1999, ಭಾರತದ ಇತಿಹಾಸದಲ್ಲಿ ಯಾವತ್ತೂ ಮರೆಯಲಾಗದ ವರ್ಷ. ಇತ್ತ ಸ್ನೇಹ ಹಸ್ತ ಚಾಚುತ್ತಲೇ ಅತ್ತ ಕುತಂತ್ರ ಹೆಣೆಯುತ್ತಾ ಕಾರ್ಗಿಲ್ ಎಂಬ ಮಹಾಯುದ್ಧಕ್ಕೆ ಕಾರಣವಾಗಿತ್ತು ಪಾಕಿಸ್ತಾನ. ಕಾಲ್ ಕೆರೆದುಕೊಂಡು ಬಂದ ಪಾಕಿಸ್ತಾನಕ್ಕೆ ಭಾರತೀಯ ಯೋಧರು ದಿಟ್ಟ ಉತ್ತರವನ್ನು ನೀಡಿದ್ರು.
ಕಾರ್ಗಿಲ್ ಯುದ್ಧದಲ್ಲಿ ನಮ್ಮ ಭಾರತವೇನೋ ವಿಜಯ ಸಾಧಿಸಿತು. ಆದ್ರೆ, ಈ ವಿಜಯದ ಹಿಂದೆ ಅದೆಷ್ಟೋ ವೀರಯೋಧರು ಪ್ರಾಣತೆತ್ತಿದ್ರು. ಲೆಕ್ಕವಿಲ್ಲದಷ್ಟು ಸೈನಿಕರು ಕೈ-ಕಾಲು ಕಳೆದುಕೊಂಡ್ರು. ದೇಶಕ್ಕಾಗಿ ಹೋರಾಡಿದ ಮಹಾನ್ ಸೈನಿಕರ ಸಾಲಿನಲ್ಲಿ ನಮ್ಮ ಕರ್ನಾಟಕದ ಅನೇಕರು ಇದ್ದಾರೆ. ಅದ್ರಲ್ಲಿ ಅಚ್ಚಳಿಯದ ಹೆಸರು ನವೀನ್ ನಾಗಪ್ಪ.
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ ಧೀರ ಈ ನಮ್ಮ ಹೆಮ್ಮೆಯ ಕ್ಯಾಪ್ಟನ್ ನವೀನ್ ನಾಗಪ್ಪ. ಭಾರತೀಯ ಸೇನೆಯ ಜಮ್ಮು-ಕಾಶ್ಮೀರದ 13ನೇ ಬೆಟಾಲಿಯನ್ ನ ಯೋಧ. ಆಗಿನ್ನೂ ನವೀನ್ ಸೇನೆಗೆ ಹೊಸಬರು. ಬಹುಶಃ ಇನ್ನೂ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದರಷ್ಟೇ. ಅಷ್ಟರಲ್ಲಾಗಲೇ ಕಾರ್ಗಿಲ್ ಯುದ್ಧ ಕಹಳೆ ಮೊಳಗಿತ್ತು.
ನವೀನ್ ನಾಗಪ್ಪ ಅವರಿಗೆ ಮುಷ್ಕೋ ಕಣಿವೆ ಕಡೆಗೆ ಇಂಡಿಯನ್ ಬಂಕರ್ ಗಳ ರೆಸ್ಪಾನ್ಸಿಬಿಲಿಟಿ ನೀಡಲಾಗಿತ್ತು. 120 ಸೈನಿಕರನ್ನು ಮುನ್ನಡೆಸುವ ಹೊಣೆ ಇವರದ್ದು. ಇಂಥಾ ದೊಡ್ಡ ಜವಾಬ್ದಾರಿಯನ್ನು ಹೊರುವಾಗ ನವೀನ್ ಅವರಿಗೆ ಕೇವಲ 25 ವರ್ಷ.
ಆ ಚಿಕ್ಕ ವಯಸ್ಸಿನಲ್ಲೂ ತಮ್ಮ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ರು. ಯುದ್ಧಕ್ಕೆ ಹೊರಡುವ ಮುನ್ನ ತನ್ನ ಪಡೆಯ 120 ಸೈನಿಕರನ್ನು ನಾಗಪ್ಪ ಹುರಿದುಂಬಿಸಿದ ರೀತಿ ತಿಳಿದ್ರೆ ನೀವು ಖಂಡಿತಾ ಶಹಬ್ಬಾಸ್ ಅಂತೀರಿ.
“ನಿಮ್ಮಲ್ಲಿ ಯಾರೊಬ್ಬರಿಗೂ ಏನಾಗಲೂ ನಾನು ಬಿಡಲ್ಲ. ನನ್ನ ಬಲಿ ಕೊಟ್ಟಾದ್ರೂ ನಿಮ್ಮನ್ನು ಕಾಪಾಡುತ್ತೇನೆ. ಯಾವ ಸಂದರ್ಭದಲ್ಲಿಯೂ ನಾನು ಓಡಿ ಹೋಗಲ್ಲ. ಯುದ್ಧದಲ್ಲಿ ಸತ್ತರೆ ಗುಂಡು ನನ್ನ ಎದೆಯೊಳಗೆ ಇರುತ್ತದೆಯೇ ವಿನಃ ಬೆನ್ನಿನಲ್ಲಿ ಅಲ್ಲ. ನಂಗೆ ಅನುಭವ ಕಮ್ಮಿ ಇರ್ಬಹುದು. ಆದ್ರೆ, ಉತ್ಸಾಹಕ್ಕೆ ಕೊರತೆ ಇಲ್ಲ. ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಹೋಗಿ, ಧ್ವಜಾರೋಹಣ ಮಾಡಿಯೇ ಹಿಂದಿರುಗೋಣ” ಅಂತ ಹೇಳಿ ಯುದ್ಧಭೂಮಿಯತ್ತ ಸೈನಿಕರನ್ನು ಕರೆದುಕೊಂಡು ಹೋದರು.
ಜುಲೈ 4 ರ ಸಂಜೆ ಸುಮಾರು 6.30. ಅತ್ಯಂತ ಕಷ್ಟವಾದ ಮತ್ತು ಮುಖ್ಯವಾದ ಪಾಯಿಂಟ್ 4857 ಟಾಸ್ಕ್ ಕಡೆಗೆ ನವೀನ್ ನಾಗಪ್ಪ ತನ್ನ ಟೀಂ ಜೊತೆ ಹೊರಟೇ ಬಿಟ್ಟರು.
ಬಾಯಾರಿದರೆ ಅಲ್ಲಿನ ಮಂಜುಗಡ್ಡೆಯನ್ನು ಕರಗಿಸಿ ಕುಡಿಯಬೇಕಿತ್ತು…! ಹಸಿವಿಗೆ ಚಾಕೊಲೇಟೇ ಊಟ-ತಿಂಡಿ…! ಎದೆಗುಂದದೆ ಎದುರಾಳಿಗಳ ಗುಂಡಿನ ದಾಳಿಯನ್ನು ಎದುರಿಸುತ್ತಾ ಮುನ್ನುಗ್ಗಿದ್ರು.
ರಾತ್ರಿ ಇಡೀ ಕಾರ್ಯಾಚರಣೆ ನಡೆಯಿತು. ಹೆಚ್ಚು ಕಮ್ಮಿ 3-4 ಬಂಕರ್ ಗಳನ್ನು ನಾಶ ಮಾಡಿ ಗೆಲುವಿನತ್ತ ಮುನ್ನುಗ್ಗುತ್ತಿರುವಾಗ ನವೀನ್ ಅವರ ಜೊತೆಗಾರ ಶ್ಯಾಮ್ ಸಿಂಗ್ ಹುತಾತ್ಮರಾದ್ರು. ಆ ಯುದ್ಧ ಭೂಮಿಯಲ್ಲಿ ಕಣ್ಣೀರಿಡಲಾದರೂ ಪುರುಸೊತ್ತು ಎಲ್ಲಿರುತ್ತೆ? ಜೊತೆಗಾರನಿಗೊಂದು ಸೆಲ್ಯುಟ್ ಹೊಡೆದು ಕಾರ್ಯಾಚರಣೆ ಮುಂದುವರೆಸಿದ್ರು.
ಜುಲೈ 4 ರಂದು ಸ್ವಲ್ಪ ತಿಂಡಿ ತಿಂದಿದ್ದು ಬಿಟ್ಟರೆ ಮತ್ತೆ ಯುದ್ಧ ಮುಗಿಯುವ ತನಕ ಖಾಲಿ ಹೊಟ್ಟೆ. ಇವರಿಗಿದ್ದುದು ಯುದ್ಧ ಗೆಲ್ಲುವ ಹಸಿವು, ಪಾಪಿ ಪಾಕಿಸ್ತಾನವನ್ನು ಸದೆಬಡಿಯುವ ಹಸಿವು ಮಾತ್ರ..!
ಜುಲೈ 6 ರಂದು ನವೀನ್ ಅವರಿಗೆ ಮೇಲಾಧಿಕಾರಿ ಒಬ್ರು ಕಾಲ್ ಮಾಡಿ, ‘ಆಹಾರ ಪೂರೈಸಬೇಕೆ’? ಅಂತ ಕೇಳಿದ್ರು. ಆಗ ನವೀನ್ ಹೇಳಿದ್ದು, “ನಮಗೆ ಯುದ್ಧ ಸಲಕರಣೆಗಳನ್ನು ಕಳುಹಿಸಿ, ಆಹಾರ ಇಲ್ಲದೇ ಇರಬಹುದು. ಯುದ್ಧ ಸಲಕರಣೆ ಇಲ್ಲದೆ ಇರಲಾಗದು” ಅಂತ..!
ಹೀಗೆ ಊಟ-ತಿಂಡಿ, ನಿದ್ರೆ ಬಿಟ್ಟು ದೇಶಕ್ಕಾಗಿ ಹೋರಾಟ ಮಾಡುತ್ತಿರುವಾಗ ಜುಲೈ 7ರಂದು ನವೀನ್ ಅವರಿದ್ದಲ್ಲಿಗೆ ಗ್ರೆನೇಡೊಂದು ಬಿತ್ತು…! ಅದು ಸಿಡಿಯಲು ಬಾಕಿ ಇದ್ದುದು ಕೇವಲ ನಾಲ್ಕೇ ನಾಲ್ಕು ಸೆಕೆಂಡ್. ಆ ಗ್ರೆನೇಡ್ ಸಿಡಿದ್ರೆ 10 ಮೀ. ಸುತ್ತಮುತ್ತ ಎಲ್ಲವೂ ಚಿಂದಿ ಚಿಂದಿ ಆಗ್ತಿತ್ತು….!
ಇದನ್ನು ಮನಗಂಡು, ತನ್ನವರ ರಕ್ಷಣೆ ಬಗ್ಗೆ ಯೋಚಿಸಿ ಒಂದೇ ಒಂದು ಸೆಕೆಂಡ್ ತಡಮಾಡದೇ ಅದನ್ನು ಎತ್ತಿಕೊಂಡ ನವೀನ್ ಎದುರಾಳಿ ಕಡೆಗೆ ಎಸೆದ್ರು…! ಆದ್ರೆ, ಗ್ರಹಚಾರಕ್ಕೆ ಅದು ಎದುರಿಗಿದ್ದ ದೊಡ್ಡ ಬಂಡೆಗೆ ತಾಗಿ ಕೆಳಕ್ಕೆ ಬಿದ್ದು, ಇವರ ಕಾಲ ಬುಡದಲ್ಲೇ ಸಿಡಿಯಿತು! ಕಾಲಿಗೆ ಗಂಭೀರ ಗಾಯವಾಯಿತು. ಆದರೂ ಏನೂ ಆಗದವರಂತೆ ಬಂದೂಕನ್ನು ಎತ್ತಿಕೊಂಡು ಫೈರಿಂಗ್ ಶುರುಮಾಡಿದ್ರು..!
ಅಷ್ಟೊತ್ತಿಗೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಬಂದು, ನವೀನ್ ಅವರಿಗೆ ಯುದ್ಧದಿಂದ ಹಿಂದೆ ಸರಿಯುವಂತೆ ಹೇಳಿದ್ರು. ಅದನ್ನು ನವೀನ್ ನಾಗಪ್ಪ ನಿರಾಕರಿಸಿ , ಹೋರಾಟ ಮುಂದುವರೆಸಿದ್ರು. ನೀವು ಹಿಂದೆ ಸರಿಯದೇ ಇದ್ದರೆ ಇಡೀ ಆಪರೇಶನ್ ನಿಲ್ಲಿಸಲು ಕರೆಕೊಡ್ತೀನಿ ಅಂತ ವಿಕ್ರಮ್ ಬಾತ್ರಾ ಹೇಳಿದಾಗ, ಯುದ್ಧ ನಿಲ್ಲಬಾರದು ನಾವು ಗೆಲ್ಲಬೇಕು ಎಂದು ನವೀನ್ ಹಿಂದೆ ತೆವಳಿದ್ರು!
ಬಂಡೆಯೊಂದಕ್ಕೆ ಬಂದು ವಾಲಿ ಕುಳಿತು, ಕಾಲಿನ ಸ್ಥಿತಿ ನೋಡಿದ್ರು! ಕಾಲು ಬಹುತೇಕ ತುಂಡಾಗಿತ್ತು..! ರಣರಂಗದಿಂದ ಕರೆದುಕೊಂಡು ಹೋಗುವಾಗ ನವೀನ್ ನೋವನ್ನು ತಡೆಯಲಾಗದೆ , ಕಿರುಚಾಡದಂತೆ ತಮ್ಮ ಯೂನಿಫಾರಂ ಕಚ್ಚಿಹಿಡಿದಿದ್ರು!
ರಕ್ತ ನೀರಿನಂತೆ ಹರಿಯುತ್ತಿದ್ದರೂ ಯುದ್ಧದಲ್ಲಿ ಸೆಣಸುವ ಉತ್ಸಾಹ ಕುಂದಿರ್ಲಿಲ್ಲ. ” ತುಂಡಾದ ಕಾಲು ಕಳಚಿ ಬಿದ್ದರೆ, ಅದನ್ನು ಯಾರಾದ್ರೂ ಎತ್ಕೊಂಡು ಬಂದು ಡಾಕ್ಟರ್ ಹತ್ರ ಕೊಟ್ರೆ ಅವರು ಜೋಡಿಸ್ತಾರೆ. ನಾನು ಮತ್ತೆ ಯುದ್ಧ ಭೂಮಿಗೆ ಹೋಗಬಹುದು” ಎಂಬ ಯೋಚನೆಯಲ್ಲಿದ್ದರು ಅಂದ್ರೆ ಇವರ ಎದೆಗಾರಿಕೆ , ದೇಶಭಕ್ತಿ ಹೇಗಿರಬೇಡ…!?
ನಾವು ಕಲ್ಪಿಸಿಕೊಳ್ಳೋಕೂ ಆಗಲ್ಲ. ನವೀನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸರಿಯಾಗಿ ಪ್ರಜ್ಞೆ ಇರ್ಲಿಲ್ಲ. ಮರುದಿನ ಬೆಳಗ್ಗೆ ಹೆಲಿಕ್ಯಾಪ್ಟರ್ ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಅಂತ ಶ್ರೀನಗರಕ್ಕೆ ಕರೆದುಕೊಂಡು ಹೋಗುವಾಗ ಪಾಯಿಂಟ್ 4875ರಲ್ಲಿ ತ್ರಿವರ್ಣಧ್ವಜ ಹಾರುತ್ತಿರೋದನ್ನು ಕಂಡು ಆ ರಕ್ತಸಿಕ್ತ ಪರಿಸ್ಥಿತಿ, ನೋವಿನಲ್ಲೇ ಎದ್ದು ನಿಂತು ಸೆಲ್ಯೂಟ್ ಹೊಡೆದು, ಇನ್ನು ನನ್ನ ಪ್ರಾಣ ಹೋದ್ರೂ ಪರವಾಗಿಲ್ಲ ಅಂತ ನಿಟ್ಟುಸಿರು ಬಿಟ್ಟರು.
ದೆಹಲಿಯಲ್ಲಿ ಬರೋಬ್ಬರಿ 21 ತಿಂಗಳು ಆಸ್ಪತ್ರೆಯಲ್ಲಿದ್ದರು. ಒಂದಲ್ಲ, ಎರಡಲ್ಲ 8 ಶಸ್ತ್ರಚಿಕಿತ್ಸೆಗಳಿಗೆ ಒಳಗಾದರು. 6 ತಿಂಗಳು ಹಾಸಿಗೆಯಲ್ಲೇ ಕಾಲ ಕಳೆದರು! ಇಷ್ಟಾದರೂ ಕಂಪ್ಲೀಟ್ ಗುಣಮುಖರಾಗಿರ್ಲಿಲ್ಲ. ಜೀವನಪರ್ಯಂತ ಊರುಗೋಲಿಲ್ಲದೆ ನಡೆಯಲು ಸಾಧ್ಯವೇ ಇಲ್ಲ ಅಂತ ಡಾಕ್ಟರ್ ಹೇಳಿದ್ರು. ಧೃತಿಗೆಡದ ನವೀನ್ ನಾಗಪ್ಪ ಇವತ್ತು ಊರುಗೋಲಿನ ಸಹಾಯ ಇಲ್ಲದೆ ನಡೆದಾಡುತ್ತಿದ್ದಾರೆ. ಇದು ದೇಶ ಕಾಯುವ ನವೀನ್ ಮತ್ತು ಇವರಂಥಾ ವೀರ ಯೋಧರಿಗೆ ಮಾತ್ರ ಸಾಧ್ಯ! ದೇಶ ಕಾಯೋ ಯೋಧರಿಗೊಂದು ಸಲಾಂ…
-ಶಶಿಧರ್ ಎಸ್. ದೋಣಿಹಕ್ಲು