ ಸರ್ಕಾರದ ಯಶಸ್ಸಿಗಾಗಿ ಸುದ್ದಿಗೋಷ್ಠಿ ಮಾಡ್ತಿದ್ದೇವೆ. ಉಪಚುನಾವಣೆಯಲ್ಲಿ ಜ್ಯಾತ್ಯಾತೀತ ವ್ಯವಸ್ಥೆಗಾಗಿ ಶ್ರಮಿಸ್ತೀವಿ. ಕೇಂದ್ರ ಸರ್ಕಾರ ಜನತೆಗೆ ಸಾಕಷ್ಟು ಸಂಕಷ್ಟ ನೀಡಿದೆ” ಅಂತ ಈ ವೇಳೆ ದೇವೇಗೌಡ್ರು ಹೇಳಿದ್ರು.
ಉಪಚುನಾವಣೆಯಲ್ಲಿ ಜಾತಿವಾದದ ವ್ಯವಸ್ಥೆಗೆ ಅಂತ್ಯ ಕಾಣಿಸ್ಬೇಕಿದೆ.ಇದು ಅದರ ಪೀಠಿಕೆ ಅಂತ ಹೇಳಿದ ಗೌಡ್ರು, ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೀವಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.
ಜನತೆಯ ಕ್ಷಮೆ : ಇದೇ ವೇಳೆ ದೇವೇಗೌಡ್ರು ಜನತೆಯ ಕ್ಷಮೆ ಕೂಡ ಯಾಚಿಸಿದ್ದಾರೆ. ‘ನಾವು ಹಿಂದೆ ಏನೇ ತಪ್ಪು ಮಾಡಿದ್ರೂ ಅದನ್ನು ಕ್ಷಮಿಸಿ ಬಿಡಿ ಅಂತ ಮತದಾರರಲ್ಲಿ ಕೇಳಿಕೊಂಡಿದ್ದಾರೆ. ಇಲ್ಲಿರೋ ಎಲ್ರಿಗಿಂತ ನಾನು ಹಿರಿಯ. ಅದಕ್ಕೆ ತಕ್ಕಂತೆ ನಾನು ನಡೆದುಕೊಳ್ಬೇಕು. ಹಳೆಯದನ್ನು ಮರೆತು ಹೋರಾಡ್ತೀವಿ. ಮಾತಾಡಿ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೀವಿ ಅಂತಲೂ ಹೇಳಿದ್ದಾರೆ.
ಬಿಜೆಪಿಯನ್ನು ಸೋಲಿಸ್ತೀವಿ : ಗುರು ದೇವೇಗೌಡರ ಬಳಿಕ ಮಾತಾಡಿದ ಶಿಷ್ಯ ಮಾಜಿ ಸಿಎಂ ಸಿದ್ದರಾಮಯ್ಯ , ” ನಮ್ಮ ಉದ್ದೇಶವನ್ನು ದೇವೇಗೌಡರು ಹೇಳಿದ್ದಾರೆ. ಐದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನಾವು ಎದುರಿಸುತ್ತಿದ್ದೇವೆ. ಜ್ಯಾತ್ಯತೀತ ಪಕ್ಷಗಳು ಒಂದಾಗಿ ಕೋಮುವಾದಿ ಬಿಜೆಪಿಯನ್ನು ಸೋಲಿಸ್ತೀವಿ ಎಂದರು. ಅಷ್ಟೇ ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯನ್ನೂ ಒಟ್ಟಾಗಿ ಎದುರಿಸುತ್ತೀವಿ ಅಂದಿದ್ದಾರೆ.